Connect with us

ಕೋವಿಡ್ ಮುಕ್ತ ಮಾಡಲು ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಸಹಕಾರಿ: ಎಸ್.ಟಿ.ಸೋಮಶೇಖರ್

ಕೋವಿಡ್ ಮುಕ್ತ ಮಾಡಲು ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಸಹಕಾರಿ: ಎಸ್.ಟಿ.ಸೋಮಶೇಖರ್

ಮೈಸೂರು: ಹಳ್ಳಿಗಳನ್ನು ಕೋವಿಡ್ ಮುಕ್ತ ಮಾಡುವುದು ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿಯೇ‌ ‘ವೈದ್ಯರ ನಡೆ ಹಳ್ಳಿಯ ಕಡೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಚಾಲನೆಗೆ ತರಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ ಹಾಗೂ ಕೆ.ಆರ್.ನಗರ ವಿಧಾನ ಸಭಾದ ಕ್ಷೇತ್ರದ ಕೋವಿಡ್ ಕೇರ್ ಸೆಂಟರ್‌ಗಳಿಗೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಕೋವಿಡ್ ಮೊದಲನೇ ಅಲೆಗಿಂತ ಎರಡನೇ ಅಲೆಯು ಹೆಚ್ಚು ಪರಿಣಾಮಕಾರಿಯಾದ ಕಾರಣ ಅಪಾರ ನಷ್ಟ ಉಂಟಾಯಿತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮನೆ ಮನೆ ಸರ್ವೆಯನ್ನು ನಡೆಸಲಾಗುತ್ತಿದ್ದು, ವೈದ್ಯರ ನಡೆ ಹಳ್ಳಿಯ ಕಡೆ ಎಂಬ ವಿಶೇಷ ಕಾರ್ಯಕ್ರಮವನ್ನು ಸಹ ಜಾರಿಗೆ ತರಲಾಗಿದೆ ಎಂದರು.

ಕೋವಿಡ್ ರೋಗದ ಲಕ್ಷಣಗಳು ಕಂಡುಬಂದರೂ ಮನೆ ಮನೆ ಸರ್ವೆಗೆ ಹೋದರೆ ತಿಳಿಸುವುದಿಲ್ಲ. ಇದರಿಂದ ಯಾರೂ ಭಯ ಪಡುವ ಅವಶ್ಯಕತೆ ಇಲ್ಲ. ಕೋವಿಡ್ ಲಕ್ಷಣಗಳು ಕಂಡುಬಂದರೆ ತಿಳಿಸಿ. ಇಲ್ಲದಿದ್ದರೆ ಕೊನೆಯ ಹಂತದಲ್ಲಿ ಬಂದರೆ ಕಷ್ಟವಾಗುತ್ತದೆ. ಈಗಲೂ ಕೆಲವು ಜನರು ಕೋವಿಡ್‌ನಿಂದ ಮುಕ್ತವಾಗಲು ಮೌಢ್ಯಕ್ಕೆ ಬಿದ್ದಿದ್ದಾರೆ. ಇದರಿಂದ ಕೋವಿಡ್ ಗುಣವಾಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಶಿಲ್ಪಾನಾಗ್ ರಾಜೀನಾಮೆ ಯಾವುದೇ ಕಾರಣಕ್ಕೂ ಸ್ವೀಕಾರ ಮಾಡಲ್ಲ: ಎಸ್.ಟಿ ಸೋಮಶೇಖರ್

ಹಳ್ಳಿಗೆ ಬರುವ ವೈದ್ಯರ ತಂಡವು ಜನರ ಮನವೊಲಿಸಿ ಟೆಸ್ಟ್ ಮಾಡಿಸಬೇಕಾಗಿದೆ. ಕೋವಿಡ್ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಕೋವಿಡ್ ಅನ್ನು ನಿಯಂತ್ರಿಸುವ ಸಲುವಾಗಿ ಲಾಕ್ ಡೌನ್ ಮಾಡಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಹಿನ್ನೆಲೆಯಲ್ಲಿ ವಾರದಲ್ಲಿ ಎರಡು ದಿನ ಅಗತ್ಯ ವಸ್ತುಗಳನ್ನು ಕೊಳ್ಳಲು ಬಿಡುವು ನೀಡಲಾಗಿದೆ ಎಂದರು.

