Connect with us

Chikkaballapur

ಡ್ರೋನ್ ಮೂಲಕ ಔಷಧಿಗಳ ರವಾನೆಯ ಪರೀಕ್ಷಾರ್ಥ ಹಾರಾಟ

Published

on

Share this

ಚಿಕ್ಕಬಳ್ಳಾಪುರ: ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಡ್ರೋನ್ ಮೂಲಕ ಔಷಧಿಗಳ ರವಾನೆ ಪ್ರಯೋಗಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಶಂಬೂಕನಗರ ಸಾಕ್ಷಿಯಾಗಿದೆ. ಛಾಯಾಗ್ರಹಣ ವಿಡಿಯೋ ಸೆರೆ, ಭದ್ರಾವತೆಯ ಕಣ್ಗಾವಲು, ಸೇರಿದಂತೆ ಕೆಲ ಕ್ಷೇತ್ರಗಳಿಗೆ ಸೀಮಿತವಾಗಿರೋ ಡ್ರೋನ್ ಬಳಕೆಯನ್ನ ವೈದ್ಯಕೀಯ ಕ್ಷೇತ್ರದಲ್ಲೂ ಬಳಕೆ ಮಾಡಿಕೊಳ್ಳುವ ಸಲುವಾಗಿ ವಿನೂತನ ಪ್ರಯೋಗಕ್ಕೆ ಡ್ರೋನ್ ತಯಾರಿಕಾ ಖಾಸಗಿ ಸಂಸ್ಥೆಯೊಂದು ಮುಂದಾಗಿದೆ.

ಬೆಂಗಳೂರು ಮೂಲದ ಟಿಎಎಸ್ (ಥ್ರೋಟಲ್ ಏರೋಸ್ಪೇಸ್ ಲಿಮಿಟೆಡ್) ಅನ್ನೋ ಡ್ರೋನ್ ಉತ್ಪಾದನಾ ಸಂಸ್ಥೆ ಈ ವಿಭಿನ್ನ ಪ್ರಯೋಗವನ್ನ ನಡೆಸುತ್ತಿದೆ. ತುರ್ತು ಸಂದರ್ಭದಲ್ಲಿ ಔಷಧಿಗಳು, ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಅಂಗಾಂಗಗಳ ರವಾನೆ, ಸೇರಿದಂತೆ ರಕ್ತ ಸಾಗಣೆಯನ್ನ ಈ ಡ್ರೋನ್ ಗಳ ಮೂಲಕ ಯಶ್ವಸಿಯಾಗಿ ಮಾಡುಬಹುದು ಎಂಬುದನ್ನ ಸಾಬೀತುಪಡಿಸುವ ಸಲುವಾಗಿ ಪ್ರಾಯೋಗಿಕವಾಗಿ ಶಂಬೂಕನಗರದ ಹೊರವಲಯದ ಜಮೀನಿನಲ್ಲಿ ಈ ಪ್ರಯೋಗವನ್ನ ನಡೆಸಲಾಗುತ್ತಿದೆ.

ಅಸಲಿಗೆ ಈ ಡ್ರೋನ್ ಹಾರಾಟಕ್ಕೆ ನಾಗರೀಕ ವಿಮಾನಯಾನ ಸಂಸ್ಥೆ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸೇರಿದಂತೆ ಸ್ಥಳೀಯ ಜಿಲ್ಲಾಡಳಿತದಿಂದ ಅನುಮತಿ ಪಡೆದಿರೋ ಈ ಟಿಎಎಸ್ ಈ ಜಾಗದಲ್ಲಿ ಪ್ರಾಯೋಗಿಕ ಹಾರಾಟ ನಡೆಸುತ್ತಿದೆ.

ಯಾಕೆ ಹೇಗೆ ಈ ಪ್ರಯೋಗ?
ಪರೀಕ್ಷಾರ್ಥ ಹಾರಾಟದ ಪ್ರಯೋಗವನ್ನ ಆರಂಭಿಸಿರುವ ಟಿಎಎಸ್ ಸಂಸ್ಥೆಯವರಾದ ಶಶಿಕುಮಾರ್ ಹಾಗೂ ಗಿರೀಶ್ ರೆಡ್ಡಿ ಯವರು ಬಿವಿ ಲಾಸ್ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅಂದ್ರೆ ಕಣ್ಣಿನ ದೃಷ್ಟಿಗೆ ಡ್ರೋನ್ ಕಾಣದಿದ್ರೂ ಅದನ್ನ ಹೇಗೆ ಕಾರ್ಯ ನಿರ್ವಹಿಸುವಂತೆ ಮಾಡುವುದು ಎಂಬ ಪ್ರಯೋಗ ಇದಾಗಿದೆ.

