Bengaluru City
ಅಪಘಾತಕ್ಕೀಡಾದ ವಿದ್ಯಾರ್ಥಿನಿ ಆರೋಗ್ಯ ವಿಚಾರಿಸಿದ ಸುರೇಶ್ ಕುಮಾರ್

ಬೆಂಗಳೂರು: ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ ಬರೆಯಲು ತೆರಳುವಾಗ ಕೆಂಗೇರಿ ಬಳಿ ರಸ್ತೆ ಅಪಘಾತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡು ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯ ಆರೋಗ್ಯವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ವಿಚಾರಿಸಿದರು.
ಇಂದು ನಿಮ್ಹಾನ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿ ಆರೋಗ್ಯ ವಿಚಾರಿಸಿದ್ದಾರೆ. ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾದ ಯಶಸ್ವಿನಿಗೆ ಕತ್ತಿನ ಬೆನ್ನು ಮೂಳೆಯ ಎರಡು ವರ್ಟೆಬ್ರಿಯಾಗಳು ತೀವ್ರವಾಗಿ ಘಾಸಿಗೊಳಾಗಿದ್ದು, ಎರಡು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ವಿದ್ಯಾರ್ಥಿನಿಗೆ ಅಗತ್ಯವಿರುವ ಶಸ್ತ್ರ ಚಿಕಿತ್ಸೆ ಮಾಡುವಂತೆ ಆಸ್ಪತ್ರೆಯ ನಿರ್ದೇಶಕರಿಗೆ ಸಚಿವರು ಮನವಿ ಮಾಡಿದರು.
ಇದೀಗ ನಿಮ್ಹಾನ್ಸ್ ಆಸ್ಪತ್ರೆಯಿಂದ ಹೊರಬಂದೆ.
ನಮ್ಮ ಸರಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಯಶಸ್ವಿನಿ.
ಈ ಬಾಲಕಿ ಶಿಕ್ಷಣ…
Posted by Suresh Kumar S on Monday, February 1, 2021
ಆಸ್ಪತ್ರೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕರೆಸಿದ ಸಚಿವರು, ವಿದ್ಯಾರ್ಥಿನಿಯ ಚಿಕಿತ್ಸೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತಕ್ಷಣವೇ 1 ಲಕ್ಷ ರೂ. ನೀಡಬೇಕೆಂದು ಸ್ಥಳದಲ್ಲಿಯೇ ನಿರ್ದೇಶನ ನೀಡಿದರು. ಆಸ್ಪತ್ರೆಯಿಂದಲೇ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸುರೇಶ್ ಕುಮಾರ್, ವಿದ್ಯಾರ್ಥಿನಿಯ ತಂದೆ ಸೆಕ್ಯೂರಿಟಿ ನೌಕರಿ ಮಾಡುತ್ತಿದ್ದು, ತೀವ್ರ ಬಡತನದಲ್ಲಿರುವುದರಿಂದ ಇಲಾಖೆ ವತಿಯಿಂದಲೂ ಸಾಧ್ಯವಾದಷ್ಟು ನೆರವು ನೀಡಬೇಕೆಂದು ಕೋರಿದರು. ನಗರ ಸಂಚಾರಿ ಜಂಟಿ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿದಾಗ ಅವರೂ ಸಹ ಯಶಸ್ವಿನಿ ಚಿಕಿತ್ಸೆಗೆ ವೈಯಕ್ತಿಕವಾಗಿ ಸಹಾಯ ಮಾಡಲು ಮುಂದೆ ಬಂದರು.
ಬಾಲಕಿಯನ್ನು ಮಾತನಾಡಿಸಿದ ಸುರೇಶ್ ಕುಮಾರ್, ಧೈರ್ಯವಾಗಿರು ಚಿಕಿತ್ಸೆ ಯಶಸ್ವಿಯಾಗಿ ನೀನು ಮೊದಲಿನಂತಾಗುತ್ತೀಯಾ. ನಿನ್ನ ಹೆಸರೇ ಯಶಸ್ವಿನಿ ಚಿಕಿತ್ಸೆಯಲ್ಲಿಯೂ ಯಶಸ್ಸು ನಿನ್ನದಾಗುತ್ತದೆ. ಯಾವುದಕ್ಕೂ ಹೆದರಬೇಡ ಎಂದು ಧೈರ್ಯ ತುಂಬಿದರು. ಬಾಲಕಿಯ ತಂದೆ ತಾಯಿಯೊಂದಿಗೂ ಮಾತನಾಡಿದ ಸಚಿವರು, ತಮ್ಮ ಮಗಳು ಚೇತರಿಸಿಕೊಂಡು ಮೊದಲಿನಂತಾಗುತ್ತಾಳೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದರು.