ಕೋವಿಡ್ ಬಂದ ನಂತರ ಬ್ಲ್ಯಾಕ್ ಫಂಗಸ್ ಬರುತ್ತಿದ್ದು, ಇದರ ಬಗ್ಗೆಯೂ ನಿಗಾವಹಿಸಬೇಕಾಗಿದೆ. ಇದಕ್ಕಾಗಿ ಔಷಧಿಗಳನ್ನು ಸಹ ಶೇಖರಿಸಿಕೊಳ್ಳಲಾಗಿದೆ. ಈಗಾಗಲೇ ಮೈಸೂರಿನಲ್ಲಿ ಬ್ಲ್ಯಾಕ್ ಫಂಗಸ್ ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: 12 ಕೋಟಿ ಸಿಎಸ್‍ಆರ್ ಫಂಡ್ ಖರ್ಚಿನ ಮಾಹಿತಿ ಕೇಳಿದ್ದೆ ಅಷ್ಟೇ – ರೋಹಿಣಿ ಸಿಂಧೂರಿ 

ಭಯಬೇಡ: ಯಾರೂ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಧೈರ್ಯದಿಂದ ಇರಿ. ಧೈರ್ಯವೇ ಜಯದ ಮೂಲವಾಗಿದ್ದು, ಧೈರ್ಯದಿಂದ ಎದುರಿಸಿದರೆ ಆದಷ್ಟು ಬೇಗ ಗುಣಮುಖರಾಗಬಹುದು. ವೈದ್ಯರು ಪ್ರತಿನಿತ್ಯ ಕೋವಿಡ್ ಕೇರ್ ಸೆಂಟರ್‌ಗಳಿಗೆ ಭೇಟಿ ನೀಡುವುದರ ಜೊತೆಗೆ ಕೋವಿಡ್ ಸೋಂಕಿತರಿಗೆ ಧೈರ್ಯ ತುಂಬಬೇಕು. ವೈದ್ಯರು ಜೊತೆಯಲ್ಲಿ ಇದ್ದರೆ ಅವರಿಗೂ ಒಂದು ಧೈರ್ಯ ಇರುತ್ತದೆ ಎಂದು ವೈದ್ಯರಿಗೆ ತಿಳಿಸಿದರು.

ಇದೆ ಸಂದರ್ಭದಲ್ಲಿ ಶಾಸಕರಾದ ಹೆಚ್.ಪಿ.ಮಂಜುನಾಥ್, ಕೆ.ಮಹದೇವ್, ಸಂಸದ ಪ್ರತಾಪ್ ಸಿಂಹ, ಜಿಲ್ಲಾಪಂಚಾಯತಿಯ ಸಿಇಒ ಎ.ಎಂ.ಯೋಗೀಶ್, ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ಖಾದಿ ಬೋರ್ಡ್ ಅಧ್ಯಕ್ಷ ಕೃಷ್ಣಪ್ಪ ಗೌಡ, ಅರಗು ಕಾರ್ಖಾನೆಯ ಅಧ್ಯಕ್ಷ ಫಣೀಶ್, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹದೇವಯ್ಯ, ಗ್ರಾಮಾಂತರ ಜಿಲ್ಲಾ ಬಿಜೆಪಿಯ ಅಧ್ಯಕ್ಷರಾದ ಮಂಗಳ ಸೋಮಶೇಖರ್ ಸೇರಿದಂತೆ ಇತರರು ಹಾಜರಿದ್ದರು.

Advertisement
Advertisement