ಸಾಮಾನ್ಯವಾಗಿ ಡ್ರೋನ್ ಗಳು ಆಕಾಶದಲ್ಲಿ ಹಾರಾಟ ಮಾಡುವಾಗಿ ಒಂದು ಒಂದೂವರೆ ಕಿಲೋಮೀಟರ್ ದೂರದವರೆಗೂ ನಮ್ಮ ಕಣ್ಣಿಗೆ ಕಾಣುತ್ತಿರುತ್ತದೆ. ತದನಂತರ ಅದು ನಮ್ಮ ಕಣ್ಣಿಗೆ ಕಾಣಿಸಲ್ಲ. ಹೀಗಾಗಿ ನಾವು ಇಷ್ಟು ದಿನ ಅಷ್ಟು ದೂರ ಮಾತ್ರ ಡ್ರೋನ್ ಹಾರಾಟಗಳನ್ನ ಮಾಡುತ್ತಿದ್ದೇವೆ. ಆದ್ರೆ ಈಗ ನಮ್ಮ ಈ ವಿನೂತನ ಪ್ರಯೋಗ ನಮ್ಮ ಕಣ್ಣು ದೃಷ್ಟಿಯ ದೂರವನ್ನ ಮೀರಿ ನಾವು ಡ್ರೋನ್ ನ ಚಾಲನೆ ಹಾಗೂ ನಿಯಂತ್ರಣ ಮಾಡುವುದಲ್ಲದೆ ಡ್ರೋನ್ ಗಳ ಮೂಲಕ ಔಷಧ, ಮಾನವನ ಅಂಗಾಗಗಳು, ರಕ್ತ ಹೀಗೆ ತುರ್ತು ಸಂದರ್ಭಗಳಲ್ಲಿ 1 ಕೆಜಿ ಯಿದ 2 ಕೆಜಿ ಯವರೆಗೂ ಅದರಲ್ಲೂ ಈಗ ಸಾಮಾನ್ಯ ಒಂದು-ಒಂದೂವರೆ ಕಿಲೋಮೀಟರ್ ದೂರವಷ್ಟೆ. ಅಲ್ಲದೆ ಅದನ್ನೂ ಮೀರಿ ಹತ್ತಾರು ಕಿಲೋಮೀಟರ್ ದೂರದವರೆಗೂ ಡ್ರೋನ್ ಹಾರಾಟ ಮಾಡಬೇಕು ಎಂಬ ಪ್ರಯತ್ನ ನಮ್ಮದಾಗಿದೆ ಅಂತಾರೆ ಸಂಸ್ಥೆಯವರಾದ ಶಶಿಕುಮಾರ್.

ಹೀಗಾಗಿಯೇ ತಮ್ಮ ಸಂಸ್ಥೆಯ ಮೆಡ್ ಕಾಪ್ಟರ್ ಎಕ್ಸ್ 4 ಹಾಗೂ ಮತ್ತೊಂದು ಮೆಡ್ ಕಾಪ್ಟರ್ ಎಕ್ಸ್ 8 ನ್ನ ಈ ಪ್ರಯೋಗದಲ್ಲಿ ಬಳಸಿದ್ದಾರೆ. ಮೊದಲಿಗೆ ಮೆಡ್ ಕಾಪ್ಟರ್ 4 ಎಕ್ಸ್ ಮೂಲಕ 1 ಕೆಜಿ ತೂಕವನ್ನ ಹೊತ್ತು ಹಾರಾಡಬಲ್ಲ ಸಾಮಥ್ರ್ಯವನ್ನ ಹೊಂದಿದ್ದು, ಮೆಡ್ ಕಾಪ್ಟರ್ ಎಕ್ಸ್ 8, 2 ಕೆಜಿ ತೂಕವನ್ನ ಹೊತ್ತು ಹಾರಾಡಬಲ್ಲ ಸಾಮರ್ಥ್ಯವನ್ನ ಹೊಂದಿದೆ. ಮೊದಲ ದಿನದ ಪ್ರಯೋಗದಲ್ಲಿ ಈ ಎರಡು ಮೆಡ್ ಕಾಪ್ಟರ್ ಗಳಲ್ಲಿ ಔಷಧಿಗಳನ್ನ ತುಂಬಿ ಪ್ರಾಯೋಗಿಕ ಪರೀಕ್ಷೆಯನ್ನ ನಡೆಸಲಾಗಿದ್ದು, ಸರಿಸುಮಾರು ಎರಡೂವರೆ ಕಿಲೋಮೀಟರ್ ದೂರವನ್ನ ಈ ಎರಡು ಡ್ರೋನ್ ಗಳು ಯಶ್ವಸಿಯಾಗಿ ಹಾರಾಟ ಮಾಡಿ ಗುರುತಿಸಿದ್ದ ಅಂತಿಮ ಪಾಯಿಂಟ್ ನಲ್ಲಿ ಲ್ಯಾಂಡ್ ಆಗಿವೆ.

