Connect with us

ಡಿಸಿ ಗ್ರಾಮ ವಾಸ್ತವ್ಯಕ್ಕೆ ಮೆಚ್ಚುಗೆ- ಶಾಸಕರು, ಜನಪ್ರತಿನಿಧಿಗಳು ಭಾಗಿಯಾಗಲು ಕ್ರಮ: ಆರ್.ಅಶೋಕ್

ಡಿಸಿ ಗ್ರಾಮ ವಾಸ್ತವ್ಯಕ್ಕೆ ಮೆಚ್ಚುಗೆ- ಶಾಸಕರು, ಜನಪ್ರತಿನಿಧಿಗಳು ಭಾಗಿಯಾಗಲು ಕ್ರಮ: ಆರ್.ಅಶೋಕ್

ಹುಬ್ಬಳ್ಳಿ: ಕಂದಾಯ ಇಲಾಖೆ ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಉದ್ದೇಶದಿಂದ ಆರಂಭಿಸಲಾಗಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ವಿಧಾನ ಸಭೆ ಅಧಿವೇಶನದಲ್ಲಿ ಶಾಸಕರು ತಮ್ಮ ಕ್ಷೇತ್ರದ ಗ್ರಾಮಗಳಲ್ಲಿ ವಾಸ್ತವ್ಯ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡಲು ಆಗಮಿಸಿದ ಅವರು, ಗ್ರಾಮದ ಸಿದ್ಧಾರೂಢ ಮಠದಲ್ಲಿ ದರ್ಶನ ಪಡೆದು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮೊದಲ ಗ್ರಾಮ ವಾಸ್ತವ್ಯವನ್ನು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕೈಗೊಂಡಿದ್ದೆ, ಎರಡನೇ ವಾಸ್ತವ್ಯವನ್ನು ಮುಂಬೈ ಕರ್ನಾಟಕ ಭಾಗದ ಧಾರವಾಡ ಜಿಲ್ಲೆಯ ಛಬ್ಬಿ ಗ್ರಾಮದಲ್ಲಿ ಕೈಗೊಂಡಿದ್ದೇನೆ. ಕಾರ್ಯಕ್ರಮದಲ್ಲಿ ಜನ ಪ್ರತಿನಿಧಿಗಳು ಪಾಲ್ಗೊಳ್ಳಲು ಅಧಿಕೃತವಾಗಿ ಆಹ್ವಾನಿಸಲಾಗಿದೆ. ಅಲ್ಲದೆ ಜನ ಪ್ರತಿನಿಧಿಗಳು ಪಾಲ್ಗೊಳ್ಳಲು ಸೂಕ್ತ ನಿಯಮಗಳನ್ನು ರೂಪಿಸಲಾಗುವುದು ಎಂದರು.

ಜಿಲ್ಲಾಧಿಕಾರಿ, ಉಪವಿಭಾಧಿಕಾರಿ ಹಾಗೂ ತಹಶಿಲ್ದಾರರೆಲ್ಲರೂ ಜನರ ಸೇವಕರು. ಜನರು ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಜನ ಈ ರೀತಿ ಸರ್ಕಾರಿ ಕಚೇರಿ ಮುಂದೆ ಕೈ ಕಟ್ಟಿ ನಿಂತುಕೊಳ್ಳಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಅಧಿಕಾರಿಗಳು ಜನರ ಬಾಗಿಲಿಗೆ ಬಂದು ಕೆಲಸ ಮಾಡಿಕೊಡಿಬೇಕು ಎಂದು ಈ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದರು.

ಗ್ರಾಮ ವಾಸ್ತವ್ಯದ 15 ದಿನ ಮುಂಚಿತವಾಗಿ ಕಂದಾಯ ಇಲಾಖೆ ಅಧಿಕಾರಿಗಳು ಜನರ ಮನೆಗಳಿಗೆ ತೆರಳಿ ಸಮಸ್ಯೆಗಳ ಪಟ್ಟಿ ತಯಾರಿಸಿದ್ದಾರೆ. ಕಂದಾಯ ಇಲಾಖೆಯ ಪಿಂಚಣಿ ಹಾಗೂ ಇತರೆ ಸಮಸ್ಯೆಗಳು ಇದ್ದರೆ ಸ್ಥಳದಲ್ಲೇ ಬಗೆಹರಿಸಲಾಗುವುದು. ಜನರ ಮನೆ ಬಾಗಿಲಿಗೆ ಸರ್ಕಾರ ತಗೆದುಕೊಂಡು ಹೋಗಬೇಕಾಗಿದೆ. ಕಾಟಾಚಾರಕ್ಕೆ ‘ಬಂದ ಸಿದ್ಧ ಹೋದ ಸಿದ್ಧ’ ಎನ್ನುವಂತೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆಗಬಾರದು. ಗ್ರಾಮದಲ್ಲಿ 24 ಗಂಟೆ ಇದ್ದು, ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು. ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಕೊರೊನಾ ನಿಯಮಗಳನ್ನು ಸಹ ಪಾಲಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಸಿದ್ದನಗೌಡ ಈಶ್ವರಗೌಡ ಚಿಕ್ಕನಗೌಡ್ರ, ಬಾಲ ವಿಕಾಸ ಅಕಾಡಮಿ ಅಧ್ಯಕ್ಷ ಈರಣ್ಣ ಜಡಿ, ವಿಪತ್ತು ನಿರ್ವಹಣ ಆಯುಕ್ತ ಮನೋಜ್ ರಾಜ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಜಿ.ಪಂ.ಸಿಇಓ ಡಾ.ಬಿ.ಸುಶೀಲ್, ಉಪವಿಭಾಗಾಧಿಕಾರಿ ಗೋಪಾಲ ಕೃಷ್ಣ ಸೇರಿದಂತೆ ಮತ್ತಿತರರು ಇದ್ದರು.

Advertisement
Advertisement