Tuesday, 22nd October 2019

ಸರ್ಕಾರಿ ಆದೇಶ ಉಲ್ಲಂಘಿಸಿದ ಸತ್ಯ ಹೇಳಿದ್ದಕ್ಕೆ ಪ್ರಿಯಾಂಕ್ ಖರ್ಗೆ ಮಾಧ್ಯಮಗಳ ಮೇಲೆ ಗರಂ!

ಬೆಂಗಳೂರು: ಮಾಡೋದೆಲ್ಲಾ ಮಾಡ್ಬಿಟ್ಟು ಈಗ ತಾನು ಸಂಭಾವಿತ ಎಂಬಂತೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಪೋಸು ಕೊಡುತ್ತಿದ್ದಾರೆ. ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿ ಸರ್ಕಾರ 3 ದಿನ ಶೋಕಾಚರಣೆ ಮಾಡುವಂತೆ ಆದೇಶ ಹೊರಡಿಸಿದ್ದರೂ, ಈ ಆದೇಶವನ್ನು ಉಲ್ಲಂಘಿಸಿ ಕಾರ್ಯಕ್ರಮವನ್ನು ನಡೆಸಿ ಪ್ರಿಯಾಂಕ್ ಖರ್ಗೆ ಅವರು ವಿವಾದವನ್ನು ತಾವಾಗಿಯೇ ಮೈ ಮೇಲೆ ಎಳೆದುಕೊಂಡಿದ್ದರು. ಈ ವಿಚಾರವನ್ನು ಜನರ ಗಮನಕ್ಕೆ ತಂದಿದ್ದೇ ತಪ್ಪು ಎಂಬ ಅರ್ಥದಲ್ಲಿ ಪ್ರಿಯಾಂಕ್ ಖರ್ಗೆ ಈಗ ಮಾಧ್ಯಮಗಳ ವಿರುದ್ಧವೇ ಗರಂ ಆಗಿದ್ದಾರೆ.

ವಿಕಾಸಸೌಧದಲ್ಲಿ ಟಿವಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಭಯೋತ್ಪಾದಕರು ಒಂದೇ ಗುಂಡಿಗೆ ಸಾಯಿಸುತ್ತಾರೆ. ಆದರೆ ಮಾಧ್ಯಮಗಳು ಪ್ರತಿದಿನ ಕಾಟ ಕೊಟ್ಟು ಸಾಯಿಸುತ್ತಿವೆ. ಇತ್ತೀಚಿಗೆ ನಾನು ಮಾಧ್ಯಮಗಳಿಂದ ಸಂತ್ರಸ್ತನಾಗಿದ್ದೇನೆ ಎಂದು ತಿಳಿಸಿದರು. ಇತ್ತೀಚಿಗೆ ನನಗೂ ಈ ಅನುಭವ ಆಗಿದೆ. ಮಾಧ್ಯಮಗಳು ಅರ್ಧ ಕೇಳಿಸಿಕೊಂಡು, ಅದು ತಪ್ಪೋ ಸರಿಯೋ ಎಂದು ತಿಳಿದುಕೊಳ್ಳದೇ ವರದಿ ಮಾಡುತ್ತವೆ. ದೇಶದಲ್ಲಿ ಹಲವು ಮಾಧ್ಯಮಗಳು ಸುಳ್ಳನ್ನೇ ಹೇಳುತ್ತಿವೆ. ಆದರೆ ಎಲ್ಲಾ ಮಾಧ್ಯಮಗಳು ಇದೇ ರೀತಿ ಇದೆ ಎಂದು ನಾನು ಹೇಳುತ್ತಿಲ್ಲ. ಮಾಧ್ಯಮಗಳು ಸತ್ಯದ ಪರ ವರದಿ ಮಾಡಬೇಕು. ಬಾಬಾ ಅಂಬೇಡ್ಕರ್ ಅವರ ಪ್ರಬುದ್ಧ ಭಾರತದ ಕನಸು ನನಸಾಗಲು ಮಾಧ್ಯಮಗಳ ಕಾರ್ಯವೂ ಪ್ರಮುಖವಾಗಿದೆ ಎಂದು ಹೇಳಿದ್ದಾರೆ.

