Monday, 25th March 2019

ಹಿಂದೂಗಳ ಕಡೆಗಣನೆಯೇ ಕಾಂಗ್ರೆಸ್ ಸೋಲಿಗೆ ಕಾರಣವೆಂದ ಜೆಡಿಎಸ್- ಸಚಿವ ಖಾದರ್ ತಿರುಗೇಟು

ಮಂಗಳೂರು: ಹಿಂದೂಗಳನ್ನು ಕಡೆಗಣಿಸಿದ್ದಕ್ಕೆ ಕಾಂಗ್ರೆಸ್ ಗೆ ಸೋಲುಂಟಾಗಿದೆ ಎನ್ನುವ ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಭೋಜೇಗೌಡರ ಹೇಳಿಕೆ ಆಶ್ಚರ್ಯ ತಂದಿದೆ ಎಂದು ವಸತಿ ಹಾಗೂ ನಗರ ಪಾಲಿಕೆಗಳ ಸಚಿವರಾದ ಯು.ಟಿ. ಖಾದರ್ ಹೇಳಿದ್ದಾರೆ.

ನಗರದಲ್ಲಿ ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಭೋಜೇಗೌಡರ ಹೇಳಿಕೆ ಅಚ್ಚರಿ ತಂದಿದೆ. ಭೋಜೇಗೌಡರು ಮೂಲತಃ ನಮ್ಮ ಜಿಲ್ಲೆಯವರಲ್ಲ. ಹೀಗಾಗಿ ನಮ್ಮ ಜಿಲ್ಲೆಯ ಬಗ್ಗೆ ಅವರಿಗೆ ಗೊತ್ತಿಲ್ಲ. ಕಾಂಗ್ರೆಸ್ ನಲ್ಲಿ ಹಿಂದೂಗಳನ್ನು ಕಡೆಗಣಿಸಿಲ್ಲ. ಒಬ್ಬ ಜನಪ್ರತಿನಿಧಿಯಾಗಿ ಅವರು ಈ ಹೇಳಿಕೆ ನೀಡಬಾರದು ಎಂದು ಗರಂ ಆದ್ರು.

ಕಾಂಗ್ರೆಸ್ ಧರ್ಮದ ಆಧಾರದಲ್ಲಿ ಅಭಿವೃದ್ಧಿಯನ್ನು ಮಾಡಿಲ್ಲ. ಇಂತಹ ಹೇಳಿಕೆಗಳು ಅವರಿಗೆ ಶೋಭೆ ತರುವುದಿಲ್ಲ. ಈ ಹೇಳಿಕೆ ಅವರಿಗೆ ಕಪ್ಪು ಚುಕ್ಕೆ ತಂದಿದೆ. ಜನರ ಪರ ಕೆಲಸ ಮಾಡಿದರೆ ಮಾತ್ರ ಪಕ್ಷ ಸಂಘಟನೆಯಾಗುತ್ತದೆ ಎಂದು ಅವರು ಹೇಳಿದ್ರು.

ಭೋಜೇಗೌಡರು ಹೇಳಿದ್ದೇನು?
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನನಾಡಿದ ಭೋಜೇಗೌಡ, ಕರಾವಳಿಯಲ್ಲಿ ಹಿಂದೂಗಳನ್ನು ಕಡೆಗಣಿಸಿದ್ದಕ್ಕೆ, ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಹೀನಾಯ ಸೋಲುಂಡಿದ್ದಕ್ಕೆ ಕಾರಣ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳನ್ನು ಕಡೆಗಣಿಸಲಾಗಿದೆ. ಹಾಗಾಗಿ ಕಾಂಗ್ರೆಸ್ ಈ ಭಾಗದಲ್ಲಿ ಸೋತಿದೆ. ಆದರೆ, ಬಹುಸಂಖ್ಯಾತ ಹಿಂದೂಗಳನ್ನು ಕಡೆಗಣಿಸದಂತೆ ಜೆಡಿಎಸ್ ಮುಖಂಡರಿಗೆ ಹೇಳಿದ್ದೇನೆ. ಹಿಂದೂಗಳನ್ನು ಕಡೆಗಣಿಸಿದ್ರೆ ಸರ್ಕಾರ ಉಳಿಯಲ್ಲ. ಅಲ್ಪಸಂಖ್ಯಾತರ ವಿಶ್ವಾಸ ಗಳಿಸಿ ಹಿಂದೂಗಳನ್ನು ಕಡೆಗಣಿಸದೆ ಪಕ್ಷ ಸಂಘಟನೆ ಮಾಡುತ್ತೇವೆ ಅಂತ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Leave a Reply

Your email address will not be published. Required fields are marked *