Sunday, 15th September 2019

ಎಕ್ಸಿಟ್ ಪೋಲ್ ಬಳಿಕ ಯೂಟರ್ನ್ ಹೊಡೆದ ಮಾಯಾವತಿ

ಲಕ್ನೋ: ಎಕ್ಸಿಟ್ ಪೋಲ್ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ನಾಯಕಿ ಮಾಯಾವತಿ ಅವರು ಕಾಂಗ್ರೆಸ್ ನಾಯಕರ ಭೇಟಿಯ ವಿಚಾರದಲ್ಲಿ ಯೂಟರ್ನ್ ಹೊಡೆದಿದ್ದಾರೆ.

ಮಾಯಾವತಿ ಅವರು ನಾಳೆ ದೆಹಲಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಲು ನಿರ್ಧರಿಸಿದ್ದರು. ಆದರೆ ಎಕ್ಸಿಟ್ ಪೋಲ್ ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಬಿಜೆಪಿ 300, ಎನ್‍ಡಿಎಗೆ 350 ಸ್ಥಾನ -ಟುಡೇಸ್ ಚಾಣಕ್ಯ

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ನಿನ್ನೆಯಷ್ಟೇ ಬಿಎಸ್‍ಪಿ ನಾಯಕಿ ಮಾಯಾವತಿ ಹಾಗೂ ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದರು. ಈ ಮೂಲಕ ಮಾಯಾವತಿ ಅವರು ದೆಹಲಿಯಲ್ಲಿ ಮೊದಲು ಸೋನಿಯಾ ಗಾಂಧಿ ನಂತರ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವುದಾಗಿ ತಿಳಿಸಿದ್ದರು. ಆದರೆ ಎಕ್ಸಿಟ್ ಪೋಲ್ ಫಲಿತಾಂಶ ಹೊರ ಬೀಳುತ್ತಿದ್ದಂತೆ ಭೇಟಿಯಿಂದ ಹಿಂದಕ್ಕೆ ಸರೆದಿದ್ದಾರೆ. ಈ ಮೂಲಕ ಮೇ 23ರಂದು ಸಿಗುವ ಅಂತಿಮ ಫಲಿತಾಂಶದ ಬಳಿಕ ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದು ಬಿಎಸ್‍ಪಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮತ್ತೆ ಪ್ರಧಾನಿ ಆಗಬೇಕು ಎಂದು ಕನಸು ಕಂಡಿದ್ದ ದೇವೇಗೌಡರ ಆಸೆಗೆ ತಣ್ಣೀರು ಬಿತ್ತು – ಜಿ.ಎಸ್.ಬಸವರಾಜು

ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಮೈತ್ರಿ ಸಾಧಿಸುವ ನಿಟ್ಟಿನಲ್ಲಿ ಚಂದ್ರಬಾಬು ನಾಯ್ಡು ಅವರು ಶುಕ್ರವಾರ ದೆಹಲಿಗೆ ಆಗಮಿಸಿ, ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದರು. ಶನಿವಾರ ಉತ್ತರ ಪ್ರದೇಶದ ರಾಜಧಾನಿ ಲಕ್ನೋಗೆ ತೆರಳಿ ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ನಾಯಕರಿಗೆ ತಲಾ ಒಂದು ಬಾಕ್ಸ್ ಮಾವಿನ ಹಣ್ಣು ನೀಡಿದ್ದರು.

ಚಂದ್ರಬಾಬು ನಾಯ್ಡು ಅವರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಅವರ ಜೊತೆಗೆ ಈಗಾಗಲೇ ಎರಡು ಬಾರಿ ನೇರಾನೇರ ಚರ್ಚೆ ಮಾಡಿದ್ದಾರೆ. ಇತ್ತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜೊತೆಗೂ ದೂರವಾಣಿ ಮುಖಾಂತರ ಮಾತುಕತೆ ಮುಗಿಸಿದ್ದಾರೆ ಎಂದು ವರದಿಯಾಗಿದೆ.

2018ರ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೇ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಆಗ ಬಿಜೆಪಿಗೆ ಒಂದು ಕ್ಷಣವೂ ಅವಕಾಶ ಕೊಡದಂತೆ ಕಾರ್ಯಾಚರಣೆಗಿಳಿದ ಕಾಂಗ್ರೆಸ್ ನಾಯಕರು, ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. ಈಗ ಕೇಂದ್ರದಲ್ಲಿ ಇದೇ ಮಾದರಿಯನ್ನು ಅನುಸರಿಸುವ ತಯಾರಿ ನಡೆದಿದೆ.

Leave a Reply

Your email address will not be published. Required fields are marked *