Monday, 19th August 2019

Recent News

ರೈತರಿಗೆ ಹೇಳುವ ಮುನ್ನ ತಾವೇ ಇಸ್ರೇಲ್ ಮಾದರಿ ಬೇಸಾಯ ಪದ್ಧತಿ ಅಳವಡಿಸಿಕೊಂಡ ಸಚಿವರು

ಮಂಡ್ಯ: ಚುನಾವಣಾ ಪ್ರಣಾಳಿಕೆನಲ್ಲಿ ಕುಮಾರಸ್ವಾಮಿಯವರು ನಾನು ಸಿಎಂ ಆದರೆ ರಾಜ್ಯದಲ್ಲಿ ಇಸ್ರೇಲ್ ಮಾದರಿ ಬೇಸಾಯ ಪದ್ಧತಿ ಜಾರಿಗೊಳಿಸೋದಾಗಿ ಘೋಷಿಸಿದ್ದರು. ಹಾಗಾಗಿ ಚುನಾವಣೆಗೂ ಮುನ್ನ ಇಸ್ರೇಲ್ ಪ್ರವಾಸ ಕೈಗೊಂಡಿದ್ದರು. ಆದರೆ ರೈತರಿಗೆ ಹೇಳುವ ಮುನ್ನ ತಾವೇ ಯಾಕೆ ಪ್ರಾಯೋಗಿಕವಾಗಿ ತಮ್ಮ ಜಮೀನಲ್ಲಿ ಅಳವಡಿಸಬಾರದು ಎಂದು ಸಚಿವರೊಬ್ಬರು ತಮ್ಮ ತೋಟದಲ್ಲಿ ಇಸ್ರೇಲ್ ಮಾದರಿಯ ಬೇಸಾಯ ಮಾಡುವ ಮೂಲಕ ಸಕ್ಸಸ್ ಕಾಣುತ್ತಿದ್ದಾರೆ.

ಇಸ್ರೇಲ್ ಮಾದರಿಯ ವ್ಯವಸಾಯ ಮಾಡಿದರೆ ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಬೆಳೆಯಬಹುದು. ಆದ್ದರಿಂದ ಇದನ್ನು ರೈತರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ನಾನು ಸಿಎಂ ಜೊತೆ ಇಸ್ರೇಲ್ ಪ್ರವಾಸ ಕೈಗೊಂಡಿದ್ದೆ. ಅಲ್ಲಿಂದ ಬಂದು ತಮ್ಮ 15 ಎಕರೆ ಜಮೀನಿಗೆ ಇಸ್ರೇಲ್ ಮಾದರಿ ಹನಿ ನೀರಾವರಿ ಅಳವಡಿಸಿಕೊಂಡಿದ್ದೇನೆ. ಮಂಡ್ಯ ಜಿಲ್ಲೆಯ ಪಾಂಡವಪುರದ ಚಿನಕುರಳಿ ಗ್ರಾಮದಲ್ಲಿ 15 ಎಕರೆ ಪ್ರದೇಶದಲ್ಲಿ ಇಸ್ರೇಲ್ ಮಾದರಿಯ ಬೇಸಾಯ ಮಾಡುತ್ತಿದ್ದು, ಇದರಲ್ಲಿ ಬಾಳೆ, ಅಡಿಕೆ, ತೊಗರಿ, ರಾಗಿ, ಕಾಫಿ ಸೇರಿದಂತೆ ಹಲವು ಬಗೆಯ ಬೆಳೆಗಳನ್ನ ಬೆಳೆದಿದ್ದು, ಉತ್ತಮ ಲಾಭ ಕಾಣುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.

ಸಚಿವ ಪುಟ್ಟರಾಜು ಅವರು ಇಸ್ರೇಲ್‍ಗೆ ಹೋಗುವ ಮುನ್ನ ಇದೇ ಭೂಮಿಯಲ್ಲಿ ಎಲ್ಲರಂತೆ ಮಾಮೂಲಾಗಿ ಬೆಳೆ ಬೆಳೆಯುತ್ತಿದ್ದರು. ಆದರೆ ಆಗ ಅವರ ಭೂಮಿಗೆ ಎಷ್ಟು ನೀರು ಪೂರೈಸಿದ್ದರೂ ಸಾಲುತ್ತಿರಲಿಲ್ಲ. ಇದಕ್ಕಾಗಿ ಅವರ ಜಮೀನಿನಲ್ಲಿ 4 ಬೋರ್‍ವೆಲ್ ಗಳಿದ್ದರೂ ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ನೀರು ಸಿಗುತ್ತಿರಲಿಲ್ಲ. ಇಸ್ರೇಲ್ ಪ್ರವಾಸ ಮುಗಿಸಿ ಬಂದ ನಂತರ 3 ರಿಂದ 4 ಲಕ್ಷರೂ. ವೆಚ್ಚದಲ್ಲಿ ಹನಿ ನೀರಾವರಿ ವ್ಯವಸ್ಥೆ ಮಾಡಿ ಬೆಳೆ ಬೆಳೆಯುತ್ತಿದ್ದು, ಸಾಕಷ್ಟು ನೀರು ಉಳಿತಾಯವಾಗುತ್ತಿದೆ. ಬೆಳೆಗಳಿಂದ ಒಳ್ಳೆ ಲಾಭವೂ ಸಿಗುತ್ತಿದೆ. ಇದು ಇತರೇ ರೈತರ ಕಣ್ಣು ತೆರೆಸುತ್ತಿದ್ದು, ಸರ್ಕಾರದ ಸಬ್ಸಿಡಿಯಲ್ಲಿ ನಾವೂ ಈ ರೀತಿಯ ಬೇಸಾಯದ ಮಾದರಿಯನ್ನ ಅಳವಡಿಸಿಕೊಳ್ಳಲು ಯೋಚಿಸುತ್ತಿದ್ದೇವೆ ಎಂದು ರೈತ ಶಿವಕುಮಾರ್ ಹೇಳಿದ್ದಾರೆ.

ಈ ಪದ್ದತಿಯನ್ನ ಅಳವಡಿಸಿಕೊಂಡಿದ್ದೇ ಆದರೆ ಹೆಚ್ಚಿನ ಪ್ರಮಾಣದ ನೀರನ್ನ ಉಳಿಸುವುದರ ಜೊತೆಗೆ ಬೇಸಾಯದಲ್ಲೂ ಹೆಚ್ಚಿನ ಪ್ರಮಾಣದ ಲಾಭ ಕಾಣಬಹುದಾಗಿದೆ ಎಂದು ಸಚಿವ ಪುಟ್ಟರಾಜು ಹೇಳುತ್ತಾರೆ. ಸ್ವತಃ ನೀರಾವರಿ ಸಚಿವರೇ ತಮ್ಮ ಜಮೀನಿನಲ್ಲಿ ಇಸ್ರೇಲ್ ಮಾದರಿ ಬೇಸಾಯ ಮಾಡಿ ಇತರ ರೈತರಿಗೂ ಇದನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Leave a Reply

Your email address will not be published. Required fields are marked *