Connect with us

ಕ್ಷೇತ್ರದಲ್ಲಿ ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ 1 ಲಕ್ಷ ಪರಿಹಾರ- ಎಸ್.ಟಿ.ಸೋಮಶೇಖರ್

ಕ್ಷೇತ್ರದಲ್ಲಿ ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ 1 ಲಕ್ಷ ಪರಿಹಾರ- ಎಸ್.ಟಿ.ಸೋಮಶೇಖರ್

ಬೆಂಗಳೂರು: ಕೋವಿಡ್ 19ರ ಸನ್ನಿವೇಶದಲ್ಲಿ ನನ್ನ ಕ್ಷೇತ್ರದ ಜನತೆಯ ಸೇವಕನಾಗಿ ಅವರ ಅವಶ್ಯಕತೆಗಳನ್ನು ಪೂರೈಸುವುದು ನನ್ನ ಕರ್ತವ್ಯ. ಈ ಹಿನ್ನೆಲೆಯಲ್ಲಿ ನನ್ನ ಕ್ಷೇತ್ರದಲ್ಲಿ ಕೋವಿಡ್‍ನಿಂದ ಮೃತಪಟ್ಟ ಕುಟುಂಬದವರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ಸಹಾಯಧನವನ್ನು ವೈಯುಕ್ತಿಕವಾಗಿ ನೀಡುವ ವ್ಯವಸ್ಥೆ ಮಾಡಿದ್ದೇನೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಸಹಕಾರ ಸಚಿವರೂ ಆದ ಎಸ್.ಟಿ.ಸೋಮಶೇಖರ್ ಹೇಳಿದರು.

ಕೋವಿಡ್-19 ರಿಂದ ಮೃತಪಟ್ಟ ಕುಟುಂಬಗಳಿಗೆ ತಲಾ ಒಂದು ಲಕ್ಷ ಪರಿಹಾರ ಸಹಾಯಧನ ವಿತರಣಾ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಶ್ರೀ ಕ್ಷೇತ್ರದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಯಶವಂತಪುರ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ವಾರ್ಡ್ ಹಾಗೂ ಪಂಚಾಯಿತಿ ವ್ಯಾಪ್ತಿಯ ಜನರಿಗೆ ವೈಯುಕ್ತಿಕವಾಗಿ ಪರಿಹಾರ ನೀಡುತ್ತಿದ್ದೇನೆ. ಇಂದಿನಿಂದ ನಿತ್ಯ ಒಂದೊಂದು ವಾರ್ಡ್‍ನಲ್ಲಿಯೂ ಸೋಂಕಿನಿಂದ ಮೃತಪಟ್ಟ ಕುಟುಂಬಸ್ಥರಿಗೆ ತಲಾ 1 ಲಕ್ಷ ನಗದು ವಿತರಣೆ ಮಾಡಲಾಗುವುದು. ಇಂದು ಕೆಂಗೇರಿ ವಾರ್ಡ್ 159 ರಲ್ಲಿ 27 ಕುಟುಂಬಗಳಿಗೆ ತಲಾ ಒಂದು ಲಕ್ಷ ನಗದು ಹಣ ವಿತರಣೆ ಮಾಡಿದ್ದೇವೆ. ನಾಳೆಯಿಂದ 17 ಪಂಚಾಯಿತಿ ವ್ಯಾಪ್ತಿ ಹಾಗೂ 5 ವಾರ್ಡ್‍ನ ಜನರಿಗೆ ಧನಸಹಾಯ ಮಾಡಲಾಗುವುದು ಎಂದು ತಿಳಿಸಿದರು.

