Connect with us

Bengaluru City

ಸಚಿವ ಸಿಟಿ ರವಿ ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ: ಎಚ್‍ಡಿಕೆ

Published

on

ಬೆಂಗಳೂರು: ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಯವರು ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ. ಹೀಗಾಗಿ ಅವರು ಮೊದಲು ತುರ್ತಾಗಿ ಪರೀಕ್ಷೆಗೆ ಒಳಗಾಗುವುದು ಒಳಿತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಸಿಟಿ ರವಿ ಅವರ ‘ಮತ್ತಿನ’ ಆರೋಪಕ್ಕೆ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿರುವ ಎಚ್‍ಡಿಕೆ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಯವರು ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ. ಹೀಗಾಗಿ ಅವರು ಮೊದಲು ತುರ್ತಾಗಿ ಪರೀಕ್ಷೆಗೆ ಒಳಗಾಗುವುದು ಒಳಿತು. ನಾನು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಸಮಚಿತ್ತದಲ್ಲಿ ಇರುತ್ತೇನೆ. ಅಧಿಕಾರದ ಅಮಲು ಕೆಲವರಿಗೆ ಮಾತ್ರ ತೆವಲು ಎಂದರು ಕಿಡಿಕಾರಿದ್ದಾರೆ.

ನಾನು ಮುಖ್ಯಮಂತ್ರಿ ಆಗಿದ್ದಾಗ ಕ್ರಿಕೆಟ್ ಬೆಟ್ಟಿಂಗ್, ಮಾದಕ ದ್ರವ್ಯ, ಮೀಟರ್ ಬಡ್ಡಿ ಹತ್ತಿಕ್ಕಲು ವಿಶೇಷ ತಂಡ ರಚಿಸಿದ್ದೆ. ಇದರಿಂದ ಕನಲಿ ಹೋಗಿದ್ದ ದಂಧೆಕೋರರು ಶ್ರೀಲಂಕಾ ಹಾಗೂ ಮುಂಬೈಗೆ ಹಾರಿ ಹೋಗಿದ್ದರು. ಆಮೇಲೆ ಶಾಸಕರನ್ನು ಮುಂಬೈಗೆ ಕರೆದೊಯ್ಯುವಾಗ ಶಾಸಕರ ಜೊತೆ ಕಂಪನಿ ಕೊಟ್ಟಿದ್ದರು ಎಂದು ಆರೋಪಿಸಿದ್ದಾರೆ.

ಸಿ.ಟಿ. ರವಿ ಬೇರೆಯವರ ಬಗ್ಗೆ ಮಾತನಾಡಿದಂತೆ ನನ್ನ ಬಗ್ಗೆ ಮಾತನಾಡಿದರೆ ನಾನು ಸುಮ್ಮನಿರಲ್ಲ. ಅಧಿಕಾರದಲ್ಲಿ ಇರುವ ಸಚಿವರು ಮಾತಿನಲ್ಲಿ ನಿಗಾ ಇಡುವುದು ಒಳಿತು. ಕ್ರಿಕೆಟ್ ಬೆಟ್ಟಿಂಗ್, ಮಾಫಿಯಾ ಬಳಸಿಕೊಂಡೇ ನಮ್ಮ ಸರಕಾರದಲ್ಲಿದ್ದ ಶಾಸಕರನ್ನು ಬಿಜೆಪಿಯವರು ಬುಕ್ ಮಾಡಿಕೊಂಡಿದ್ದರು ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದು ಮತ್ತೆ ತಮ್ಮ ಆರೋಪವನ್ನು ಪುನರುಚ್ಚರಿಸಿದರು.

ಕೆಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಎರಡು ಗಂಟೆಗೊಂದು ವಿಶೇಷ ವಿಮಾನದ ಮೂಲಕ ಕರೆದುಕೊಂಡು ಹೋದಾಗ ಯಾರು ಜೊತೆಯಲ್ಲಿ ಇದ್ದರು ಎಂಬುದು ಇಡೀ ನಾಡಿಗೆ ಗೊತ್ತಿದೆ. ಶಾಸಕರನ್ನು ಖರೀದಿ ಮಾಡಿ, ಕ್ರಿಕೆಟ್ ಬೆಟ್ಟಿಂಗ್, ಡ್ರಗ್ ಮಾಫಿಯಾದ ಪಾಪದ ಹಣವನ್ನು ಚೆಲ್ಲಿ ಸರ್ಕಾರ ಉಳಿಸಿಕೊಳ್ಳುವ ವ್ಯಕ್ತಿ ನಾನಲ್ಲ. ಅಂತಹ ಕುಕೃತ್ಯಕ್ಕೆ ಇಳಿಯುವ ಜಾಯಮಾನ ನನ್ನದಾಗಿದ್ದರೆ ನನ್ನ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿರಲಿಲ್ಲ ಎಂದಿದ್ದಾರೆ.

ಖಜಾನೆಗೆ 25 ಸಾವಿರ ಕೋಟಿ ಹಣವನ್ನು ಸಂಗ್ರಹಿಸಿ ರೈತರ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿ ನಾನು. ಹೀಗಾಗಿ ಲೂಟಿ ಮಾಡಿದವರು ಅಧಿಕಾರದ ಅಮಲಿನಲ್ಲಿ ತೇಲಾಡುವಾಗ ಬಾಯಿಗೆ ಬಂದಂತೆ ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳಬೇಕಾಗಿಲ್ಲ. ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಈ ಸರ್ಕಾರಕ್ಕೆ ಪ್ರಕೃತಿಯು ಸಹಕರಿಸುತ್ತಿಲ್ಲ. ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ. ಅದು ಬಿಟ್ಟು ಬಾಯಿ ಚಪಲಕ್ಕೆ ಮಾತನಾಡುವ ಅಧಿಕಾರದ ಅಮಲು ಬಹಳ ಕಾಲ ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಗಿಳಿಯೋದಿ ಫಲವೇನು, ಬೆಕ್ಕು ಬಹುದ ಹೇಳಲರಿಯದು. ಜಗವೆಲ್ಲವ ಕಾಬ ಕಣ್ಣು ತನ್ನ ಕೊಂಬ ಕೊಲ್ಲೆಯ ಕಾಣಲರಿಯದು. ಇದಿರ ಗುಣವ ಬಲ್ಲವೆಂಬರು, ತಮ್ಮ ಗುಣವನರಿಯರು, ಕೂಡಲಸಂಗಮದೇವಾ ಎಂದು ಎಚ್‍ಡಿಕೆ ಟ್ವೀಟ್ ಮಾಡಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಟಿ ರವಿ ಅವರು, ಕುಮಾರಸ್ವಾಮಿ ಅವರ ಆರೋಪಿಗಳಿಗೆ ತಿರುಗೇಟು ನೀಡಿದ್ದರು. ಕುಮಾರಸ್ವಾಮಿ ಅವರನ್ನು ಮೊದಲು ತಪಾಸಣೆ ಮಾಡಬೇಕು. ಅವರು ಮತ್ತಿನಲ್ಲಿ ಹೇಳಿದ್ದಾರಾ? ಅಥವಾ ಸರಿಯಾಗಿದ್ದಾಗಿ ಆ ಹೇಳಿಕೆ ಕೊಟ್ಟಿದ್ದಾರಾ ಟೆಸ್ಟ್ ಮಾಡಿಸಬೇಕು. ಅವರ ಸಂಪುಟದ ಸಚಿವರೇ ರಾಜೀನಾಮೆ ಕೊಟ್ಟಿದ್ದು. ಕುಮಾರಸ್ವಾಮಿ ಕಾಲದ ಇಂಟಲಿಜೆನ್ಸ್ ದುರ್ಬಲವಾಗಿತ್ತಾ? ಅಧಿಕಾರದಲ್ಲಿದ್ದಾಗ ಏಕೆ ಡ್ರಗ್ ಮಾಫಿಯಾ ಕಡಿವಾಣಕ್ಕೆ ಕೈ ಹಾಕಿಲ್ಲ. ರಾಜಕೀಯ ಪ್ರಚಾರದ ಗೀಳಿಗೆ ಕುಮಾರಸ್ವಾಮಿ ಸರ್ಕಾರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದಿದ್ದರು.

Click to comment

Leave a Reply

Your email address will not be published. Required fields are marked *