Karnataka
ಸಿದ್ದರಾಮಯ್ಯ ಮನೆಯಿಂದ ಹಣ ತಂದು ಕೊಟ್ಟಿಲ್ಲ: ಎಸ್.ಟಿ ಸೋಮಶೇಖರ್

– ಲಾಕ್ಡೌನ್ ಸಮಯದಲ್ಲಿ 1 ಗ್ಲಾಸ್ ನೀರೂ ಕೊಟ್ಟಿಲ್ಲ
ಮೈಸೂರು: ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಶೇ.100 ರಷ್ಟು ಮುನಿರತ್ನ ಗೆಲ್ಲುತ್ತಾರೆ. ಆರ್ಆರ್ ನಗರ ಕ್ಷೇತ್ರವನ್ನು ಮುನಿರತ್ನ ಅಭಿವೃದ್ಧಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಮನೆಯಿಂದ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಕಿಡಿಕಾರಿದರು.
ನಗರದ ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಆದಾಯ ಹೆಚ್ಚಿದೆ. ಹೀಗಾಗಿ ಅಭಿವೃದ್ಧಿ ಹಣ ಬಿಡುಗಡೆಯಾಗಿದೆ. ಬಜೆಟ್ ನಲ್ಲಿ ಕೊಟ್ಟ ಹಣವನ್ನು ಮುನಿರತ್ನ ಸರಿಯಾಗಿ ಅವರ ಕ್ಷೇತ್ರಕ್ಕೆ ಬಳಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸಿದ್ದರಾಮಯ್ಯ ಅವರ ಮನೆಯಿಂದ ಹಣ ತಂದು ಕೊಟ್ಟಿಲ್ಲ. ಲಾಕ್ಡೌನ್ ಸಮಯದಲ್ಲಿ ಕಾಂಗ್ರೆಸ್ ನವರು ಒಂದು ಗ್ಲಾಸ್ ನೀರೂ ಕೊಟ್ಟಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಕನಕಪುರದಿಂದ ಬಂದವರು ಹಣ ಹಂಚಿದ್ದಾರೆ: ಮುನಿರತ್ನ
ನಮ್ಮನ್ನು ಸಿದ್ದರಾಮಯ್ಯ ಬೆಳೆಸಿಲ್ಲ, ನಾವು ಮೊದಲಿನಿಂದ ಕಾಂಗ್ರೆಸ್ ನಲ್ಲಿದ್ದೆವು. ಸಿದ್ದರಾಮಯ್ಯ ಕೊನೆಯಲ್ಲಿ ಸೇರಿದ್ದು. ನಾವೇನೂ ಸಿದ್ದರಾಮಯ್ಯನವರಿಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿಲ್ಲ. ಅವರ ಮೇಲೆ ಮುನಿಸಿಕೊಂಡು ಪಕ್ಷ ಬಿಟ್ಟಿಲ್ಲ. ಆಗ ಉಂಟಾಗಿದ್ದ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಈಗ ಒದ್ದಾಡಿದರೆ ಏನೂ ಪ್ರಯೋಜನ ಎಂದು ಸಿದ್ದರಾಮಯ್ಯ ವಿರುದ್ಧ ಎಸ್.ಟಿ ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿ ಅತಿ ಸರಳವಾಗಿ ದಸರಾ ಆಚರಿಸಲಾಗಿದ್ದು, 2.5 ಕೋಟಿ ರೂ. ವೆಚ್ಚವಾಗಿದೆ. ಸರ್ಕಾರದಿಂದ ಒಟ್ಟು 9.14 ಕೋಟಿ ರೂಪಾಯಿ ಬಿಡುಗಡೆಯಾಗಿತ್ತು. ಇದರಲ್ಲಿ 2.5 ಕೋಟಿ ರೂ. ಖರ್ಚಾಗಿದ್ದು, 7.8 ಕೋಟಿ ರೂ. ಉಳಿತಾಯವಾಗಿದೆ ಎಂದು ಎಸ್.ಟಿ.ಸೋಮಶೇಖರ್ ದಸರಾ ಲೆಕ್ಕವನ್ನು ಬಿಡುಗಡೆ ಮಾಡಿದ್ದಾರೆ.
ಮೈಸೂರು ಸರಳ ದಸರಾಗೆ 2,05,83,167 ರೂ. ಖರ್ಚಾಗಿದೆ. 23 ವಿಭಾಗಕ್ಕೆ ಜಿಲ್ಲಾಡಳಿತ ಹಣ ಖರ್ಚು ಮಾಡಿದೆ. ಅತಿ ಹೆಚ್ಚು ಎಂದರೆ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣೆ ಹಾಗೂ ಕಲಾವಿದರಿಗೆ 44 ಲಕ್ಷ ಹಣ ಖರ್ಚಾಗಿದೆ. ದಸರಾ ಆನೆಗಳ ನಿರ್ವಹಣೆಗೆ 35 ಲಕ್ಷ ರೂ., ಎರಡು ವೇದಿಕೆಗೆ 41 ಲಕ್ಷ ರೂ, ರಾಜವಂಶಸ್ಥರಿಗೆ ಗೌರವ ಧನವಾಗಿ 40 ಲಕ್ಷ ರೂ., ಶ್ರೀರಂಗಪಟ್ಟಣ ದಸರಾಗೆ 50 ಲಕ್ಷ ರೂ. ಚಾಮರಾಜನಗರ ದಸರಾಗೆ 36 ಲಕ್ಷ ರೂ. ಸೇರಿ ಒಟ್ಟು 2,91,83,167. ರೂ. ಹಣ ಖರ್ಚಾಗಿದೆ ಎಂದು ಮಾಹಿತಿ ನೀಡಿದರು.
ನಾನು ಹೊಸದಾಗಿ ಯಾವುದೇ ಖರ್ಚು ಮಾಡಿಲ್ಲ. ಜಿಲ್ಲಾಡಳಿತ ಯಾವುದಕ್ಕೆ ಎಷ್ಟು ಖರ್ಚು ಮಾಡುತ್ತಿತ್ತು ಅದನ್ನೇ ಮಾಡಿದ್ದೇವೆ. ರಾಜವಂಶಸ್ಥರಿಗೆ ಗೌರವ ಧನ ನೀಡುವುದು ಸಹ ನಾನು ಹೊಸದಾಗಿ ಆರಂಭಿಸಿಲ್ಲ. ಎಲ್ಲವನ್ನು ಹಳೆ ಸಂಪ್ರದಾಯದಂತೆ ನಡೆಸಿದ್ದೇವೆ. ದಸರಾಗೆ 10 ಕೋಟಿ ರೂ. ಬಿಡುಗಡೆ ಆಗಿತ್ತು. ನಾವೀಗ ಸರ್ಕಾರ ಬಿಡುಗಡೆ ಮಾಡಿದ್ದ ಹಣದಲ್ಲಿ ಖರ್ಚು ಮಾಡಿದ್ದೇವೆ. ಮುಡಾ ಸಹ 5 ಕೋಟಿ ರೂ. ಹಣ ನೀಡಲಿದೆ. ಬಾಕಿ ಹಣವನ್ನು ಏನು ಮಾಡಬೇಕು ಎಂದು ಸಿಎಂ ಗಮನಕ್ಕೆ ತಂದು ಕೆಲಸ ಮಾಡುತ್ತೇವೆ ಎಂದು ವಿವರಿಸಿದರು.
