Connect with us

Bellary

4 ವರ್ಷದ ಹಿಂದೆ ಕೋಲ್ಕತ್ತಾ ತಲುಪಿದ್ದ ಮಾನಸಿಕ ಅಸ್ವಸ್ಥನನ್ನ ಬಳ್ಳಾರಿಗೆ ಕರೆತಂದ ಡಿಸಿ

Published

on

-ಸುರಕ್ಷಿತವಾಗಿ ಮರಳಿಗೂಡು ಸೇರಿದ ವೆಂಕಟೇಶ್
-4 ವರ್ಷದ ಹಿಂದೆ ಟ್ರಕ್ ಹತ್ತಿ ಪಶ್ಚಿಮಬಂಗಾಳ ತಲುಪಿದ್ದ

ಬಳ್ಳಾರಿ: ನಾಲ್ಕು ವರ್ಷದ ಹಿಂದೆ ಟ್ರಕ್ ಹತ್ತಿ ಪಶ್ಚಿಮ ಬಂಗಾಳದ ಮಾಲ್ಡಾ ತಲುಪಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕಲು ಸುರಕ್ಷಿತವಾಗಿ ಜಿಲ್ಲೆಗೆ ಕರೆತಂದಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಾಗಲಾಪುರ ಗ್ರಾಮದ ವೆಂಕಟೇಶ್ (26) ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ. 4 ವರ್ಷಗಳ ಹಿಂದೆ ಟ್ರಕ್‍ವೊಂದನ್ನು ಹತ್ತಿಕೊಂಡು ಪಶ್ಚಿಮಬಂಗಾಳದ ಮಾಲ್ಡಾ ತಲುಪಿದ್ದ. ಅಲ್ಲಿ ಬೀದಿಬೀದಿ ಹುಚ್ಚನ ರೀತಿಯಲ್ಲಿ ಅಲೆದಾಡಿ ಕೈಕಾಲುಗಳಿಗೆಲ್ಲ ಗಾಯ, ಒಂದೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದ. ತಾನೆಲ್ಲಿದ್ದೇನೆ ಎಂಬ ಅರಿವು ಸಹ ಅವನಿಗಿರದೇ ನಿತ್ಯ ನಿರಂತರ ಅಲೆದಾಡುತ್ತಿದ್ದನು.

ವೆಂಕಟೇಶ್ ಹುಚ್ಚನಂತೆ ಬೀದಿಬೀದಿ ಅಲೆದಾಡುತ್ತಿದ್ದುದನ್ನು ಗಮನಿಸಿದ ಸ್ವಯಂಸೇವಾ ಸಂಸ್ಥೆಯೊಂದು ಯುವಕನಿಗೆ ಸೂಕ್ತ ಚಿಕಿತ್ಸೆ ನೀಡಿ ವಿಶೇಷ ಆರೈಕೆ ಮಾಡಿತ್ತು. ಇದನ್ನು ಅಲ್ಲಿನ ಸ್ಥಳೀಯ ಮಾಲ್ಡಾ ಜಿಲ್ಲಾಧಿಕಾರಿಗಳಿಗೆ ಎನ್‍ಜಿಒ ಪ್ರಮುಖರು ವಿಷಯ ಮುಟ್ಟಿಸಿದ್ದರು; ಮಾಲ್ಡಾ ಜಿಲ್ಲಾಧಿಕಾರಿಗಳು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ವಿಷಯ ತಿಳಿಯುತ್ತಲೇ ಕಾರ್ಯಪ್ರವೃತ್ತರಾದ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮಾಲ್ಡಾ ಡಿಸಿ ಅವರ ಮೂಲಕ ಎನ್‍ಜಿಒ ಸಂಪರ್ಕಿಸಿ ವೆಂಕಟೇಶನಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಂಡಿದ್ದರು. ಚಿಕಿತ್ಸೆಗೆ ಬೇಕಾಗುವ ಖರ್ಚು-ವೆಚ್ಚ ಕೂಡ ಭರಿಸಿದರು. ವೆಂಕಟೇಶನ ಆರೋಗ್ಯ ನಿಧಾನವಾಗಿ ಸುಧಾರಿಸಿತು.

ಆರೋಗ್ಯ ಸುಧಾರಿಸಿದ ನಂತರ ವೆಂಕಟೇಶ್ ನನ್ನು ಜಿಲ್ಲಾಡಳಿತ ಹಾಗೂ ಎನ್‍ಜಿಒ ಸಹಕಾರದೊಂದಿಗೆ ಕೋಲ್ಕತ್ತಾ ವಿಮಾನನಿಲ್ದಾಣಕ್ಕೆ ಕರೆ ತರಲಾಗಿತ್ತು. ಬಳ್ಳಾರಿ ಜಿಲ್ಲಾಡಳಿತದ ವೆಚ್ಚದಡಿ ಕೋಲ್ಕತ್ತಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಗುರುವಾರ ಕರೆತರಲಾಗಿದೆ.

ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಹೋದರಿಬ್ಬರು ವೆಂಕಟೇಶನನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಸಹೋದರರಿಬ್ಬರ ಮಿಲನ ಮತ್ತು ಸಂತೋಷ, ಆನಂದಭಾಷ್ಪಕ್ಕೆ ವಿಮಾನನಿಲ್ದಾಣ ಸಾಕ್ಷಿಯಾಯಿತು. ಎಂದೆಂದಿಗೂ ಸಿಗಲಾರೆವು ಎಂದುಕೊಂಡವರು ಸಿಕ್ಕಖುಷಿ ಅವರದ್ದಾಗಿತ್ತು.

\

ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ವಿಶೇಷ ಕಾರಿನ ವ್ಯವಸ್ಥೆ ಮಾಡಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಹೋದರರ ಮೂಲಕ ವೆಂಕಟೇಶನನ್ನು ಸಂಡೂರು ತಾಲೂಕಿನ ನಾಗಲಾಪುರಕ್ಕೆ ಕರೆತಂದರು. ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹಾಗೂ ಜಿಲ್ಲಾಡಳಿತದ ಕಾರ್ಯಕ್ಕೆ ವೆಂಕಟೇಶನ ಕುಟುಂಬ ಹಾಗೂ ಇಡೀ ಜಿಲ್ಲೆಯಲ್ಲಿಯೇ ಪ್ರಶಂಸೆ ವ್ಯಕ್ತವಾಗಿದೆ.

Click to comment

Leave a Reply

Your email address will not be published. Required fields are marked *