Connect with us

Bengaluru City

ಅತೃಪ್ತರಿಗೆ ಖಡಕ್ ಸಂದೇಶ ರವಾನಿಸಿದ ಡಿಕೆಶಿ

Published

on

-ಇನ್ನೂ ಟೈಮ್ ಇದೆ ಬನ್ನಿ

ಬೆಂಗಳೂರು: ರಾಜೀನಾಮೆ ನೀಡಿ ಮುಂಬೈನಲ್ಲಿ ಕುಳಿತಿರುವ ಅತೃಪ್ತ ಶಾಸಕರಿಗೆ ಸಚಿವ ಡಿ.ಕೆ.ಶಿವಕುಮಾರ್ ಸರ್ಕಾರದ ಕೊನೆ ಗಳಿಗೆಯಲ್ಲಿ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.

ಸದನದಿಂದ ಹೊರಬಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ವಿಪ್ ಜಾರಿ ಮಾಡಲು ಯಾವುದೇ ತಡೆ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕಾಂಗ ನಾಯಕರು ನಿಮ್ಮ ಶಾಸಕರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ವಿಪ್ ಜಾರಿ ಮಾಡಬಹುದೆಂದು ತಿಳಿಸಿದ್ದಾರೆ. ಕಲಾಪಕ್ಕೆ ಗೈರಾಗಿರುವ ಶಾಸಕರಿಗೆ ನೋಟಿಸ್ ನೀಡಿ ಅವರನ್ನು ಅನರ್ಹಗೊಳಿಸಬೇಕೆಂದು ನಮ್ಮ ಸಿಎಲ್‍ಪಿ ನಾಯಕರು ಸ್ಪೀಕರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ಸ್ಪೀಕರ್ ಎಲ್ಲ ಶಾಸಕರಿಗೆ ನೋಟಿಸ್ ನೀಡಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ರಾಜೀನಾಮೆ ನೀಡಿರುವ ನಮ್ಮೆಲ್ಲ ಶಾಸಕರಿಗೂ ಕೊನೆಯ ಬಾರಿಗೆ ಮನವಿ ಮಾಡಿಕೊಳ್ಳುತ್ತಿದ್ದು, ನಾಳೆ ವಿಶ್ವಾಸಮತ ಯಾಚನೆಯಲ್ಲಿ ಭಾಗಿಯಾಗಬೇಕೆಂದು ಕೇಳಿಕೊಳ್ಳುತ್ತೇನೆ. ಒಂದು ವೇಳೆ ಗೈರಾದಲ್ಲಿ ಸ್ಪೀಕರ್ ನಿಮ್ಮನ್ನು ಅನರ್ಹಗೊಳಿಸಬಹುದು. ಬಿಜೆಪಿ ಅವರಿಗೆ ಅನುಕೂಲವಾಗುವ ರೀತಿಯನ್ನು ನೀವೆಲ್ಲ ನಡೆದುಕೊಳ್ಳುತ್ತಿದ್ದೀರಿ ಎಂಬುವುದು ನಮಗೆ ಗೊತ್ತಿದೆ. ನಾಳೆಯ ಕಲಾಪಕ್ಕೆ ಎಲ್ಲರೂ ಹಾಜರಾಗಿ ಅನರ್ಹತೆಯಿಂದ ತಪ್ಪಿಸಿಕೊಳ್ಳಿ ಎಂದು ಮಾಧ್ಯಮಗಳ ಮೂಲಕ ಸಂದೇಶವನ್ನು ಡಿ.ಕೆ.ಶಿವಕುಮಾರ್ ರವಾನಿಸಿದರು.