Bengaluru City
ಪ್ರತಿಭಟನೆಗೆ ಬಗ್ಗದ ಸರ್ಕಾರ, ನಾಳೆಯಿಂದ ರಸ್ತೆಗೆ ಇಳಿಯಲಿವೆ ಖಾಸಗಿ ಬಸ್ಗಳು

– ಸರ್ಕಾರಿ ದರದಲ್ಲಿ ಓಡಲಿದೆ ಖಾಸಗಿ ವಾಹನ
ಬೆಂಗಳೂರು: ಸಾರಿಗೆ ನೌಕರರ ಪ್ರತಿಭಟನೆಗೆ ಸರ್ಕಾರ ಮಣಿಯದೇ ಖಾಸಗಿ ವಾಹನಗಳನ್ನು ರಸ್ತೆಗೆ ಇಳಿಸಲು ಮುಂದಾಗಿದೆ.
ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ಹಗ್ಗ ಜಗ್ಗಾಟ ತಾರಕ್ಕೇರಿದ್ದು, ಇನ್ನೊಂದೆಡೆ ಪ್ರಯಾಣಿಕರು ಬಸ್ ಇಲ್ಲದೆ ಎರಡನೇ ದಿನವೂ ಪರದಾಟ ನಡೆಸಿದ್ದಾರೆ. ಇದೆಲ್ಲದ ಮಧ್ಯೆ ಇದೀಗ ಸರ್ಕಾರ ಪರ್ಯಾಯ ಮಾರ್ಗದ ಮೊರೆ ಹೋಗಿದ್ದು, ಸರ್ಕಾರಿ ದರದಲ್ಲಿ ಖಾಸಗಿ ಬಸ್ಗಳನ್ನು ಓಡಿಸಲು ನಿರ್ಧರಿಸಿದೆ.
ಈ ಕುರಿತು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು ಮಧ್ಯಮಗಳೊಂದಿಗೆ ಮಾತನಾಡಿದ್ದು, ಸಾರಿಗೆ ನೌಕರರ ಜೊತೆ ಮಾತುಕತೆ ನಡೆಸಲು ನಾನು ನಿನ್ನೆಯಿಂದಲೂ ಕಾಯುತ್ತಿದ್ದೇನೆ. ಆದರೆ ಯಾರೂ ನಮ್ಮ ಬಳಿ ಬಂದಿಲ್ಲ. ಹೋರಾಟವನ್ನು ಸಹ ಬಿಡುತ್ತಿಲ್ಲ. ಈಗಲೂ ನಾನು ಮಾತುಕತೆ ಸಿದ್ಧನಿದ್ದೇನೆ ರಾತ್ರಿ 12 ಗಂಟೆಯವರೆಗೆ ನಾನು ನೌಕರರು ಹಾಗೂ ಸಂಘಟನೆಯವರಿಗೆ ಲಭ್ಯವಿದ್ದೇನೆ. ಬನ್ನಿ ಮಾತನಾಡೋಣ ಎಂದಿದ್ದಾರೆ.
ಇದೇ ವೇಳೆ ಪರ್ಯಾಯ ಮಾರ್ಗದ ಕುರಿತು ಅವರು ಮಾತನಾಡಿದ್ದು, ನಮಗೆ ಪ್ರಯಾಣಿಕರ ಹಿತ ಮುಖ್ಯ. ಸಾರಿಗೆ ನೌಕರರು ಪಟ್ಟು ಬಿಡದಿದ್ದರೆ ಪರ್ಯಾಯ ಮಾರ್ಗವನ್ನು ಅನುಸರಿಸಬೇಕಾಗುತ್ತದೆ. ನೌಕರರು ಇದಕ್ಕೆ ಆಸ್ಪದ ನೀಡಬಾರದು ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ನಾಳೆ ಖಾಸಗಿ ವಾಹನಗಳನ್ನು ಬಳಸಿಕೊಂಡು ಸರ್ಕಾರಿ ದರದಲ್ಲಿ ಖಾಸಗಿ ವಾಹನಗಳನ್ನು ಓಡಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ನಾವು ಮಾಡಿದ್ದೇವೆ. ಮುಖ್ಯಮಂತ್ರಿಗಳ ಜೊತೆ ಸಹ ಚರ್ಚಿಸಿದ್ದೇನೆ. ಈ ಕುರಿತು ಸಿಎಂ ಪ್ರಕಟಣೆಯನ್ನು ಸಹ ಹೊರಡಿಸಿದ್ದಾರೆ. ಗೃಹ ಸಚಿವರು ಸಹ ಮಾಹಿತಿ ನೀಡಿದ್ದಾರೆ ಎಂದರು.
