Chikkamagaluru
ಸಿದ್ದರಾಮಯ್ಯ ಏನಾದ್ರೂ ತಿಂದು ಸಾಯ್ಲಿ, ನಮ್ಗೂ ಅದಕ್ಕೂ ಸಂಬಂಧವಿಲ್ಲ: ಈಶ್ವರಪ್ಪ

ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಜನಸೇವಕ ಸಮಾವೇಶದಲ್ಲಿ ಭಾಗಿಯಾಗಿದ್ದ ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗೋಮಾಂಸ ತಿಂತೀನಿ, ನಾಟಿ ಕೋಳಿ ತಿಂತೀನಿ ಅಂತ ಸಿದ್ದರಾಮಯ್ಯ ಹೇಳ್ತಾರೆ. ಸಿದ್ದರಾಮಯ್ಯ ಏನಾದರೂ ತಿಂದು ಸಾಯ್ಲಿ, ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಕಿಡಿಕಾರಿದ್ದಾರೆ.
ನಿಮ್ಮ ಅಪ್ಪನಿಗೆ ನೀನು ಹುಟ್ಟಿದಿಯಾ ಅನ್ನೋದಕ್ಕೆ ಸಾಕ್ಷಿ ಏನು ಎಂದು ಈಶ್ವರಪ್ಪ ಕಾಂಗ್ರೆಸ್ಸಿನವರಿಗೆ ಪ್ರಶ್ನೆ ಕೇಳಿದರು. ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದಾನೆ ಅನ್ನೋದಕ್ಕೆ ಸಾಕ್ಷಿ ಏನು ಅಂತ ಹಿಂದೊಮ್ಮೆ ಕಾಂಗ್ರೆಸ್ಸಿನವರು ನನ್ನಲ್ಲಿ ಪ್ರಶ್ನೆ ಮಾಡಿದರು. ಅವರು ರಾಮನ ಬಗ್ಗೆ ಪ್ರಶ್ನೆ ಕೇಳಿದ್ರು, ನಾನು ಅವರಲ್ಲಿ ಪ್ರಶ್ನೆ ಕೇಳುತ್ತೇನೆ. ನಿಮ್ಮ ಅಪ್ಪನಿಗೆ ನೀನು ಹುಟ್ಟಿದಿಯಾ ಅನ್ನೋದಕ್ಕೆ ಸಾಕ್ಷಿ ಏನು ಅಂತ ಕೇಳ್ತೀನಿ ಎಂದು ಹೇಳಿದರು.
ಇತ್ತ ಮೈಸೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ದನದ ಮಾಂಸ ತಿನ್ನುವ ಬಗ್ಗೆ ಶ್ಲೋಕವೇ ಇದೆ. ಅದು ನನಗೆ ನೆನಪಾಗುತ್ತಿಲ್ಲ ಆಮೇಲೆ ನೆನಪು ಆದರೆ ಹೇಳ್ತೀನಿ. ದನದ ಮಾಂಸದ ಬಗ್ಗೆ ಶ್ಲೋಕ ಬರೆಯಲಾಗಿದೆ. ಶ್ಲೋಕ ಬರೆದಿರೋದು ಯಾರಪ್ಪ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು.
ಸಂಸ್ಕೃತ ಗೊತ್ತಿರುವವರು ತಾನೇ ಶ್ಲೋಕ ಬರೆಯೋದು. ಹಾಗಾದ್ರೆ ಶ್ಲೋಕದಲ್ಲಿ ತಪ್ಪು ಇದ್ಯಾ? ಒಳ್ಳೆಯ ದನದ ಮಾಂಸ ತಿಂದರೆ ಆರೋಗ್ಯ ಚೆನ್ನಾಗಿರುತ್ತೆ ಅಂತ ಆ ಶ್ಲೋಕದಲ್ಲಿ ಹೇಳಿದ್ದಾರೆ. ಸದ್ಯಕ್ಕೆ ಆ ಶ್ಲೋಕ ನೆನಪಾಗುತ್ತಿಲ್ಲ. ಮತ್ತೆ ಮೈಸೂರಿಗೆ ಬಂದಾಗ ಆ ಶ್ಲೋಕ ಹೇಳ್ತೀನಿ. ಈಗ ಹೇಳಿದ್ರೆ ಅದನ್ನ ಕಾಂಟ್ರವರ್ಸಿ ಮಾಡಿ ಬಿಡುತ್ತಾರೆ. ನಾನು ಹೇಳಿದ ಕಾಂಟೆಸ್ಟ್ ಬಿಟ್ಟು ಬೇರೆ ಅರ್ಥದಲ್ಲಿ ಅದನ್ನ ಹೇಳಿಬಿಡುತ್ತಾರೆ. ಅದಕ್ಕೆ ಶ್ಲೋಕವನ್ನ ಸರಿಯಾಗಿಯೇ ಹೇಳ್ತೀನಿ ಎಂದು ತಿಳಿಸಿದ್ದರು.
ನಾನು ಇಲ್ಲಿಯವರೆಗೆ ಗೋಮಾಂಸ ತಿಂದಿಲ್ಲ. ತಿನ್ನಬೇಕು ಅನ್ಸಿದ್ರೆ ತಿನ್ನುತ್ತೇನೆ. ಅದನ್ನ ಕೇಳೋಕೆ ಇವರು ಯಾರು ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಮತ್ತೆ ಗೋಮಾಂಸ ಕುರಿತು ಬಿಜೆಪಿಗರನ್ನು ಕುಟುಕಿದ್ದಾರೆ. ಆಹಾರ ನನ್ನ ಹಕ್ಕು ಅದನ್ನ ಪ್ರಶ್ನಿಸೋಕೆ ಇವರ್ಯಾರು. ಯಡಿಯೂರಪ್ಪಗೆ ಗೊತ್ತಿಲ್ಲ ಹೇಳ್ತಿನಿ ಕೇಳಿ. ನಾನು ಕ್ಲೀಯರ್ ಆಗಿ ಹೇಳುತ್ತೇನೆ. ನಾನು ಈವರೆಗೆ ಗೋಮಾಂಸ ತಿಂದಿಲ್ಲ. ನಾನು ಹಂದಿ ಮಾಂಸ ತಿಂದಿಲ್ಲ. ಆದ್ರೆ ತಿನ್ನಬೇಕು ಅನ್ನಿಸಿದ್ರೆ ತಿಂತೀನಿ. ನಾನು ತಿಂದಿರೋದು ಕೋಳಿ ಮಾಂಸ, ಕುರಿ ಮಾಂಸ, ಆಡಿನ ಮಾಂಸ ಮಾತ್ರ. ಆದರೆ ನಮ್ಮ ಆಹಾರ ಪದ್ಧತಿಯನ್ನು ಪ್ರಶ್ನಿಸುವ ಹಕ್ಕು ಇಲ್ಲಿ ಯಾರಿಗೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದರು.
