Monday, 24th June 2019

ಗುಜರಾತ್‍ನಲ್ಲಿ ಮುಂದುವರಿದ ಹಿಂಸಾಚಾರ- ಬಿಹಾರಿ ಯುವಕನ ಕೊಲೆ

ಗಾಂಧಿನಗರ: ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣದ ಸಂಬಂಧಿಸಿದಂತೆ ಗುಜರಾತ್‍ನಲ್ಲಿ ಮತ್ತೆ ಹಿಂಸಾಚಾರ ಮುಂದುವರಿದಿದ್ದು, ಈ ಬಾರಿ ಬಿಹಾರಿ ಯುವಕನನ್ನು ದುಷ್ಕರ್ಮಿಗಳ ಗುಂಪೊಂದು ರಾಡ್‍ನಿಂದ ಹಲ್ಲೆ ಮಾಡಿ ಕೊಲೆ ಮಾಡಿದೆ.

ಅಮರ್‍ಜಿತ್ ಕುಮಾರ್ ಕೊಲೆಯಾದ ದುರ್ದೈವಿ. ಗುಜರಾತ್‍ನ ಗಾಯಾ ಕೋಡಿಯಾ ಎಂಬ ಹಳ್ಳಿಯಲ್ಲಿ ಘಟನೆ ನಡೆದಿದೆ. ಅಮರ್‍ಜಿತ್ ಕುಮಾರ್ ಪಾಂಡೇಶ್ವರಿ ನಗರದ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಆತನನ್ನು ತಡೆದ ದುಷ್ಕರ್ಮಿಗಳು ರಾಡ್‍ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಅಮರ್‍ಜಿತ್ ತನ್ನ 17ನೇ ವಯಸ್ಸಿನಲ್ಲಿ ಕೆಲಸ ಅರಸಿ ಗುಜರಾತ್‍ಗೆ ಬಂದಿದ್ದ. ಇಲ್ಲಿಯೇ ಒಂದು ಮನೆ ನಿರ್ಮಾಣ ಮಾಡಿಕೊಳ್ಳುವ ಉದ್ದೇಶದಿಂದ ದುಡಿಯುತ್ತಿದ್ದ. ದುಷ್ಕರ್ಮಿಗಳ ಹೇಯ ಕೃತ್ಯದಿಂದ ಆತನ ಪತ್ನಿ ಹಾಗೂ ಮಕ್ಕಳು ಬೀದಿ ಪಾಲಾಗಿದ್ದಾರೆ.

ಕೇಂದ್ರ ಹಾಗೂ ಗುಜರಾತ್ ಬಿಜೆಪಿ ಸರ್ಕಾರ, ಬಿಹಾರ್ ಆಡಳಿತಾಧಿಕಾರಿಗಳ ಬೇಜವಾಬ್ದಾರಿಯಿಂದ ಇಂತಹ ಕೃತ್ಯಗಳು ಪದೇ ಪದೇ ನಡೆಯುತ್ತಿವೆ. ಈ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಅಂತಾ ಅಮರ್‍ಜಿತ್ ತಂದೆ ರಾಜ್‍ದೇವ್ ಸಿಂಗ್ ಒತ್ತಾಯಿಸಿದ್ದಾರೆ.

ಈ ಹಿಂದೆ ಆಗಿದ್ದೇನು?:
ಸಬರ್ಕಾಂತಾ ಜಿಲ್ಲೆಯಲ್ಲಿ ಬಿಹಾರಿ ಯುವಕನೊಬ್ಬ 14 ತಿಂಗಳ ಗುಜರಾತಿ ಕಂದಮ್ಮನ ಮೇಲೆ ಕಳೆದ ಸೆಪ್ಟೆಂಬರ್ 28 ರಂದು ಅತ್ಯಾಚಾರ ಎಸಗಿದ್ದ. ಈ ಸುದ್ದಿ ಹಳ್ಳಿ-ಹಳ್ಳಿಗಳಿಗೆ ತಲುಪಿ, ಗುಜರಾತಿಗರು ಹಾಗೂ ಬಿಹಾರಿಗಳು ಪರಸ್ಪರ ಹಿಂಸಾಕೃತ್ಯಕ್ಕೆ ಮುಂದಾದರು. ಇದರಿಂದ ಭಯಗೊಂಡ 15 ಸಾವಿರ ವಲಸಿಗರು ಗುಜರಾತ್ ತೊರೆದಿದ್ದರು.

ಗಲಭೆ ಹಾಗೂ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ 70 ಜನರರನ್ನು ಬಂಧಿಸಿದ್ದು, ಈವರೆಗೆ ಒಟ್ಟು 600 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *