Recent News

ವಿದೇಶ ಪ್ರವಾಸದಿಂದ ಬಂದ ಡಿಕೆಶಿಯಿಂದ ಮಾರ್ಮಿಕ ಮಾತು

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನ ವಿದೇಶ ಪ್ರವಾಸ ಕೈಗೊಂಡಿದ್ದ ಕಾಂಗ್ರೆಸ್ ಸಚಿವ ಡಿ.ಕೆ.ಶಿವಕುಮಾರ್ ಇಂದು ಮರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಮುಂದೆ ಕೆಲ ಮಾರ್ಮಿಕ ಮಾತು ಹೇಳಿ ಹೊರಟಿದ್ದಾರೆ.

ವಿದೇಶ ಪ್ರವಾಸ ಮುಗಿಸಿ ಕುಟುಂಬದೊಂದಿಗೆ ರಾತ್ರಿ 12 ಗಂಟೆಗೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಮಾರ್ಮಿಕವಾಗಿ ಉತ್ತರಿಸಿದ ಸಚಿವರು, ನನಗೆಲ್ಲಾ ಗೊತ್ತಿದೆ. ಚುನಾವಣಾ ಫಲಿತಾಂಶದ ಅಪ್ಡೇಟ್ಸ್ ಎಲ್ಲಾ ಗೊತ್ತಾಗುತ್ತಿತ್ತು. ನಾನು ಮಾಹಾತ್ಮಗಾಂಧಿಯ ಅನುಯಾಯಿಯಾಗಿದ್ದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದೇನೆ. ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ. ಕಿವಿಗೆ ಹತ್ತಿ ಇಟ್ಟುಕೊಂಡಿದ್ದೇನೆ ಎಂದು ಹೇಳಿ ತೆರಳಿದರು.

ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಗೆ ಸ್ಪಷ್ಟಬಹುಮತ ಸಿಗಲಿದೆ ಚರ್ಚೆ ಇರೋವಾಗಲೇ ಮುಜುಗರದಿಂದ ತಪ್ಪಿಸಿಕೊಳ್ಳಲು ಸಚಿವರು ವಿದೇಶ ಪ್ರವಾಸ ಕೈಗೊಂಡಿದ್ದರು ಎಂಬ ಮಾತುಗಳು ರಾಜಕೀಯ ಅಂಗಳದಲ್ಲಿ ಕೇಳಿ ಬಂದಿದ್ದವು. ಚುನಾವಣೆಯ ಪ್ರಚಾರದಲ್ಲಿ ನಿರಂತರವಾಗಿ ಕೆಲಸ ಮಾಡಿದ್ದರಿಂದ ವಿಶ್ರಾಂತಿ ಹಾಗೂ ಕುಟುಂಬದ ಜೊತೆ ಕ್ವಾಲಿಟಿ ಟೈಮ್ ಕಳೆಯಲು ಸಚಿವರು ಪ್ರವಾಸ ಕೈಗೊಂಡಿದ್ದರು ಎಂದು ಮೂಲಗಳು ತಿಳಿಸಿದ್ದವು.

ರಾಜ್ಯದ 28 ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರದಲ್ಲಿ ಮಾತ್ರ ಕಾಂಗ್ರೆಸ್ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಗಿದೆ. ಸಚಿವರ ಸೋದರ ಡಿ.ಕೆ.ಸುರೇಶ್ ರಾಜ್ಯದ ಓರ್ವ ಕಾಂಗ್ರೆಸ್ ಸಂಸದರಾಗಿದ್ದಾರೆ.

Leave a Reply

Your email address will not be published. Required fields are marked *