Connect with us

Cricket

ಕೊಹ್ಲಿ ಇಲ್ಲದ ಟೆಸ್ಟ್ ಟೂರ್ನಿಯಲ್ಲಿ ಆಸೀಸ್ ಸುಲಭ ಜಯ ಪಡೆಯಲಿದೆ- ಮೈಕಲ್ ವಾನ್ ಭವಿಷ್ಯ

Published

on

ಮುಂಬೈ: ಐಪಿಎಲ್ 2020ರ ಟೂರ್ನಿ ಮುಕ್ತಾಯದೊಂದಿಗೆ ಟೀಂ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಗೆ ಪ್ರವಾಸ ಕೈಗೊಂಡಿದ್ದಾರೆ. ಕೊರೊನಾ ಬಳಿಕ ಟೀಂ ಇಂಡಿಯಾ, ಆಸೀಸ್ ವಿರುದ್ಧ ತನ್ನ ಮೊದಲ ಅಂತಾರಾಷ್ಟ್ರೀಯ ಟೂರ್ನಿಯನ್ನು ಆಡುತ್ತಿದೆ.

ಆಸ್ಟ್ರೇಲಿಯಾ ನೆಲದಲ್ಲಿ ಮೂರು ತಿಂಗಳ ಕಾಲ ಟೀಂ ಇಂಡಿಯಾ ಏಕದಿನ, ಟಿ20, ಟೆಸ್ಟ್ ಟೂರ್ನಿಗಳನ್ನು ಆಡಲಿದ್ದು, ಇದರಲ್ಲಿ ಒಂದು ಡೇ ಅಂಡ್ ನೈಟ್ ಪಂದ್ಯವೂ ಸೇರಿದೆ. ಆದರೆ ಟೆಸ್ಟ್ ಟೂರ್ನಿಯ ಅಂತಿಮ ಮೂರು ಪಂದ್ಯಗಳಿಂದ ಕೊಹ್ಲಿ ದೂರವಾಗಿದ್ದು, ಕೌಟುಂಬಿಕ ಕಾರಣದಿಂದ ಕೊಹ್ಲಿ ಭಾರತಕ್ಕೆ ವಾಪಸ್ ಆಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ಮಾಜಿ ಆಟಗಾರ ಮೈಕಲ್ ವಾನ್, ಕೊಹ್ಲಿ ಇಲ್ಲದ ಭಾರತದ ತಂಡದ ವಿರುದ್ಧ ಆಸ್ಟ್ರೇಲಿಯಾ ಟೆಸ್ಟ್ ಟೂರ್ನಿಯಲ್ಲಿ ಸುಲಭ ಜಯ ಪಡೆಯಲಿದೆ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಇಲ್ಲದ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಗೆಲ್ಲುವುದು ಕಷ್ಟ. ಕೊಹ್ಲಿ ತನ್ನ ಮೊದಲ ಮಗುವಿಗಾಗಿ ತೆಗೆದುಕೊಂಡ ನಿರ್ಣಯ ಉತ್ತಮವಾಗಿದೆ. ಆದರೆ ಇದು ಆಸೀಸ್ ತಂಡಕ್ಕೆ ವರದಾನವಾಗುವ ಸಾಧ್ಯತೆ ಇದೆ. ನನ್ನ ಪ್ರಕಾರ ಆಸೀಸ್ ಟೆಸ್ಟ್ ಟೂರ್ನಿಯಲ್ಲಿ ಸುಲಭ ಜಯ ಪಡೆಯಲಿದೆ ಎಂದು ವಾನ್ ಟ್ವೀಟ್ ಮಾಡಿದ್ದಾರೆ. ಉಳಿದಂತೆ ಬಿಸಿಸಿಐ ಸದ್ಯ ರೋಹಿತ್ ಶರ್ಮಾ ಅವರಿಗೆ ಸೀಮಿತ ಓವರ್ ಗಳ ಕ್ರಿಕೆಟ್ ಟೂರ್ನಿಯಿಂದ ಸಂಪೂರ್ಣವಾಗಿ ವಿಶ್ರಾಂತಿ ನೀಡಿದ್ದು, ಟೆಸ್ಟ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದ ಬಳಿಕ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಇತ್ತ ಐಪಿಎಲ್ ಪ್ರಶಸ್ತಿ ಗೆದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಶುಭಕೋರಿದ್ದ ಮೈಕಲ್ ವಾನ್, ರೋಹಿತ್ ಶರ್ಮಾರನ್ನು ಹಾಡಿಹೊಗಳಿದ್ದರು. ಅಲ್ಲದೇ ಟೀಂ ಇಂಡಿಯಾ ಟಿ20 ನಾಯಕನನ್ನಾಗಿ ರೋಹಿತ್ ಶರ್ಮಾರನ್ನು ಆಯ್ಕೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದರು.

Click to comment

Leave a Reply

Your email address will not be published. Required fields are marked *

www.publictv.in