Tuesday, 21st January 2020

Recent News

ಫಲಿತಾಂಶದ ಬಳಿಕ ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ: ಆರ್.ಅಶೋಕ್

-ಜೆಡಿಎಸ್‍ಗೆ ಕರ್ನಾಟಕದಿಂದ ಗೇಟ್ ಪಾಸ್

ಉಡುಪಿ: ಉಪಚುನಾವಣೆ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರ ಪಡೆಯುತ್ತೇವೆ ಎಂಬ ಭ್ರಮೆಯಲ್ಲಿವೆ. ಮತ್ತೊಮ್ಮೆ ಕಾಂಗ್ರೆಸ್, ಜೆಡಿಎಸ್ ಒಂದಾಗೋದು ಕೇವಲ ಭ್ರಮೆ. ದೇವೇಗೌಡರು ಕೂಡಾ ಕಾಂಗ್ರೆಸ್ ಜೊತೆ ಹೋಗಲ್ಲ ಎಂದಿದ್ದಾರೆ ಎಂದು ಕಂದಾಯ ಸಚಿವ ಅಶೋಕ್ ಹೇಳಿದ್ದಾರೆ. ಉಡುಪಿಯ ಹೆಬ್ರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಮತ್ತು ಹೆಬ್ರಿ ಮಿನಿ ವಿಧಾನಸೌಧಕ್ಕೆ ಗುದ್ದಲಿ ಪೂಜೆ ಮಾಡಿ ಮಾತನಾಡಿದರು.

ಬಿಜೆಪಿ 14-15 ಸ್ಥಾನಗಳಲ್ಲಿ ಗೆಲ್ಲುತ್ತದೆ. ಫಲಿತಾಂಶದ ನಂತರ ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ ಎಂದಾಗುತ್ತದೆ. ಕಾಂಗ್ರೆಸ್ ನಾಯಕರನ್ನು ಮನೆಗೆ ಕಳುಹಿಸುವ ಫಲಿತಾಂಶ ನಾಳೆ ಬರುತ್ತೆ. ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನ ತ್ಯಾಗ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು. ಮೈತ್ರಿ ಸರ್ಕಾರದ ದುರಾಡಳಿತ, ಸ್ವಜನ ಪಕ್ಷಪಾತದಿಂದ ಜನರು ರೋಸಿದ್ದಾರೆ. ದೇಶದ ಜನರು ಉಪಚುನಾವಣೆ ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಹೊಸ ಹೆಜ್ಜೆ ಇಡುವ ಸುಭದ್ರ ಸರ್ಕಾರ ರಾಜ್ಯದ ಎಲ್ಲೆಡೆ ಬರುತ್ತೆ. ಸಮೀಕ್ಷೆಗಳಲ್ಲೂ ಬಿಜೆಪಿ ಗೆಲುತ್ತೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಸರ್ಕಾರ ಮುಂದುವರಿಸಲು ಮತದಾರರು ತೀರ್ಮಾನಿಸಿದ್ದಾರೆ. ಫಲಿತಾಂಶದ ನಂತರ ಜೆಡಿಎಸ್ ಗೆ ಕರ್ನಾಟಕದಿಂದ ಗೇಟ್ ಪಾಸ್ ಕೊಡಲಾಗುವುದು ಎಂದರು.

ಮಲ್ಲಿಕಾರ್ಜುನ ಖರ್ಗೆ ಸೋತಿದ್ದಾರೆ. ಕಾಂಗ್ರೆಸ್ ಎರಡು ಭಾಗವಾಗಿದೆ. ಇತ್ತ ಜೆಡಿಎಸ್ ಕೂಡಾ ಎರಡು ಭಾಗ ಆಗಿದೆ. ಎರಡೂ ಪಕ್ಷಗಳು ಒಡೆದು ನಾಲ್ಕು ಪಾರ್ಟಿ ಆಗಿರುವಾಗ ಈ ನಾಲ್ಕು ಪಾರ್ಟಿ ಒಂದಾಗೋದು ಯಾವಾಗ? ನಾಯಕನನ್ನು ಆಯ್ಕೆ ಮಾಡೋದು ಯಾವಾಗ? ಕಾಂಗ್ರೆಸ್ ಭ್ರಮಾಲೋಕದಲ್ಲಿದ್ದು, ಅವರು ಭ್ರಮಾಲೋಕದಲ್ಲೇ ಇರಲಿ ಎಂದು ಸಚಿವ ಆರ್. ಅಶೋಕ್ ಛೇಡಿಸಿದರು.

Leave a Reply

Your email address will not be published. Required fields are marked *