Chikkaballapur
ಹಣ, ಹೆಂಡ ಹಂಚೋದನ್ನು ಕಾಂಗ್ರೆಸ್ಸಿಗೆ ಬಿಟ್ಟು ಕೊಟ್ಟಿದ್ದೇವೆ: ಆರ್ ಅಶೋಕ್

ಬೆಂಗಳೂರು: ಬಿಜೆಪಿಗೆ ಹಣ, ಹೆಂಡ ಹಂಚಿ ಗೆಲ್ಲುವ ಅವಶ್ಯಕತೆ ಇಲ್ಲ. ಅದನ್ನ ಕಾಂಗ್ರೆಸ್ಸಿಗೆ ಬಿಟ್ಟಿದ್ದೀವಿ. ಎರಡೂ ಚುನಾವಣೆಯಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗೆ ಹಣ, ಹೆಂಡ ಹಂಚಿ ಅಭ್ಯಾಸವಿದೆ. ದೇಶದಲ್ಲಿ ಮೊದಲು ಹಣ, ಹೆಂಡದ ಸಂಸ್ಕ್ರತಿ ತಂದಿದ್ದು ಕಾಂಗ್ರೆಸ್. ಅದರಿಂದಲೇ ಕಾಂಗ್ರೆಸ್ ದೇಶದಲ್ಲಿ ವಿರೋಧ ಪಕ್ಷದ ಸ್ಥಾನ ಪಡೆಯಲಾಗದ ಸ್ಥಿತಿ ತಲುಪಿದೆ. ಇಡೀ ಚುನಾವಣಾ ವ್ಯವಸ್ಥೆ ಹಾಳಾಗಿದ್ರೆ ಅದಕ್ಕೆ ಮೂಲ ಪುರುಷರು ಕಾಂಗ್ರೆಸ್ ಎಂದು ಕಿಡಿಕಾರಿದರು.
ಬಹಳ ವರ್ಷಗಳ ಹಿಂದೆಯೇ ಇವರ ಅನಾಚಾರ ಸಂಸ್ಕೃತಿ ಬಂದಿದೆ. 40-50 ವರ್ಷಗಳ ಹಿಂದೆಯೇ ಈ ಪರಂಪರೆ ಹಾಕಿದ ಪುಣ್ಯ, ಮಹಾನ್ ಪುರುಷರು ಕಾಂಗ್ರೆಸ್ಸಿಗರು. ಚುನಾವಣಾ ಫಲಿತಾಂಶದ ಬಳಿಕ ಏನು ಹೇಳಬೇಕೆಂದು ಈಗ್ಲೆ ಸಿದ್ಧರಾಗ್ತಾ ಇದ್ದಾರೆ. ನಾವು ಗ್ಯಾರಂಟಿ ಸೋಲ್ತೀವಿ ಅನ್ನೋದು ಅವರಿಗೆ ಗೊತ್ತಾಗಿದೆ. ಹೀಗಾಗಿ ಫಲಿತಾಂಶ ಬಳಿಕ ಏನಾದರೂ ಡೈಲಾಗ್ ಬೇಕಲ್ಲ. ಬಿಜೆಪಿ ಹಣ, ಹೆಂಡ ಹಂಚಿ ಗೆದ್ರು ಅಂತ ಹೇಳಿಲ್ವಾ ಅಂತ ಸಮರ್ಥನೆ ಮಾಡಿಕೊಳ್ಳಲಿಕ್ಕೆ ಹಾಗೂ ನನ್ನ ಮಾತು ಸತ್ಯ ಆಯ್ತು ಅಂತ ಸಮರ್ಥನೆ ಮಾಡಿಕೊಳ್ಕಲು ಸಿದ್ದರಾಮಯ್ಯ ಹೀಗೆ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಒಂದು ವರ್ಷದ ಸಮ್ಮಿಶ್ರ ಸರ್ಕಾರದ ಬಗ್ಗೆ ಹೇಳಿದ್ದಾರೆ. ನಿದ್ದೆ ಮಾಡ್ಲಿಕ್ಕೆ ಬಿಡಲಿಲ್ಲ, ವಿಷವನ್ನೇ ಕಕ್ಕಿದ್ದಾರೆ. ಕಾಟ ಕೊಟ್ಟು ನಮ್ಮ ಸರ್ಕಾರ ಬೀಳಿಸಿದ್ದೆ ಸಿದ್ದರಾಮಯ್ಯ, ಡಿಕೆಶಿ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ರಾಜಕೀಯದಲ್ಲಿ ವಂಚನೆ, ಬೆನ್ನಿಗೆ ಚೂರಿ ಹಾಕುವುದು ಕಾಂಗ್ರೆಸ್ ಪರಂಪರೆ. ಮುಂದಿನ ಐದು ವರ್ಷದಲ್ಲಿ ರಾಜ್ಯದಲ್ಲಾ ಕಾಂಗ್ರೆಸ್ ಇರೋಲ್ಲ, ವಿರೋಧ ಪಕ್ಷದ ಸ್ಥಾನದಲ್ಲೂ ಇರಲ್ಲ ಎಂದು ಭವಿಷ್ಯ ನುಡಿದರು.