ಅಧಿಕಾರಿಗಳ ಜೊತೆ ನೌಕರರು ಹಾಗೂ ಸಂಘಟನೆಯವರನ್ನು ಮಾತನಾಡಿಸಿ, ಮಾತುಕತೆಗೆ ಆಹ್ವಾನಿಸಲು ಬೆಳಗ್ಗೆಯಿಂದ ಪ್ರಯತ್ನಿಸಿದರೂ ಅವರು ಬಂದು ನಮ್ಮ ನೊತೆ ಚರ್ಚೆ ನಡೆಸಲು ಸಿದ್ಧರಿಲ್ಲ. ಸಿಎಂ ಈ ಕುರಿತು ಸ್ಪಷ್ಟವಾಗಿ ಹೇಳಿದ್ದು ಪ್ರತಿಭಟನೆ ನಿಲ್ಲಿಸಿ ಮಾತುಕತೆಗೆ ಬನ್ನಿ ಎಂದು ಕರೆದಿದ್ದಾರೆ.
ನೋಟಿಸ್ ನೀಡಿ ಪ್ರತಿಭಟನೆ ಮಾಡಿದ್ದರೆ ನಾವು ಬೇರೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ಇದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಲಿದೆ. ಕುಟುಂಬದ ಮಧ್ಯದ ಚರ್ಚೆಯನ್ನು ಹೊರಗಡೆ ತರಬಾರದು. ಪ್ರಯಾಣಿಕರು ನಮಗೆ ಶಾಪ ಹಾಕಬಾರದು. ನಿಮ್ಮೊಂದಿಗೆ ಚರ್ಚಿಸಲು ನಮಗೆ ಯಾವುದೇ ಮುಜುಗರವಿಲ್ಲ. ನಮ್ಮ ನೌಕರರು ಮಾತನಾಡಲು ಬರಬೇಕು. ನಿನ್ನೆ ಟ್ರೇಡ್ ಯೂನಿಯನ್ನವರ ಜೊತೆಗೆ ಸಹ ಚರ್ಚೆ ನಡೆಸಿದ್ದೇನೆ ಎಂದರು.
ಸಾರಿಗೆ ಸಚಿವರು ನೌಕರರಿಗಾಗಿ ಕಾದಿದ್ದು, ಇಂದು ಸಾರಿಗೆ ನೌಕರರ ಜೊತೆ ಚರ್ಚೆಗೆ ಆಹ್ವಾನ ನೀಡಿದ್ದರು. ಮನೆಯಲ್ಲಿದ್ದುಕೊಂಡು ನೌಕರರಿಗಾಗಿ ಕಾಯುತ್ತಿದ್ದರು. ಖಾಸಗಿ ನಿವಾಸದಲ್ಲೇ ಕಾಲ ಕಳೆದಿದ್ದು, ತಮ್ಮೆಲ್ಲಾ ಕಾರ್ಯಕ್ರಮ ರದ್ದುಗೊಳಿಸಿ ನೌಕರರಿಗೆ ಕಾದಿದ್ದಾರೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜೊತೆ ನಿಗದಿಯಾಗಿದ್ದ ಸಭೆ ರದ್ದುಗೊಳಿಸಿ ಚರ್ಚೆಗೆ ಮುಂದಾಗಿದ್ದರು. ಆದರೆ ಸಭೆ ನಡೆದಿಲ್ಲ.
