Connect with us

Corona

ತುಂಬು ಗರ್ಭಿಣಿಯಾದ್ರೂ ಕೊರೊನಾ ಕಿಟ್ ತಯಾರಿಕೆ – ಮರುದಿನ ಮಗುವಿಗೆ ಜನ್ಮ

Published

on

– 2-3 ಗಂಟೆಗಳಲ್ಲಿ ಕೋವಿಡ್ -19 ಪರೀಕ್ಷೆ
– ನನ್ನ ದೇಶಕ್ಕೆ ಸೇವೆ ಮಾಡಿದೆ ಎಂದ ವೈದ್ಯೆ

ಮುಂಬೈ: ಮಾಹಾಮಾರಿ ಕೊರೊನಾ ವೈರಸ್ ಜಗತ್ತಿನಾದ್ಯಂತ ವ್ಯಾಪಿಸುತ್ತಿದೆ. ಇದನ್ನು ಹರಡದಂತೆ ತಡೆಯಲು ವೈದ್ಯರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ಭಾರತ ಕೊರೊನಾ ವೈರಸ್ ಪರೀಕ್ಷೆಗೆ ಮೊದಲ ಮೇಡ್ ಇನ್ ಇಂಡಿಯಾ ಕಿಟ್ ತಯಾರಿಸಿದೆ. ಇದನ್ನು ತಯಾರಿಸಿದ್ದು ಓರ್ವ ಗರ್ಭಿಣಿ ಮಹಿಳಾ ವೈದ್ಯೆ. ಇದೀಗ ವೈದ್ಯೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಗರ್ಭಿಣಿಯಾಗಿದ್ದರೂ ನಿರಂತರವಾಗಿ ಕೆಲಸ ಮಾಡಿದ್ದಕ್ಕೆ ಅವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ದೇಶದ ಮೊದಲ ಕೋವಿಡ್-19 ಕಿಟ್ ತಯಾರಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಿನಾಲ್ ಬೋಸ್ಲೆ ಅವರು ಹೆಣ್ಣು ಮಗವಿಗೆ ಜನ್ಮ ನೀಡಿದ್ದಾರೆ. ಇದೀಗ ಇವರ ಕರ್ತವ್ಯ ನಿಷ್ಠೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಭೋಸ್ಲೆ ಅವರು ಪುಣೆಯ ಮೈಲಾಬ್ ಡಿಸ್ಕವರಿಯ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥೆಯಾಗಿದ್ದಾರೆ. ಇವರು ನೇತೃತ್ವವಹಿಸಿದ್ದ ತಂಡ ಮೊಟ್ಟ ಮೊದಲ ಮೇಡ್ ಇನ್ ಇಂಡಿಯಾ ಕಿಟ್ ತಯಾರಿಸಿತ್ತು. ಈ ಮೂಲಕ ಇದು ಕೋವಿಡ್-19 ಪರೀಕ್ಷಾ ಕಿಟ್‍ಗಳನ್ನು ತಯಾರಿಸಿ ಮಾರಾಟ ಮಾಡಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆ ಪಡೆದಿದೆ.

1200 ರೂ. ವೆಚ್ಚದ ಒಂದ ಟೆಸ್ಟ್ ಕಿಟ್‍ನಲ್ಲಿ 100 ಮಾದರಿಗಳನ್ನು ಪರೀಕ್ಷಿಸಬಹುದು. ತುಂಬು ಗರ್ಭಿಣಿಯಾಗಿದ್ದ ಭೋಸ್ಲೆ ಅವರು ಯಾವುದನ್ನು ಲೆಕ್ಕಿಸದೇ ಹಗಲು-ರಾತ್ರಿ ಕಷ್ಟಪಟ್ಟು ದೇಶಕ್ಕಾಗಿ ಕೋವಿಡ್-19 ಕಿಟ್ ತಯಾರಿಸಿದ್ದರು. ಮಾರ್ಚ್ 18 ರಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿದ್ದರು. ಮರುದಿನ ಅವರು ಮಗುವಿಗೆ ಜನ್ಮ ನೀಡಿದ್ದರು.

ಈ ಬಗ್ಗೆ ಮಾತನಾಡಿದ ಭೋಸ್ಲೆ ಅವರು, ದೇಶ ತುರ್ತು ಪರಿಸ್ಥಿತಿಯಲ್ಲಿತ್ತು. ಹೀಗಾಗಿ ಕಿಟ್ ತಯಾರಿಸುವುದನ್ನು ಸವಾಲಾಗಿ ತೆಗೆದುಕೊಂಡಿದ್ದೆ. ನನ್ನ ದೇಶಕ್ಕೆ ನಾನು ಸೇವೆ ಮಾಡಬೇಕಿತ್ತು. ಆದ್ದರಿಂದ ಶ್ರಮಪಟ್ಟು ಕಿಟ್ ತಯಾರಿಸಲಾಗಿದೆ. ಮೊದಲು 6-7 ಗಂಟೆಗಳು ಪರೀಕ್ಷೆ ಮಾಡಲು ಸಮಯಬೇಕಿತ್ತು. ಆದರೆ ನಾವು ತಯಾರಿಸಿದ ಕಿಟ್‍ನಿಂದ ಕೇವಲ 2-3 ಗಂಟೆಗಳಲ್ಲಿ ಕೋವಿಡ್-19 ಪರೀಕ್ಷೆ ಮಾಡಬಹುದು ಎಂದು ತಿಳಿಸಿದ್ದಾರೆ.

ನಾನು ಮೊದಲು ಕಿಟ್‍ಗೆ ಜೀವ ನೀಡಿದೆ ನಂತರ ನನ್ನ ಮಗುವಿಗೆ ಜನ್ಮ ನೀಡಿದೆ. ನಾನೊಬ್ಬಳೆ ಕಷ್ಟಪಟ್ಟಿಲ್ಲ ನಮ್ಮ ತಂಡದಲ್ಲಿದ್ದವರೆಲ್ಲರೂ ಶ್ರಮಿಸಿದ್ದಾರೆ ಎಂದಿದ್ದಾರೆ.

ಇದೀಗ ಕೇವಲ 2 ರಿಂದ 2-30 ಗಂಟೆಯಲ್ಲಿ ಕೊರೊನಾ ವೈರಸ್ ಪರೀಕ್ಷೆಯನ್ನು ನಡೆಸುವ ಈ ಕಿಟ್ ಸದ್ಯ ಅತ್ಯಂತ ವೇಗವಾಗಿ ಪರೀಕ್ಷೆ ನಡೆಸುವ ಸಾಧನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಮತ್ತು ನಟಿ ಸೋನಿ ರಜ್ದಾನ್ ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.