Bengaluru City
ಬಿಬಿಎಂಪಿ ಚುನಾವಣೆಗೆ ಇದು ಮುನ್ನುಡಿ, ಬಿಜೆಪಿ ಗೆಲ್ಲಲಿದೆ – ಅಶೋಕ್

– ಕಾಂಗ್ರೆಸ್ನದ್ದು ಮನೆಯೊಂದು ಮೂರು ಬಾಗಿಲು
ಬೆಂಗಳೂರು: ಕಾಂಗ್ರೆಸ್ನದ್ದು ಮನೆಯೊಂದು ಮೂರು ಬಾಗಿಲು ಪರಿಸ್ಥಿತಿಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಿನ್ನೆ ಸಹ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ನಮಗೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೂರು ಪಕ್ಷದವರು ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ. ಮೂರೂ ಪಕ್ಷದವರು ಮತ ಹಾಕಿದರೆ ಗೆಲ್ಲುವುದಿಲ್ಲ, ಯಾವುದಾದರೂ ಒಂದು ಪಕ್ಷಕ್ಕೆ ಮತ ಹಾಕಿದರೆ ಮಾತ್ರ ಗೆಲ್ಲುತ್ತಾರೆ. ಮನೆಯೊಂದು ಮೂರು ಬಾಗಿಲು ಸ್ಥಿತಿ ಅವರದ್ದಾಗಿದೆ ಎಂದು ಹರಿಹಾಯ್ದಿದ್ದಾರೆ.
ಮುನಿರತ್ನ ಅವರು ಬಹುದೊಡ್ಡ ಅಂತರದಿಂದ ಗೆಲ್ಲಲಿದ್ದಾರೆ. ಇದೊಂದು ವಿರೋಚಿತ ಗೆಲುವು ಆಗಲಿದೆ. ಡಿ.ಕೆ.ಶಿವಕುಮಾರ್ ಅವರು ಆರ್.ಆರ್.ನಗರ ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದರು. ನಾನು ಸಹ ಅವರ ವಿರುದ್ಧ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸಿದ್ದೆ. ಇದೀಗ ಬಹುದೊಡ್ಡ ಅಂತರದಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಸುಮಾರು 12 ದಿನ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ಚುನಾವಣೆ ಕೆಲಸ ಮಾಡಿದ್ದೇವೆ. ಇದೀಗ ಭರ್ಜರಿ ಗೆಲುವು ದಾಖಲಿಸುತ್ತಿದ್ದೇವೆ. ಆರ್ಆರ್ ನಗರ ಕ್ಷೇತ್ರದ ಉಸ್ತುವಾರಿಯನ್ನು ಸಿಎಂ ನನಗೆ ನೀಡಿದ್ದರು. ನಾನು ಎರಡು ಬಾರಿ ಶಾಸಕನಾಗಿದ್ದರಿಂದ ಆರ್ಆರ್ ನಗರದ ಜನರ ನಾಡಿಮಿಡಿತ ಗೊತ್ತಿತ್ತು. 35 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಮೊದಲಿಂದಲೂ ಹೇಳಿದ್ದೆ. ಈಗಿನ ಟ್ರೆಂಡ್ ನೋಡಿದರೆ 35 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇವೆ. ಈ ಚುನಾವಣೆ ಮಹಾನಗರಪಾಲಿಕೆ ಚುನಾವಣೆಗೆ ಮುನ್ನುಡಿಯಾಗಲಿದೆ. ಮಹಾನಗರ ಪಾಲಿಕೆ ಚುನಾವಣೆಯನ್ನ ಬಿಜೆಪಿಯೇ ಗೆಲ್ಲಲಿದೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಆರ್ಆರ್ ನಗರ ಚುನಾವಣೆ ಗೆಲ್ಲುತ್ತಿರುವುದು ಖುಷಿ ತಂದಿದೆ. ಶಿರಾದಲ್ಲೂ ಸಹ ನಾವೇ ಮುಂದೇ ಇದ್ದೇವೆ. ಇಡೀ ಆರ್ಆರ್ ನಗರದ ಮತದಾರರಿಗೆ, ನಮ್ಮ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುನಿರತ್ನ ಅವರು ಮಾಡಿರುವ ಓಳ್ಳೆಯ ಕೆಲಸಗಳು, ಅಭಿವೃದ್ಧಿ ನಮಗೆ ಪ್ಲಸ್ ಪಾಯಿಂಟ್ ಆಗಿದೆ. ಬೆಂಗಳೂರಿನ ಜನ ಬಿಜೆಪಿ ಜೊತೆ ಇದ್ದಾರೆ ಅನ್ನೋದಕ್ಕೆ ಇದೇ ನಿದರ್ಶನ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಯಡಿಯೂರಪ್ಪ ಸರ್ಕಾರ ಇರಬೇಕು ಎಂದು ಜನ ಬಯಸುತ್ತಿದ್ದಾರೆ.
ನಾಯಕತ್ವ ಬದಲಾವಣೆ ಕುರಿತು ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದ ಆರ್.ಆಶೋಕ್, ನಾಯಕತ್ವ ಬದಲಾಗುತ್ತೆ. ಆದರೆ ಯಡಿಯೂರಪ್ಪನವರದಲ್ಲ, ಸಿದ್ದರಾಮಯ್ಯನವರದು. ಎರಡೂ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸೋಲಿನ ಅಂಚಿಗೆ ಬಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯನವರ ನಾಯಕತ್ವ ವೇ ಪ್ರಶ್ನೆ ಯಾಗಿದೆ. ಅವರು ಯಡಿಯೂರಪ್ಪನವರಿಗೆ ಸವಾಲು ಹಾಕಿದ್ದರು. ಈಗ ಯಾರನ್ನು ತೆಗೆಯುತ್ತಾರೆ ಎಂದು ರಾಜ್ಯದ ಜನ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ಈಗ ಕಾಂಗ್ರೆಸ್ ಪಕ್ಷ ಸೋಲನುಭವಿಸುತ್ತಿದೆ. ಯಾರನ್ನ ನಾಯಕತ್ವದಿಂದ ತೆಗೆಯುತ್ತಾರೋ ಗೊತ್ತಾಗುತ್ತೆ ಎಂದು ತಿರುಗೇಟು ನೀಡಿದರು.
