Connect with us

Chitradurga

ನಾನು ಬಾಗಿನ ಅರ್ಪಿಸೋ ಕಾರ್ಯಕ್ರಮಕ್ಕೆ ಮಾತ್ರ ಸೂಚಿಸಿದ್ದೆನು: ಶ್ರೀರಾಮುಲು

Published

on

ಚಿತ್ರದುರ್ಗ: ನಾನು ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕಷ್ಟೇ ಸೂಚಿಸಿದ್ದೆನು. ಆದರೆ ಕಾರ್ಯಕರ್ತರೆಲ್ಲರೂ ಸೇರಿ ಈ ಕಾರ್ಯಕ್ರಮ ಮಾಡಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ನಾನು ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಮಾತ್ರ ಸೂಚಿಸಿದ್ದೆನು. ಕಾರ್ಯಕರ್ತರು ಎಲ್ಲರೂ ಸೇರಿ ಈ ಕಾರ್ಯಕ್ರಮ ನಡೆಸಿದ್ದಾರೆ. ಸಾಮಾಜಿಕ ಅಂತರ ಕಾಯುವಂತೆ ನಾವೇ ಗೈಡ್ ಲೈನ್ ಪಾಸ್ ಮಾಡಿದ್ದೇವೆ. ಸರ್ಕಾರದ ಗೈಡ್ ಲೈನ್ ನಂತೆ ನಡೆದುಕೊಳ್ಳಲು ಜನರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದರು.

ಭ್ರಷ್ಟ ಬಿಜೆಪಿ ಸರ್ಕಾರ ಬೀಳುವುದು ಒಳಿತು ಎಂಬ ಸಿದ್ದರಾಮಯ್ಯ ಮಾತಿಗೆ ತಿರುಗೇಟು ನೀಡಿದ ಶ್ರೀರಾಮುಲು, ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯಗೆ ಗೊತ್ತಿಲ್ಲ, ಅವರ ಸರ್ಕಾರ ಕೆಡವಿದ್ದು ಅವರದ್ದೇ ಶಾಸಕರು. ಬಿಜೆಪಿ ಸರ್ಕಾರಕ್ಕೆ ಅಮಿತ್ ಶಾ, ಮೋದಿ, ನಡ್ಡಾರಂಥ ರಾಷ್ಟ್ರೀಯ ನಾಯಕರಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ರಾಜ್ಯಾಧ್ಯಕ್ಷ ನಳಿನ್ ಬದಲು ನವೀನ್ ಕುಮಾರ್ ಕಟೀಲ್ ಇದ್ದಾರೆ ಅಂದ ಶ್ರೀರಾಮುಲು, ಅವರೇನೆ ಪಲ್ಟಿ ಹೊಡೆದರೂ 3 ವರ್ಷಕಾಲ ನಮ್ಮದೇ ಸರ್ಕಾರ ಇರುತ್ತೆ. ಕಾಂಗ್ರೆಸ್ಸಿನವರಿಗೆ ಏನೂ ಕೆಲಸವಿಲ್ಲ, ಈ ರೀತಿ ಮಾತಾಡೋದು ಸಹಜ. ಇನ್ನೊಬ್ಬ ಮುಖ್ಯಮಂತ್ರಿ ಯಾರೂ ಇಲ್ಲ ಬಿಎಸ್ ವೈ ಸಮರ್ಥರಿದ್ದಾರೆ. ಬಿಜೆಪಿಯಲ್ಲಿ ಬೆಂಕಿ ಬಿದ್ದಾಗ ಕಾಂಗ್ರೆಸ್ ನವರು ಬರುವುದು ಬೇಕಿಲ್ಲ. ಬಿಜೆಪಿ ತತ್ವ ಸಿದ್ಧಾಂತದ ಮೂಲಕ ಬೆಳೆದ ಪಕ್ಷ. ಬೆಂಕಿ ಬಿದ್ದಂತ ವೇಳೆ ಶಾಸಕರು ಹಿರಿಯರು ಸೇರಿ ಆರಿಸುವ ಶಕ್ತಿಯಿದೆ ಎಂದು ತಿರುಗೇಟು ನೀಡಿದರು.

ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮದಲ್ಲಿ ಇಂದು ಆರೋಗ್ಯ ಸಚಿವ ಶ್ರೀರಾಮುಲು ಅದ್ಧೂರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ವೇದಾವತಿ ನದಿಗೆ ಬಾಗಿನ ಅರ್ಪಣೆಗೆ ಆಗಮಿಸಿದ್ದ ಶ್ರೀರಾಮುಲು, ಎತ್ತಿನ ಗಾಡಿ ಏರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಪಾಲಿಸದೆ ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮಾಡಿದ್ದಾರೆ.

ಸಚಿವರಿಗೆ ಸಂಸದ ಎ. ನಾರಾಯಣಸ್ವಾಮಿ, ಚಿತ್ರದುರ್ಗ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಸಹ ಸಾಥ್ ನೀಡಿದ್ದು, ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಈ ವೇಳೆ ನೂರಾರು ಜನರ ಮಧ್ಯೆ ಸಚಿವರಿಗೆ ಕಾರ್ಯಕರ್ತರು ಕ್ರೇನ್ ಮೂಲಕ ಸೇಬಿನ ಹಾರ, ಜೆಸಿಬಿ ಮೂಲಕ ಹೂವು ಹಾಕಿದ್ದಾರೆ. ಸ್ವತಃ ಸಚಿವರು ಲಾಕ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿದ್ದು, ಮಾತ್ರವಲ್ಲದೆ ಸಚಿವರ ಸಮ್ಮುಖದಲ್ಲೇ ನೂರಾರು ಜನ ಕಾನೂನನ್ನು ಮರೆತಿದ್ದಾರೆ. ಸಚಿವರ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.