ಈ ಹಾರಾಟದ ವೇಳೆ ಯಾವುದೇ ಆಡಚಣೆ ಆಗಿಲ್ಲ. ಹೀಗಾಗಿ ಮೊದಲ ದಿನದ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಇದೇ ರೀತಿ 30 ರಿಂದ 40 ದಿನ 100 ಗಂಟೆಗಳ ಕಾಲ ಈ ಪ್ರಯೋಗ ನಡೆಯಲಿದ್ದು, ಹತ್ತಾರು ಕೀಲೋಮೀಟರ್ ಗಳ ದೂರದವರೆಗೂ ಈ ಪರೀಕ್ಷೆ ನಡೆಯಲಿದೆ. ಕೊನೆಗೆ ಈ ಎಲ್ಲಾ ಡಾಟಾ ಆಧಾರದ ಮೇಲೆ ಅಂತಿಮವಾಗಿ ಈ ಹೊಸ ಪ್ರಯತ್ನವನ್ನ ಜಾರಿಮಾಡುಬಹುದಾ ಈ ತಂತ್ರಜ್ಞಾನವನ್ನ ಬಳಸಿಕೊಳ್ಳಬಹುದಾ ಎಂಬುದನ್ನ ಸರ್ಕಾರ ಧೃಢಿಕರಿಸಲಿದೆ ಎಂದು ತಿಳಿದು ಬಂದಿದೆ.

ಈ ಪ್ರಯೋಗ ಯಶಸ್ವಿಯಾದರೆ ಕೆಲ ಆಸ್ಪತ್ರೆಗಳಿಂದ ಆಸ್ಪತ್ರೆಗಳಿಗೆ ತುರ್ತು ಸಂದರ್ಭದಲ್ಲಿ ಅಂಗಾಂಗ, ಔಷಧಿಗಳ ರವಾನೆ. ಲ್ಯಾಬ್ ಗಳಿಗೆ ಟೆಸ್ಟಿಂಗ್ ಗಳಿಗೆ ಸ್ಯಾಂಪಲ್ ಗಳ ರವಾನೆ, ಸೇರಿದಂತೆ ಹಲವು ಕಾರ್ಯಗಳಿಗೆ ಉಪಯೋಗವಾಗಲಿದೆ. ಈ ಕಾಪ್ಟರ್ ಗಳು ಅತಿಯಾದ ಮಳೆ ಬಿಟ್ಟು ಎಲ್ಲಾ ಕಾಲದಲ್ಲಿಯೂ ಬಳಸಬಹುದು ಅಂತಾರೆ ತಯಾರಕರಾದ ಗಿರೀಶ್ ರೆಡ್ಡಿ. ಸದ್ಯ ಇವರ ಈ ವಿಭಿನ್ನ ಪ್ರಯೋಗ ಯಶಸ್ವಿಯಾಗಲಿ, ದೇಶದ ವೈದ್ಯಕೀಯ ಕ್ಷೇತ್ರದಲ್ಲೂ ಡ್ರೋನ್ ಗಳ ಬಳಕೆಯಾಗಲಿ ಅಂತ ಆಶಿಸೋಣ.

Click to comment

Leave a Reply

Your email address will not be published. Required fields are marked *

Advertisement