ಬೇಕಾದ್ರೆ ನನಗೊಂದು ಕಲ್ಲಿನ ಹಾರ ಹಾಕಿ, ಸುಗಂಧರಾಜ ಹಾರ ಬೇಡ : ಡಿಕೆಶಿ

ವಿಜಯಪುರ: ಸುಗಂಧರಾಜ ಹೂವಿಗೂ ಸಚಿವ ಡಿ.ಕೆ. ಶಿವಕುಮಾರ್ ಅವರಿಗೂ ಎಣ್ಣೆ ಶೀಗೆಕಾಯಿ ಸಂಬಂಧನಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಮೇಲೆ ಡಿಕೆಶಿ ಮೊದಲ ಬಾರಿಗೆ ಐತಿಹಾಸಿಕ ವಿಜಯಪುರ ಜಿಲ್ಲೆಗಿಂದು ಭೇಟಿ ನೀಡಿದರು. ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುಳವಾಡ ಏತ ನೀರಾವರಿ ಯೋಜನೆಯ ಬಳೂತಿ ಜಾಕ್ ವೆಲ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರು ಸುಗಂಧರಾಜ ಹೂವಿನ ಹಾರ ಹಾಕಿ ಸ್ವಾಗತಿಸಲು ಮುಂದಾಗಿದ್ದರು. ಆದರೆ ಡಿಕೆಶಿ ಹಾರ ಹಾಕಿಸಿಕೊಳ್ಳಲು ನಿರಾಕರಣೆ ಮಾಡಿದರು.

ಅಷ್ಟೇ ಅಲ್ಲದೇ ಸುಗಂಧ ಹಾರ ಬಿಟ್ಟು ಯಾವ ಹಾರ ಬೇಕಾದರೂ ಹಾಕಿ ಅಥವಾ ಕಲ್ಲಿನಿಂದ ಹಾರ ಮಾಡಿ ತಂದು ಹಾಕಿ. ಆದರೆ ಸುಗಂಧರಾಜ ಹೂವಿನ ಹಾರ ಬೇಡ ಎಂದರು. ಹೀಗಾಗಿ ಸುಗಂಧರಾಜ ಹೂವು ಕಂಡರೆ ಡಿಕೆಶಿಗೆ ಯಾಕೆ ಇಷ್ಟವಿಲ್ಲ ಎನ್ನುವ ಚರ್ಚೆ ಸ್ಥಳೀಯರಲ್ಲಿ ಹುಟ್ಟುಕೊಂಡಿದೆ.

ಮುಳವಾಡ ಏತ ನೀರಾವರಿ ಹಂತ-3ರ ಯೋಜನೆ ವ್ಯಾಪ್ತಿಯಲ್ಲಿ ಬರುವ ಬಳೂತಿ, ಹಣಮಾಪುರ ಹಾಗೂ ಮಸೂತಿ ಜಾಕವೆಲ್‍ಗಳ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಈ ಭಾಗದ ಜನರು ಭಾಗ್ಯವಂತರು. ಇಲ್ಲಿ ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡಿ ಯೋಜನೆ ಮಾಡಿದೆ. ಅಲ್ಲದೆ 62 ಟಿಎಂಸಿ ನೀರಿನ ಯೋಜನೆ ಮುಳವಾಡ ಏತ ನೀರಾವರಿ ಯೋಜನೆ, 5 ಲಕ್ಷ ಎಕರೆ ನೀರಾವರಿಗೆ ಜಮೀನು ಒಳ ಪಡುತ್ತದೆ.

ಈ ಹಿಂದಿನ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಉತ್ತಮ ಕೆಲಸ ಮಾಡಿದ್ದಾರೆ. ರೈತರು ನೀರಿನ ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಇನ್ನು ಆರೋಗ್ಯಕರವಾಗಿ ನೀರಿನ ಬಳಕೆಯಾಗಬೇಕು. ಕೆಲ ರೈತರ ಇದಕ್ಕಾಗಿ ತ್ಯಾಗ ಮಾಡಿದ್ದಾರೆ. ಅವರ ತ್ಯಾಗದಿಂದ ಯೋಜನೆಗಳು ಜಾರಿಯಾಗಿವೆ ಎಂದು ಅವರನ್ನು ಸ್ಮರಿಸಿದರು. ಇನ್ನು ಯೋಜನೆಗೆ ಒಳಪಟ್ಟ ಪುನರ್ವಸತಿ ಸರಿಯಾಗಿ ಆಗಿಲ್ಲ. ಒಂದು ಟೀಂ ನಿಯೋಜಿಸಿ ಪುನರ್ವಸತಿ ಕೇಂದ್ರಗಳ ಅಧ್ಯಯನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಕೆಲ ಪುನರ್ವಸತಿ ಪ್ರದೇಶಗಳಲ್ಲಿ ಯಾವುದೇ ಸೌಕರ್ಯವಿಲ್ಲದ್ದು ಕಂಡು ನಾಚಿಕೆಯಾಯಿತು. ಈ ಸಮಸ್ಯೆ ಬಗೆ ಹರಿಸಲಾಗುತ್ತದೆ. ಇನ್ನು ರೈತರ ಸಾಲ ಮನ್ನಾ ಮಾಡುವ ಡಿಮ್ಯಾಂಡ್ ಇದೆ. ಆರ್ಥಿಕತೆಯನ್ನು ತಿಳಿದುಕೊಂಡು ಜಲ ಸಂಪನ್ಮೂಲ ಇಲಾಖೆಗೆ ಒದಗಿಸುವ ಬಜೆಟ್ ನಿಗದಿ ಮಾಡಲಾಗುತ್ತದೆ. ನೀರಾವರಿ ಯೋಜನೆ ಸಂತ್ರಸ್ಥರಿಗೆ ಏಕರೂಪ ಪರಿಹಾರ ನೀಡಬೇಕೆಂಬ ಬೇಡಿಕೆ ಇದೆ. ಕಾರಣ ಈ ನಿಟ್ಟಿನಲ್ಲಿ ಯೋಚನೆ ಮಾಡಲಾಗುತ್ತದೆ. ಇನ್ನು ಬಜೆಟ್ ಮಾಹಿತಿ ಬಹಿರಂಗಗೊಳಿಸಲು ಸಾಧ್ಯವಿಲ್ಲ. ಸಿಎಂ ಕುಮಾರಸ್ವಾಮಿ ಅವರಿಗೆ ಕೆಲ ಸಲಹೆಗಳನ್ನು ನೀಡಿದ್ದೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *