Connect with us

Latest

ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಮೆಟ್ರೋ ಮ್ಯಾನ್‌ ಖ್ಯಾತಿಯ ಇ ಶ್ರೀಧರನ್‌

Published

on

ತಿರುವನಂತಪುರಂ: ಕೊಂಕಣ ರೈಲಿನ ಸೂತ್ರಧಾರ, ಮೆಟ್ರೋ ಮ್ಯಾನ್‌ ಎಂದೇ ಖ್ಯಾತರಾಗಿರುವ ಇ ಶ್ರೀಧರನ್‌ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಫೆ.21 ರಂದು ಕಾಸರಗೋಡಿನಲ್ಲಿ ʼವಿಜಯ ಯಾತ್ರೆʼ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್‌ ಪ್ರತಿಕ್ರಿಯಿಸಿ, ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಿದ್ದ ಇ ಶ್ರೀಧರನ್‌ ಬಿಜೆಪಿಗೆ ಸೇರಿ ಕೆಲಸ ಮಾಡಲಿದ್ದಾರೆ. ಫೆ.21 ರಂದು ಅವರು ಬಿಜೆಪಿ ಸೇರಲಿದ್ದಾರೆ ಎಂದು ತಿಳಿಸಿದರು. ಕೆಲ ತಿಂಗಳಿನಲ್ಲಿ ಕೇರಳದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಶ್ರೀಧರನ್‌ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ಭಾರೀ ಮಹತ್ವ ಪಡೆದಿದೆ.

ಯಾರು ಇ ಶ್ರೀಧರನ್‌?
ಭಾರತೀಯ ಎಂಜಿನಿಯರಿಂಗ್ ಸೇವೆ (ಐಇಎಸ್) ಸಲ್ಲಿಸಿ ಈಗ ನಿವೃತ್ತರಾಗಿರುವ ಇವರು 1995 ರಿಂದ 2012ರ ವರೆಗೂ ದೆಹಲಿ ಮೆಟ್ರೋ ಮುಖ್ಯಸ್ಥರಾಗಿದ್ದರು. ಶ್ರೀಧರನ್‌ ದೇಶಾದ್ಯಂತ ಸ್ವದೇಶಿ ಮೆಟ್ರೋ ರೈಲು ವ್ಯವಸ್ಥೆ ಜಾರಿಗೆ ಮೋದಿ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯ ಮುಖ್ಯಸ್ಥರೂ ಆಗಿದ್ದಾರೆ.

ಕೊಂಕಣ ರೈಲ್ವೆ ಮತ್ತು ದಿಲ್ಲಿ ಮೆಟ್ರೋವನ್ನು ನಿರ್ಮಿಸಿದ ನಂತರ ಭಾರತದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬದಲಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. 2003 ರಲ್ಲಿ ಟೈಮ್ಸ್ ನಿಯತಕಾಲಿಕೆಯು ಏಷ್ಯಾದ ಸೆಲೆಬ್ರಿಟಿ ಹೀರೋಗಳಲ್ಲಿ ಒಬ್ಬರೆಂದು ಅವರನ್ನು ಹೆಸರಿಸಿತ್ತು. ವಿಶ್ವಸಂಸ್ಥೆಯ ಸುಸ್ಥಿರ ಸಾರಿಗೆ ಕುರಿತು ಉನ್ನತ ಮಟ್ಟದ ಸಲಹಾ ಸಮೂಹದಲ್ಲಿ ಸೇವೆ ಸಲ್ಲಿಸಲು ಶ್ರೀಧರನ್‌ ಅವರನ್ನು ನೇಮಕ ಮಾಡಲಾಗಿತ್ತು.

 

 

ಈ ಹಿಂದೆ ದೆಹಲಿ ಮೆಟ್ರೋದಲ್ಲಿ ಮಹಿಳೆಯರ ಉಚಿತ ಸಂಚಾರಕ್ಕೆ ಸಿಎಂ ಕೇಜ್ರಿವಾಲ್ ಅನುವು ಮಾಡಿಕೊಡಲು ಮುಂದಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಇದಕ್ಕೆ ಅವಕಾಶ ನೀಡಬಾರದು ಎಂದು ಶ್ರೀಧರನ್‌ ಖಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಒಂದೊಮ್ಮೆ ಮೆಟ್ರೋ ಪ್ರಯಾಣದಲ್ಲಿ ಉಚಿತ ಸಂಚಾರ ಆರಂಭಿಸಿದರೆ ಸಂಸ್ಥೆಗಳು ದಿವಾಳಿ ಆಗಲಿದೆ. ಯಾವುದೇ ಕಾರಣಕ್ಕೂ ಇವುಗಳಿಗೆ ಪ್ರೋತ್ಸಾಹ ನೀಡಬಾರದು. ಮೆಟ್ರೋ ಸಿಬ್ಬಂದಿ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಕೂಡ ಟಿಕೆಟ್ ಖರೀದಿಸಿ  ಪ್ರಯಾಣ ನಡೆಸಬೇಕು ಎಂದು ಹೇಳಿದ್ದರು.

Click to comment

Leave a Reply

Your email address will not be published. Required fields are marked *