Tuesday, 21st January 2020

Recent News

ಎಲ್ಲರೂ ಒಟ್ಟಾಗಿ ಒಂದಾಗಿ ಹೋಗುವ ಸಂದಿಗ್ಧತೆ ಇದೆ: ಸಚಿವ ಕೋಟ ಶ್ರೀನಿವಾಸ

ಉಡುಪಿ: ಇಂದು ಅಥವಾ ನಾಳೆ ಸಚಿವರಿಗೆ ಖಾತೆ ಹಂಚಿಕೆಯಾಗಲಿದೆ. ಸದ್ಯ ಸಚಿವರೆಲ್ಲರೂ ಜಿಲ್ಲಾ ಪ್ರವಾಸದಲ್ಲಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ, ಸಣ್ಣಪುಟ್ಟ ಗೊಂದಲಗಳು ತನ್ನಷ್ಟಕ್ಕೆ ನಿವಾರಣೆಯಾಗಿವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಚುನಾವಣೆಯಲ್ಲಿ ಗೆದ್ದವರಿಗೇ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಆರೋಪಕ್ಕೆ ಉತ್ತರಿಸಿದ ಕೋಟ, ಬೇರೆ ಬೇರೆ ಕ್ಷೇತ್ರದಲ್ಲಿ ಜನರೇ ಪ್ರತಿನಿಧಿಗಳ ಆಯ್ಕೆ ಮಾಡಿದ್ದಾರೆ. ಮೇಲ್ಮನೆಗೆ ಸಚಿವ ಸ್ಥಾನ ಕೊಡುವ ನಿಯಮಾವಳಿ ಇದೆ. ವಿಧಾನ ಪರಿಷತ್‍ನಿಂದ ನನ್ನನ್ನು ಆಯ್ಕೆ ಮಾಡಿರಬಹುದು. ಕಾರ್ಯಕರ್ತರ ಅಭಿಪ್ರಾಯ, ಇಲ್ಲಿನ ಸಮಸ್ಯೆ ಸಿಎಂ ಗಮನಕ್ಕೆ ತಂದಿದ್ದೇವೆ. ಎಲ್ಲರೂ ಒಟ್ಟಾಗಿ ಒಂದಾಗಿ ಹೋಗುವಂತೆ ಸಿಎಂ ಸೂಚನೆ ನೀಡಿದ್ದಾರೆ. ಕರಾವಳಿ ಜಿಲ್ಲೆಗಳಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಕಾಂಗ್ರೆಸ್-ಜೆಡಿಎಸ್ ರಾಜೀನಾಮೆ ಕೊಟ್ಟವರು ಬಿಜೆಪಿ ಸೇರಲಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಒಟ್ಟಾಗಿ ಒಂದಾಗಿ ಹೋಗಬೇಕಾಗಿದೆ ಎಂದರು.

ಸಿಎಂ ರಿಲೀಫ್ ಫಂಡ್ ಪಾರದರ್ಶಕವಾಗಿಯೇ ಇದೆ. ಸಲಹೆಗಳು ಬಂದ್ರೆ ಇನ್ನೂ ಚೆನ್ನಾಗಿ ಮಾಡಬಹುದು ಎಂದರು. ಪಾರದರ್ಶಕತೆ ವಿಚಾರದಲ್ಲಿ ಯಾವುದೇ ಲೋಪ ಇಲ್ಲ ಎಂದು ಸ್ಪಷ್ಟಪಡಿಸಿದರು. ದೋಸ್ತಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಎಂಬ ದೇವೇಗೌಡರ ಹೇಳಿಕೆ ನಿಜವಿರಬಹುದು. ಆದರೆ ದೇವೇಗೌಡ ಇಷ್ಟು ತಡವಾಗಿ ಯಾಕೆ ಈ ಹೇಳಿಕೆ ಕೊಟ್ಟರೋ ಗೊತ್ತಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಗೌಡರ ಹೇಳಿಕೆ ನಿಜ ಇರಬಹುದು. ಸಿದ್ದರಾಮಯ್ಯನವರೇ ಇದಕ್ಕೆ ಉತ್ತರ ಕೊಡಬೇಕು. ಮೈತ್ರಿ ಉಳಿಯುವುದಿಲ್ಲ ಎಂದು ನಾನು ಮೊದಲೇ ಹೇಳಿದ್ದೆ. ದೇವೇಗೌಡ ಬಹಳ ಹಿರಿಯ ನಾಯಕರಾಗಿರೋದರಿಂದ ಸಿದ್ದರಾಮಯ್ಯ ಇದಕ್ಕೆ ಉತ್ತರಿಸಲಿ ಎಂದರು.

ದಕ್ಷಿಣ ಕನ್ನಡ ರೀತಿಯಲ್ಲಿ ಹಳೇ ಮೈಸೂರು ಭಾಗದಲ್ಲಿ ಪಕ್ಷ ಬೆಳೆಸುತ್ತೇವೆ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಕರಾವಳಿಯಲ್ಲಿ ಬಿಜೆಪಿ ಬೂತ್ ಮಟ್ಟದಿಂದ ಗಟ್ಟಿಯಿದೆ. ಯುವಕರಲ್ಲಿ ರಾಷ್ಟ್ರಭಕ್ತಿಯಲ್ಲಿ ತೊಡಗಿಸುತ್ತೇವೆ. ವ್ಯಕ್ತಿ ಪಕ್ಷಕ್ಕಿಂತ ರಾಷ್ಟ್ರಮುಖ್ಯ ಎನ್ನುವುದು ನಮ್ಮ ಧ್ಯೇಯ ಮತ್ತು ಸೈದ್ಧಾಂತಿಕ ಧೋರಣೆ. ಸಂಘಟನೆ ಮೂಲಕ ಪಾರ್ಟಿ ಕಟ್ಟುತ್ತೇವೆ ಎನ್ನುವುದು ಬಿಟ್ಟರೆ ಬೇರೆ ಅರ್ಥ ಇಲ್ಲ ಎಂದರು.

Leave a Reply

Your email address will not be published. Required fields are marked *