ಮಾಧ್ಯಮಗಳು ಸಮಾಜದಲ್ಲಿ ಅಭಿಪ್ರಾಯ ರೂಪಿಸುವ ಸಾಧನಗಳಾಗಿದ್ದು, ಜನಪ್ರತಿನಿಧಿಗಳಾಗಿ ನಮಗೇ ಎಷ್ಟು ಜವಾಬ್ದಾರಿ ಇರುತ್ತದೋ, ಅಷ್ಟೇ ಮಾಧ್ಯಮಗಳಿಗೂ ಇದೆ. ನಮ್ಮ ಬಗ್ಗೆ ಕೆಲವೇ ಮಂದಿಗೆ ನಿಜ ಗೊತ್ತಿರುತ್ತದೆ. ಆದರೆ ಮಾಧ್ಯಮಗಳು ಜಗತ್ತಿನ ಮಂದಿಗೆ ತೋರಿಸುವ ವೇಳೆ ನೈಜ ಹೇಳಬೇಕು. ಮಾಧ್ಯಮ ವರದಿಗಳಲ್ಲಿ ಅರ್ಧ ಸತ್ಯ ಇದ್ದರೆ, ಉಳಿದ ಭಾಗ ಪ್ರಚೋದನೆ ಇರುತ್ತದೆ. ಮಾಧ್ಯಮಗಳಲ್ಲಿ ದಿನನಿತ್ಯ ವರದಿಗಳು ಬರುತ್ತಿದ್ದರೆ ಜನರಲ್ಲಿ ಅನುಮಾನ ಮೂಡುತ್ತದೆ. ಆದ್ದರಿಂದ ಮಾಧ್ಯಮಗಳು ನೈಜತೆಯ ಪರ ವರದಿ ಮಾಡಿ. ತುರ್ತು ಪರಿಸ್ಥಿತಿಯ ವೇಳೆಯೂ ಕೂಡ ಮಾಧ್ಯಮಗಳು ತಮ್ಮ ಜವಾಬ್ದಾರಿ ನಿರ್ವಹಿಸಿದ್ದವು. ಇದನ್ನು ಇತಿಹಾಸದ ಪುಟಗಳಿಂದ ತೆಗೆದು ಹಾಕಲು ಸಾಧ್ಯವಿಲ್ಲ ಎಂದರು.

ಆಗಿದ್ದೇನು?
ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ದಿನ ರಾಜ್ಯದಲ್ಲಿ ಸರ್ಕಾರ 3 ದಿನಗಳ ಕಾಲ ಶೋಕಾಚರಣೆಯ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಮಂಗಳವಾರ ಸಮಾಜ ಕಲ್ಯಾಣ ಇಲಾಖೆ ಸಮಾನತೆ ಅನ್ವೇಷಣೆ ಸಂವಿಧಾನ ಸಂಭಾಷಣೆ ಕಾರ್ಯಕ್ರಮವನ್ನು ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಆಯೋಜಿಸಿತ್ತು. ಮಂಗಳವಾರ ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ, ಲಿಂಗೈಕ್ಯರಾದ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಕಾರ್ಯಕ್ರಮವನ್ನು ಮುಂದುವರಿಸಲಾಗಿತ್ತು. ಇಡೀ ರಾಜ್ಯವೇ ಶೋಕಾಚರಣೆ ಮಾಡುತ್ತಿರುವಾಗ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ತಪ್ಪು ಎಂದು ಬಿಜೆಪಿ ಆಕ್ಷೇಪಿಸಿತ್ತು.