ಆಸ್ಪತ್ರೆಗೆ ದಾಖಲಾದವರಿಗೂ 25, 50 ಸಾವಿರ ಸಹಾಯ
ಕ್ಷೇತ್ರದ ಜನರು ಕೋವಿಡ್ ಪರೀಕ್ಷೆಗೊಳಪಟ್ಟ ಸಂದರ್ಭದಿಂದಲೇ ನಿಗಾ ವಹಿಸಲಾಗುವುದು. ಅವರಿಗೆ ಚಿಕಿತ್ಸೆ ಅವಶ್ಯಕತೆ ಇದ್ದರೆ ಆಸ್ಪತ್ರೆಗೆ ದಾಖಲಿಸುವುದು, ಔಷಧಿ ವ್ಯವಸ್ಥೆ ಮಾಡಿಸುವುದು ಸೇರಿದಂತೆ ನಮ್ಮೆಲ್ಲ ಕಾರ್ಯಕರ್ತರು ಯೋಗಕ್ಷೇಮಗಳನ್ನು ವಿಚಾರಿಸಿಕೊಳ್ಳುತ್ತಾರೆ. ಇದಕ್ಕಾಗಿ ನಮ್ಮ 1 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಇದರಲ್ಲಿ ಪ್ರತಿದಿನ ನಿರತರಾಗಿದ್ದಾರೆ. ಬಿಬಿಎಂಪಿ ಮೂಲಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರಿಗೆ 25 ಸಾವಿರ ರೂಪಾಯಿ, ಸರ್ಕಾರಿ ಕೋಟಾ ಇಲ್ಲದೆ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತಹ ಕುಟುಂಬಗಳಿಗೆ ತುರ್ತು ಔಷಧಿಗೋಸ್ಕರ 50 ಸಾವಿರ ರೂ. ವೈಯುಕ್ತಿಕವಾಗಿ ನೀಡುತ್ತಿದ್ದೇನೆ. ಇಡೀ ಕ್ಷೇತ್ರದಲ್ಲಿ ಪಾಸಿಟಿವ್ ಬಂದಿರುವ ಸುಮಾರು 5 ಸಾವಿರ ಕುಟುಂಬದವರ ಮನೆಗಳಿಗೆ ಉಚಿತ ಸ್ಯಾನಿಟೈಸ್ ಮಾಡಿಸುತ್ತಿದ್ದೇನೆ. ಈ ಎಲ್ಲ ಮನೆಯವರು ಹೊರಗೆ ಸಂಚರಿಸಬಾರದು ಎಂಬ ನಿಟ್ಟಿನಲ್ಲಿ ದಿನಸಿ ಕಿಟ್, ಔಷಧ ಕಿಟ್ ಗಳನ್ನು ಕೊಡುವ ವ್ಯವಸ್ಥೆಯನ್ನೂ ಮಾಡಿದ್ದೇನೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಆದಿಚುಂಚನಗಿರಿ ಶ್ರೀ ಕ್ಷೇತ್ರದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕಳೆದ ಒಂದು ವರ್ಷದಿಂದ ಜಗತ್ತನ್ನೇ ಕಾಡುತ್ತಿರುವ ಕೊರೊನಾ ಮಹಾಮಾರಿ, ಇನ್ನೇನು ಹೋಯಿತು ಎಂಬ ಭಾವ ಹುಟ್ಟಿಸಿ, ಮತ್ತೀಗ ತೀವ್ರ ಸ್ವರೂಪವನ್ನು ತಾಳಿದೆ. ಈ ಬಾರಿಯ ಎರಡನೇ ಕೋವಿಡ್ ಅಲೆ ತುಂಬಾ ಭೀಕರವಾಗಿದೆ. ಇಂಥ ಕಠಿಣ ಸಂದರ್ಭದಲ್ಲಿ ಸಚಿವರಾದ ಸೋಮಶೇಖರ್ ಅವರು ಜನರಿಗೆ ವೈಯಕ್ತಿಕ ಸಹಾಯ ಮಾಡುತ್ತಿದ್ದಾರೆ. ಇದೊಂದು ಉತ್ತಮ ಕಾರ್ಯವಾಗಿದೆ ಎಂದು ತಿಳಿಸಿದರು.

