Connect with us

Districts

ನಮ್ಮದು ಸಮ್ಮಿಶ್ರ ಸರ್ಕಾರ: ಸಚಿವ ವಿ.ಸೋಮಣ್ಣ

Published

on

ಮೈಸೂರು: ಸಿಎಂ ಬಿ.ಎಸ್.ಯಡಿಯೂರಪ್ಪನವರದ್ದು ಸಮ್ಮಿಶ್ರ ಸರ್ಕಾರ ಎಂದು ಸಚಿವ ವಿ.ಸೋಮಣ್ಣ ಮೈಸೂರಿನ ವೀರನಹೊಸಳ್ಳಿಯಲ್ಲಿ ಹೇಳಿದ್ದಾರೆ.

ಮೈಸೂರು ದಸರಾ ಗಜಪಡೆಗೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮಾತನಾಡಿದ ಸಚಿವರು, ಇದೊಂದು ಸಮ್ಮಿಶ್ರ ಸರ್ಕಾರ, ಯಾರಿಗೆ ಏನು ಸಿಗಬೇಕೋ ಅದು ಚಾಮುಂಡೇಶ್ವರಿ ತಾಯಿಯ ಆಶೀರ್ವಾದದಿಂದ ಸಿಗಲಿದೆ. ಇಂದು ಬೆಳಗ್ಗೆ ಮುಖ್ಯಮಂತ್ರಿಗಳು ಆರ್.ಅಶೋಕ್ ಅವರೊಂದಿಗೆ ತೆರಳಿ ರಾಮದಾಸ್ ಜೊತೆ ಗಜಪಡೆಗೆ ಪೂಜೆ ಸಲ್ಲಿಸಲು ಸೂಚಿಸಿದ್ದರು. ಸಿಎಂ ಸೂಚನೆಗೆ ಗಜಪಡೆಗೆ ಪೂಜೆ ಸಲ್ಲಿಸಿ, ಚಾಲನೆ ನೀಡಲಾಗಿದೆ ಎಂದರು.

ಸದ್ಯ 17 ಜನ ಸಚಿವರಾಗಿದ್ದೇವೆ. ಇನ್ನು 16 ಸ್ಥಾನಗಳು ಖಾಲಿ ಉಳಿದಿವೆ. ಹಾಗಾಗಿ ಯಾರಿಗೆ ಆದ್ಯತೆ ಕೊಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ರಾಮದಾಸ್ ಸಹ ಹಿರಿಯರು ಅನ್ನೋದಕ್ಕಿಂತ ನಮ್ಮ ಜೊತೆ ಕೆಲಸ ಮಾಡಿದ ನಾಯಕರು. ತಾಯಿಯ ಆಶೀರ್ವಾದದಿಂದ ಎಲ್ಲರಿಗೂ ಒಳ್ಳೆಯದು ಆಗಲಿ ಎಂದು ಅಸಮಾಧಾನಿತ ಶಾಸಕರಿಗೆ ಭರವಸೆ ನೀಡಿದರು.

ಮೊದಲ ತಂಡವಾಗಿ ಐದು ಅನೆಗಳು ಮೈಸೂರಿಗೆ ಪ್ರಯಾಣ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕ ರಾಮದಾಸ್ ಕೂಡ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಬರಬೇಕಾದ ನೂತನ ಸಚಿವರಾದ ಆರ್. ಅಶೋಕ್ ಮತ್ತು ವಿ. ಸೋಮಣ್ಣ ಬರುವುದನ್ನು ಒಂದು ನಿಮಿಷವೂ ಕಾಯದೇ ಪುಷ್ಪಾರ್ಚಾನೆ ಮಾಡಿದ ಶಾಸಕ ಎಸ್.ಎ ರಾಮದಾಸ್, ಯಾರನ್ನು ಕಾಯುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳಿಗೆ ಹೇಳಿ ಪುಷ್ಪಾರ್ಚಾನೆ ಮಾಡಿದರು. ಎಲ್ಲ ಕಾರ್ಯಕ್ರಮಗಳು ಮುಗಿದ ಮೇಲೆ ತಡವಾಗಿ ಬಂದ ಸಚಿವಾರದ ಆರ್. ಅಶೋಕ್ ಮತ್ತು ವಿ. ಸೋಮಣ್ಣ ಅವರು ಮತ್ತೊಮ್ಮೆ ಗಜಪಡೆಗೆ ಪುಷ್ಪಾರ್ಚನೆ ಮಾಡಿದರು.

ಸಾಂಪ್ರದಾಯಿಕವಾಗಿ ಪ್ರತಿ ವರ್ಷ ಜಿಲ್ಲಾ ಉಸ್ತುವಾರಿ ಸಚಿವರು ಪೂಜೆ ಸಲ್ಲಿಸಿ, ಗಜಪಯಣಕ್ಕೆ ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ದಸರಾ ಗಜಪಯಣಕ್ಕೆ ಚಾಲನೆ ನೀಡುವ ವಿಚಾರಕ್ಕೆ ಗೊಂದಲ ಶುರುವಾಗಿತ್ತು. ಯಾಕೆಂದರೆ ಪ್ರತಿ ಬಾರಿ ದಸರಾ ಗಜಪಯಣಕ್ಕೆ ಉಸ್ತವಾರಿ ಸಚಿವರು ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ಜಿಲ್ಲೆಯಿಂದ ಯಾವ ನಾಯಕರು ಸಚಿವರಾಗಿಲ್ಲ. ಅಲ್ಲದೆ ಸ್ಥಳೀಯ ಶಾಸಕರ ಬಳಿ ಚಾಲನೆ ಕೊಡಿಸೋಣ ಎಂದರೆ ಶಾಸಕರು ಕೂಡ ಅನರ್ಹರಾಗಿದ್ದಾರೆ. ಹೀಗಾಗಿ ಗಜಪಯಣಕ್ಕೆ ಚಾಲನೆ ನೀಡುವವರು ಯಾರು ಎಂಬ ಗೊಂದಲ ಎದುರಾಗಿತ್ತು. ಆದರೆ ಶಾಸಕ ರಾಮದಾಸ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.