ಕನ್ನಯ್ಯ ಕುಮಾರ್, ಓವೈಸಿ ಅತಿಥಿಗಳಾಗಿದ್ದರಿಂದ ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಬಿಜೆಪಿ ಗೋ ಮಧುಸೂದನ್ ವಾಪಸ್ ಆಗಿದ್ದರು. ಕನ್ನಡ ಸಂಘಟನೆಗಳು ಸಹ ಪ್ರತಿಭಟನೆ ನಡೆಸಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಿಯಾಂಕ್ ಖರ್ಗೆ ವಿರುದ್ಧ ಕಟು ಟೀಕೆ ವ್ಯಕ್ತವಾಗಿತ್ತು. ಸಿದ್ದಗಂಗಾ ಶ್ರೀಗಳ ಲಿಂಗೈಕ್ಯರಾದ ದಿನವೇ ಖಾಸಗಿ ಹೋಟೆಲ್‍ನಲ್ಲಿ ಕಾರ್ಯಕ್ರಮ ನಡೆಸುವ ಅಗತ್ಯವೇನಿತ್ತು? ಸರ್ಕಾರಿ ದುಡ್ಡನ್ನು ಪೋಲು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಓದಿ: ರೆಸಾರ್ಟ್ ಗಲಾಟೆಯಿಂದ ಹತಾಶೆಗೊಂಡ ‘ಕೈ’ ನಾಯಕರು – ಮಾಧ್ಯಮಗಳ ವಿರುದ್ಧ ದಿನೇಶ್ ಗುಂಡೂರಾವ್ ಗರಂ

ಪ್ರಿಯಾಂಕ್ ಖರ್ಗೆಗೆ ಪಬ್ಲಿಕ್ ಪ್ರಶ್ನೆ:
ಮಿನಿಸ್ಟರ್ ಪ್ರಿಯಾಂಕ ಖರ್ಗೆ ಅವರಿಗೆ ನಿಮಗೆ ಮಾಧ್ಯಮಗಳ ಮೇಲೆ ಕೆಂಡದಂತಹ ಕೋಪ ಏಕೆ? ಸರ್ಕಾರಿ ಆದೇಶವನ್ನು ಉಲ್ಲಂಘಿಸಿದರೆ ನೌಕರರ ಮೇಲೆ ಕ್ರಮ ಕೈಗೊಳ್ಳಲು ಆದೇಶಿಸುವ ನೀವು ನಿಮ್ಮದೇ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದು ಸರಿಯೇ? ರಾಜ್ಯದಲ್ಲಿ ಶೋಕಾಚರಣೆ ಇದ್ದರೂ ಸರ್ಕಾರಿ ಕಾರ್ಯಕ್ರಮ ನಡೆಸಿದ್ದು ತರವೇ? ಮಾಧ್ಯಮಗಳು ನಿತ್ಯ ಕಾಟ ಕೊಟ್ಟು ಸಾಯಿಸುತ್ತಾರೆ ಎಂದರೆ ಅರ್ಥ ಏನು? ನಿಮ್ಮ ಕಣ್ಣಿಗೆ ಮಾಧ್ಯಮಗಳು ಉಗ್ರಗಾಮಿಗಳಿಗಿಂತ ಅಪಾಯಕಾರಿಯೇ? ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನಡೆಸಿದ ಕಾರ್ಯಕ್ರಮನ್ನು ಹಾಡಿ ಹೊಗಳಬೇಕಿತ್ತೇ?

ಒಂದಂತೂ ನಿಜ. ಯಾರು ತಪ್ಪು ಮಾಡುತ್ತಾರೋ, ಅವರು ಯಾರೇ ಆಗಲಿ ಅವರನ್ನು ನಾವು ಪ್ರಶ್ನೆ ಮಾಡುತ್ತೇವೆ. ತಪ್ಪು ಮಾಡಿದರೆ ತಪ್ಪು ಎಂದು ಹೇಳುತ್ತೇವೆ. ಉತ್ತಮ ಕಾರ್ಯ ಮಾಡಿದಾಗ ಈ ಹಿಂದೆಯೂ ಹೇಳಿದ್ದೇವೆ, ಮುಂದೆಯೂ ಹೇಳುತ್ತೇವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *