Connect with us

International

ಜಾಗತಿಕ ಉಗ್ರ ಪಟ್ಟಿಗೆ ಮತ್ತೆ ಅಡ್ಡಿ – ಚೀನಾಗೆ ಅಮೆರಿಕ ಎಚ್ಚರಿಕೆ

Published

on

– ಎಲ್ಲದಕ್ಕೂ ತಡೆ ಒಡ್ಡಿದ್ರೆ ಬಲವಂತವಾಗಿ ಕ್ರಮ
– ಚೀನಾ ನಡೆಗೆ ಭದ್ರತಾ ಮಂಡಳಿಯ ಸದಸ್ಯರಿಂದ ವಿರೋಧ

ವಾಷಿಂಗ್ಟನ್: ಪಾಕಿಸ್ತಾನ ಜೈಷ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ, ಭಯೋತ್ಪಾದಕ ಮಸೂದ್ ಅಜರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಚೀನಾ 4ನೇ ಬಾರಿ ಅಡ್ಡಗಾಲು ಹಾಕಿದ್ದು, ಚೀನಾದ ಈ ನಡೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಪಾಕಿಸ್ತಾನದ ಉಗ್ರವಾದಕ್ಕೆ ಬೆಂಬಲ ನೀಡುವ ಕುತಂತ್ರಿ ಬುದ್ದಿಯನ್ನು ಚೀನಾ ಮತ್ತೊಮ್ಮೆ ಪ್ರದರ್ಶನ ಮಾಡಿದ್ದು, ಮಸೂದ್ ಅಜರ್ ನನ್ನು ರಕ್ಷಣೆ ಮಾಡುತ್ತಲೇ ಬಂದಿದೆ. ಇದರ ಬೆನ್ನಲ್ಲೇ ಭದ್ರತಾ ಮಂಡಳಿಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಚೀನಾ ತನ್ನ ನಿಲುವನ್ನು ಮುಂದುವರಿಸಿದರೆ ಬಲವಂತವಾಗಿ ನಾವು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿರುವ ಅಮೆರಿಕದ ರಾಯಭಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಯ ಬಳಿಕ ಮಸೂದ್ ಅಜರ್ ನೇತ್ರತ್ವದ ಜೈಷೆ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಇದು ತನ್ನ ಕೃತ್ಯ ಎಂದು ಹೊಣೆ ಹೊತ್ತುಕೊಂಡಿತ್ತು. ಪರಿಣಾಮ ಭಾರತದ ಮನವಿಯಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಫ್ರಾನ್ಸ್, ಇಂಗ್ಲೆಂಡ್ ಮತ್ತು ಅಮೆರಿಕ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ಫೆ.27 ರಂದು ಪ್ರಸ್ತಾವನೆ ರವಾನಿಸಿದ್ದವು. ಆದರೆ ತಾಂತ್ರಿಕ ಕಾರಣ ನೀಡಿ ಚೀನಾ ಈ ಪ್ರಸ್ತಾವನೆಗೆ ತಡೆ ನೀಡಿದೆ.

ಜೈಷ್ ಇ ಮೊಹಮ್ಮದ್ ಸಂಘಟನೆ ತನ್ನದೇ ಕೃತ್ಯ ಎಂದು ಒಪ್ಪಿಕೊಂಡ ಬಳಿಕವೂ ಕೂಡ ಚೀನಾ ಅಜರ್‍ಗೆ ಬೆಂಬಲ ನೀಡಿರುವುದರ ವಿರುದ್ಧ ಭದ್ರತಾ ಮಂಡಳಿ ಸದಸ್ಯರು ಟೀಕೆ ಮಾಡಿದ್ದಾರೆ.

ಅಂದಹಾಗೇ ಮಸೂದ್ ಅಜರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆ ಮಾಡುವ ಪ್ರಯತ್ನಕ್ಕೆ ಚೀನಾ 4ನೇ ಬಾರಿಗೆ ಅಡ್ಡ ಬಂದಿದೆ. ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದರೆ ಆತನ ಆಸ್ತಿ, ಪ್ರಯಾಣದ ಮೇಲೆ ನಿರ್ಬಂಧ ಬೀಳಲಿದೆ. ಆತನ ಇಡೀ ಆಸ್ತಿ ಸರ್ಕಾರ ಪಾಲಾಗುತ್ತದೆ. ಬೇರೆ ಯಾವ ರಾಷ್ಟ್ರಗಳು ಕೂಡ ಆತನಿಗೆ ಹಣ ಸಹಾಯ ನೀಡಲು ಸಾಧ್ಯವಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv