Saturday, 25th May 2019

Recent News

ಅನುದಾನ ವಿಚಾರದಲ್ಲಿ ಸಚಿವ ರೇವಣ್ಣಗೆ ಟಾಂಗ್ ಕೊಟ್ಟ ಜಮೀರ್ ಅಹ್ಮದ್

-ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದ್ರೆ ಆಹಾರ ಇಲಾಖೆ ಆಯುಕ್ತರೇ ಸಸ್ಪೆಂಡ್

ಬೆಂಗಳೂರು: ಲೋಕೋಪಯೋಗಿ ಸಚಿವ ರೇವಣ್ಣ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೇಲೆ ಒತ್ತಡ ಹಾಕಿ ಹೆಚ್ಚು ಅನುದಾನ ಪಡೆಯುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಇಂದು ಸಚಿವರು ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಮೀರ್ ಅಹಮದ್ ಅವರು, ಮೂರು ಜಿಲ್ಲೆಗೆ ಮಾತ್ರ ಅನುದಾನ ಬಿಡುಗಡೆ ಎನ್ನುವುದು ಸರಿಯಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲಾ ಜಿಲ್ಲೆಗಳಿಗೂ ಸಮಾನ ಅನುದಾನ ಹಂಚಿಕೆ ಆಗುತ್ತಿದೆ. ಸಚಿವ ರೇವಣ್ಣ ಅವರಿಗೆ ಹಾಸನ ಜಿಲ್ಲೆಯ ಮೇಲೆ ಹೆಚ್ಚು ಪ್ರೀತಿ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಒತ್ತಡ ಹೇರಿ ಹೆಚ್ಚಿನ ಅನುದಾನ ಪಡೆಯುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

ನಾನು ಕೂಡಾ ಹಾವೇರಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಬೇಕು ಅಂತ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದೇನೆ. ಈ ಕುರಿತು ಮುಂದಿನ ಕ್ಯಾಬಿನೆಟ್‍ನಲ್ಲಿ ವಿಷಯ ಪ್ರಸ್ತಾಪ ಮಾಡುತ್ತೇನೆ. ರೇವಣ್ಣ ಅವರಿಗೆ ಮಾತ್ರ ಹೆಚ್ಚು ಅನುದಾನ ಕೊಡುತ್ತಾರೆ ಎನ್ನುವ ಆರೋಪ ಸುಳ್ಳು ಎಂದು ತಿಳಿಸಿದರು.

ಎಲ್ಲಾ ಜಿಲ್ಲೆಗಳ ಸಭೆ ಮಾಡಿದ್ದು, ಅನಿಲ ಭಾಗ್ಯ ಯೋಜನೆಗೆ 30 ಲಕ್ಷ ಜನ ಫಲಾನುಭವಿಗಳನ್ನು ಗುರುತಿಸಲಾಗಿದೆ. ಅದರಲ್ಲಿ 1 ಲಕ್ಷ ಜನರಿಗೆ ಯೋಜನೆ ತಲುಪಿಸಲು ಸಿದ್ಧತೆ ನಡೆದಿದೆ. ಪ್ರಧಾನಮಂತ್ರಿ ಉಜ್ವಲ್ ಯೋಜನೆ ಅಡಿ ಬಂದಿದ್ದ 31 ಸಾವಿರ ಅರ್ಜಿಗಳನ್ನು ಕೈಬಿಡಲಾಗಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ 15ರೊಳಗಾಗಿ 1 ಲಕ್ಷ ಜನ ಫಲಾನುಭವಿಗಳಿಗೆ ಅನಿಲ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ನ್ಯಾಯಬೆಲೆ ಅಂಗಡಿ ಬಯೋಮೆಟ್ರಿಕ್ ಅಳವಡಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಲಿಖಿತ ದಾಖಲೆ ಕೊಡುವ ವ್ಯವಸ್ಥೆಯಿಂದ ಅಧಿಕಾರಿಗಳು ಸುಮ್ಮನೆ ಬಿಲ್ ಮಾಡುತ್ತಿದ್ದರು. ಬಯೋಮೆಟ್ರಿಕ್ ಅಳವಡಿಸುವುದರಿಂದ ಇಲಾಖೆಗೆ 580 ಕೋಟಿ ರೂ. ಉಳಿತಾಯವಾಗಲಿದೆ. ಈ ನಿಟ್ಟಿನಲ್ಲಿ ಬಿಎಸ್‍ಎನ್‍ಎಲ್ ಸೇರಿದಂತೆ ಹಲವು ಖಾಸಗಿ ಕಂಪನಿಗಳಿಂದ ಬಯೋಮೆಟ್ರಿಕ್ ಅಳವಡಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಪ್ರಾಯೋಗಿಕವಾಗಿ ಶಿವಮೊಗ್ಗದ ಖಾಸಗಿ ಕಂಪನಿಗೆ ಬಯೋಮೆಟ್ರಿಕ್ ಅಳವಡಿಕೆ ಮಾಡಲು ಅವಕಾಶ ನೀಡಲಾಗಿದೆ. ಇಲ್ಲಿ ಯಶಸ್ವಿಯಾದರೆ ಹಂತ ಹಂತವಾಗಿ ರಾಜ್ಯದಲ್ಲಿ ಪ್ರತಿಯೊಂದು ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಬಿಪಿಎಲ್ ಕಾರ್ಡ್ ಗಾಗಿ 6.26 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಸುಮಾರು 1 ಕೋಟಿ ಬಿಪಿಎಲ್ ಕಾರ್ಡ್ ಚಾಲ್ತಿಯಲ್ಲಿವೆ. ನಿತ್ಯವೂ ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಿಪಿಎಲ್ ಹೊಂದಿರುವ ಶೇ. 99 ಜನರು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಕೊಂಡಿದ್ದಾರೆ. ಇದರಿಂದಾಗಿ ಆಧಾರ್ ಲಿಂಕ್ ಆಗಿರುವ 4.5 ಲಕ್ಷ ಕಾರ್ಡ್ ಗಳು ರದ್ದಾಗಲಿವೆ ಎಂದು ಸಚಿವರು ಹೇಳಿದರು.

ನ್ಯಾಯಬೆಲೆ ಅಂಗಡಿಯಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ಪಡೆಯುವಂತಿಲ್ಲ. ಈ ಕುರಿತು ಅಧಿಕಾರಿಗಳಿಗೂ ಸಭೆಯಲ್ಲಿ ಸೂಚನೆ ನೀಡಿದ್ದೇನೆ. ಒಂದು ವೇಳೆ ಇಂತಹ ಪ್ರಕರಣಗಳು ಕಂಡುಬಂದರೆ ಆಹಾರ ಇಲಾಖೆ ಅಧಿಕಾರಿಯನ್ನೇ ಅಮಾನತು ಮಾಡುತ್ತೇವೆ ಅಂತ ಎಚ್ಚರಿಕೆ ನೀಡಿರುವೆ. ನಾನು ಕೂಡ ಆಗಾಗ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Leave a Reply

Your email address will not be published. Required fields are marked *