Connect with us

Bengaluru City

ನೀರಾವರಿ ಯೋಜನೆಗಳಿಗೆ ತಕರಾರು ತಮಿಳುನಾಡಿನ ರಾಜಕೀಯ ಸಾಹಸದ ಪ್ರದರ್ಶನ: ಬೊಮ್ಮಾಯಿ

Published

on

Share this

ಬೆಂಗಳೂರು: ತಮಿಳುನಾಡು ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರ ಸಣ್ಣ ವಿಷಯಗಳನ್ನು ದೊಡ್ಡದಾಗಿ ಬಿಂಬಿಸುವ ಮೂಲಕ ರಾಜಕೀಯ ಸಾಹಸ ಪ್ರದರ್ಶನ ಮಾಡುತ್ತಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ನೀರಿನ ವಿಷಯವಾಗಿ ಯಾವಾಗಲೂ ಕರ್ನಾಟಕದೊಂದಿಗೆ ತಕರಾರು ಮಾಡುತ್ತಲೇ ಬಂದಿದೆ ಎಂದು ದೂರಿದರು.

ಅದು ಕಾವೇರಿ ನದಿನೀರು ಹಂಚಿಕೆ ಇರಬಹುದು, ಕಾವೇರಿ ಕಣಿವೆಯಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಗಳೇ ಆಗಿರಬಹುದು. ಅವುಗಳ ಬಗ್ಗೆ ತಮಿಳುನಾಡು ತಕರಾರು ಮಾಡುತ್ತಲೇ ಬಂದಿದೆ. ಕಾವೇರಿ ನ್ಯಾಯ ಮಂಡಳಿ ರಚನೆಯಾದ ಮೇಲೆ ಅವರಿಗೆ ಕಷ್ಟವಾಗುತ್ತಿದೆ ಎಂದು ಅವರು ಹೇಳಿದರು. ಇದನ್ನೂ ಓದಿ : ಮಗನನ್ನ ಅಪ್ಪನಂತೆ ಸೈನಿಕನನ್ನಾಗಿ ಮಾಡ್ತೀನಿ – ಸ್ವಗ್ರಾಮದಲ್ಲಿ ವೀರಯೋಧನಿಗೆ ಅಂತಿಮ ನಮನ

ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕೂ ಅನುಕೂಲವಾಗುತ್ತದೆ. ತಮಿಳುನಾಡು ರಾಜ್ಯಕ್ಕೂ ಅನುಕೂಲ ಆಗುತ್ತದೆ. ಅವರ ಪಾಲಿನ ನೀರು ಹರಿಸಲಾಗುವುದು. ಅದಕ್ಕೆಎಲ್ಲಿಯೂ ತಡೆ ಉಂಟಾಗುವುದಿಲ್ಲ. ಹೆಚ್ಚುವರಿ ನೀರನ್ನು ಮಾತ್ರ ಕರ್ನಾಟಕ ಬಳಕೆ ಮಾಡುತ್ತದೆ. ಉಭಯ ರಾಜ್ಯಗಳಿಗೆ ಯೋಜನೆಯಿಂದ ಲಾಭವಾಗುತ್ತದೆ. ಆದರೂ ಕೂಡ ಈ ಯೋಜನೆಯನ್ನು ತಮಿಳುನಾಡು ಸರ್ಕಾರ ವಿರೋಧಿಸುತ್ತಿದೆ. ಅದೇ ರೀತಿ ಮಾಕರ್ಂಡೇಯ ಯೋಜನೆಗೆ ತಮಿಳುನಾಡಿನ ತಕರಾರು ಮೊದಲಿನಿಂದಲೂ ಇದೆ. ಅಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದೊಂದು ರಾಜಕೀಯ ಸಾಹಸ. ಸಣ್ಣ ವಿಷಯಗಳನ್ನು ದೊಡ್ಡದು ಮಾಡಿ ರಾಜಕೀಯ ಸಾಹಸ ಪ್ರದರ್ಶನ ಮಾಡಲಾಗುತ್ತಿದೆ. ರಾಜಕೀಯಕ್ಕೆ ಏನು ಬೇಕು ಅದನ್ನು ತಮಿಳುನಾಡು ಮಾಡುತ್ತಿದೆ. ಆದರೆ ನಾವು ಕಾನೂನಾತ್ಮಕವಾಗಿ ಸರಿಯಾಗಿ ಇದ್ದೇವೆ. ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ ಎಂದರು.

ತಮಿಳುನಾಡು ರಾಜ್ಯಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬರೆದಿರುವ ಪತ್ರಕ್ಕೆ ತಮಿಳುನಾಡು ಸ್ಪಂದಿಸಲೇ ಬೇಕಾಗುತ್ತದೆ. ಏಕೆಂದರೆ ಇದು ಕುಡಿಯುವ ನೀರಿನ ಯೋಜನೆ. ಕೆಆರ್‍ಎಸ್ ಬಿಟ್ಟರೆ ಕಾವೇರಿ ನದಿ ನೀರನ್ನು ಶೇಖರಿಸಿಡಲು ಬೇರೆ ಸ್ಥಳ ಇಲ್ಲ. ಮೇಕೆದಾಟು ಯೋಜನೆಯಿಂದ ಸಂಕಷ್ಟ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಾಗುತ್ತದೆ. ಅವರಿಗೂ ಅನುಕೂಲ ನಮಗೂ ಅನುಕೂಲ ಎಂದು ಬಸವರಾಜ ಬೊಮ್ಮಾಯಿ ಯೋಜನೆ ಬಗ್ಗೆ ವಿವರಿಸಿದರು.

ಇಂಧನದ ಮೇಲೆ ವಿಧಿಸಲಾಗುತ್ತಿರುವ ಸೆಸ್ ದೇಶಕ್ಕೆ ಸಂಬಂಧ ಪಟ್ಟ ವಿಚಾರ. ಸೆಸ್ ನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಿಳಿಸುತ್ತಿವೆ. ಇಂಧನ ನಿರ್ವಹಣೆ ವೆಚ್ಚ, ಇಂಧನ ಮೂಲಬೆಲೆ ಮತ್ತು ಪರಿವರ್ತನ ವೆಚ್ಚ ಎಷ್ಟಿದೆ ಎಂಬುದನ್ನು ಎಲ್ಲ ರಾಜ್ಯಗಳು ಕುಳಿತು ಚರ್ಚೆ ಮಾಡಬೇಕಾಗುತ್ತದೆ. ಜನರ ಮೇಲಿನ ಈ ಭಾರವನ್ನು ಕಡಿಮೆ ಮಾಡುವುದಕ್ಕೆ ಎಲ್ಲರೂ ಒಪ್ಪಿಗೆ ನೀಡಬೇಕಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸಮಸ್ಯೆಗಳು ಎದುರಾದಾಗ ಚರ್ಚೆ ಮಾಡಿ ನಿರ್ಧಾರ ಮಾಡಿರುವ ಉದಾಹರಣೆಗಳಿವೆ. ಆ ರೀತಿ ಎಲ್ಲ ರಾಜ್ಯಗಳು ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟರು.

Click to comment

Leave a Reply

Your email address will not be published. Required fields are marked *

Advertisement