ಇಂಥ ಕಷ್ಟಕರ ಸನ್ನಿವೇಶದಲ್ಲಿಯೂ ಸಹ ಜನರಿಗೆ ನಾನಿದ್ದೇನೆ, ನಿಮಗೆ ಸಹಾಯ ಮಾಡುತ್ತೇನೆ ಎಂದು ಮುಂದಾಗಿ ಜನರಿಗೆ ಆತ್ಮಸ್ಥೈರ್ಯ ಮೂಡಿಸುವ ಕೆಲಸವನ್ನು ಮಾಡುತ್ತಿರುವ ಸಚಿವ ಸೋಮಶೇಖರ್ ಅವರ ನಡೆ ಎಲ್ಲರಿಗೂ ಮಾದರಿಯಾಗಲಿ. ಜನರಿಗೆ ನಮ್ಮ ಸುತ್ತ ನಮಗೆ ಆಗುವವರು ಇದ್ದಾರೆ ಎಂಬ ಭಾವನೆ ಮೂಡಿದರೆ ಅದೆಷ್ಟೋ ನೆಮ್ಮದಿ ಸಿಗುತ್ತದೆ ಎಂದು ತಿಳಿಸಿದರು.

ಜನಪರ ಶಾಸಕರು, ಮಂತ್ರಿಗಳೂ ಆಗಿರುವ ಎಸ್.ಟಿ.ಸೋಮಶೇಖರ್ ಅವರು ತಮ್ಮ ಕ್ಷೇತ್ರದಲ್ಲಲ್ಲದೆ, ಮೈಸೂರು ಜಿಲ್ಲೆಯಲ್ಲಿಯೂ ಉಸ್ತುವಾರಿ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲದೆ ಯಾವುದೇ ಒಂದು ಕೆಲಸ ಇರಲಿ, ಒಂದು ಫೋನ್ ಕರೆ ಮಾಡಿದರೆ ಸಾಕು ತಕ್ಷಣ ಅವರು ಸ್ಪಂದಿಸುತ್ತಾರೆ. ಇದು ಅವರ ಜನಸೇವೆಯ ಗುಣವಾಗಿದೆ. ಮುಂದೆ ಸಹ ಇನ್ನಷ್ಟು ಉತ್ತಮ ಸಮಾಜಮುಖಿ ಕಾರ್ಯಗಳು ಅವರಿಂದ ಆಗಲಿದೆ ಎಂದು ಹಾರೈಸಿದರು.

ಎಲ್ಲರೂ ವ್ಯಾಕ್ಸಿನೇಶನ್ ಮಾಡಿಸಿಕೊಳ್ಳಬೇಕು. ವ್ಯಾಕ್ಸಿನೇಶನ್ ಮಾಡಿಸಿಕೊಂಡವರಿಗೆ ಕೊರೊನಾ ಬಾಧಿಸಿದರೂ ಸಾವು-ನೋವಿನ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಆಗಾಗ ಸ್ಯಾನಿಟೈಸರ್ ನಿಂದ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸ್ವಾಮೀಜಿಗಳು ಕಿವಿಮಾತು ಹೇಳಿದರು.

ಜನತೆ ಜೊತೆ ಸ್ವತಃ ಸಮಾಲೋಚನೆ
ವಾರ್ಡ್ ವಾರು ವೈಯುಕ್ತಿಕ ಸಹಾಯ ನೀಡಲು ಚಾಲನೆ ನೀಡಿದ ಸಚಿವ ಸೋಮಶೇಖರ್, ಅಲ್ಲಿನ ನಾಗರಿಕರೊಂದಿಗೆ ಸ್ವತಃ ಸಮಾಲೋಚನೆ ನಡೆಸಿ ಕುಂದುಕೊರತೆಗಳನ್ನು ಆಲಿಸಿದರು. ಯಾವ ಕುಟುಂಬಗಳಿಗೆ ಪಡಿತರ, ಮೆಡಿಕಲ್ ಕಿಟ್ ಗಳು ಸೇರಿದಂತೆ ಸಹಾಯಧನ ಬಂದಿಲ್ಲವೋ ಅಂಥವರ ಬಗ್ಗೆಯೂ ಗಮನಹರಿಸಲಾಗುವುದು. ಜನತೆ ಯಾವುದೇ ಕಾರಣಕ್ಕೂ ಆತಂಕಗೊಳ್ಳುವುದು ಬೇಡ. ಜೊತೆಗೆ ಅಗತ್ಯವಿದ್ದರಷ್ಟೇ ಹೊರಗೆ ಹೋಗಬೇಕು ಎಂದು ತಿಳಿಸಿದರು.

Advertisement
Advertisement