Monday, 21st January 2019

Recent News

ಕೆರೆಗಳಿಗೆ ಪುನಶ್ಚೇತನ, ಇಟ್ಟಿಗೆ ಕೈಗಾರಿಕೆಗೂ ಬಂತು ಮರುಜೀವ- ಒಂದೇ ಕಲ್ಲಿಗೆ 2 ಹಕ್ಕಿ ಹೊಡೆದ ಜಿಲ್ಲಾಡಳಿತ

ಕೋಲಾರ: ಸರಿಯಾದ ನಿರ್ವಹಣೆ ಇಲ್ಲದೆ ತಮ್ಮ ಸ್ವರೂಪವನ್ನೇ ಕಳೆದುಕೊಂಡಿದ್ದ ಜಿಲ್ಲೆಯ ಜೀವ ಜಲದ ಮೂಲ ಕೆರೆಗಳಿಗೆ ಅದೃಷ್ಟ ಕುಲಾಯಿಸಿದ್ದು, ಕೆರೆಗಳ ಜೀವ ತುಂಬಲು ಜಿಲ್ಲಾಡಳಿತದ ಮಾಸ್ಟರ್ ಪ್ಲಾನ್ ಮಾಡಿದೆ. ಇಟ್ಟಿಗೆ ಕೈಗಾರಿಕೆಗೂ ಜೀವ ನೀಡಿ ಕೆರೆಗಳ ಪುನಶ್ಚೇತನ ಮಾಡುವ ಹೊಸ ಯೋಜನೆ ಕೈಗೆತ್ತಿಕೊಂಡಿದೆ.

ಕಳೆದ ಹತ್ತಾರು ವರ್ಷಗಳಿಂದ ಕೆರೆಯಲ್ಲಿ ನೀರಿಲ್ಲ. ಜಾಲಿ ಮರಗಳು ಬೆಳೆದು ಸ್ವರೂಪವನ್ನೇ ಕಳೆದುಕೊಂಡಿತ್ತು. ಇದನ್ನ ಸರಿಪಡಿಸಲು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 600ಕ್ಕೂ ಹೆಚ್ಚು ಇಟ್ಟಿಗೆ ಕಾರ್ಖಾನೆಗಳಿವೆ. ಆದ್ರೆ ಕೆರೆಯಲ್ಲಿ ಮಣ್ಣು ತೆಗೆಯಲು ಅನುಮತಿ ಇಲ್ಲದೆ ಕಾರ್ಖಾನೆಗಳು ಮುಚ್ಚುವ ಪರಿಸ್ಥಿತಿ ಎದುರಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಮಾಡಿದ ಹೊಸ ಕಾನೂನಿನಡಿ, ಇಟ್ಟಿಗೆ ಕಾರ್ಖಾನೆ ಮಾಲೀಕರು ಅನುಮತಿ ಪಡೆದು ಕೆರೆಯಲ್ಲಿ ಮಣ್ಣು ತೆಗೆಯಲು ಮುಂದಾಗಿದ್ದಾರೆ. 1 ಮೆಟ್ರಿಕ್ ಟನ್ ಮಣ್ಣಿಗೆ 60 ರೂಪಾಯಿಯಂತೆ ಪಾವತಿ ಮಾಡಿ ಮಣ್ಣು ತೆಗೆದುಕೊಳ್ಳಬಹುದಾಗಿದೆ. ಇದರಿಂದ ಜಿಲ್ಲೆಯ ಕೆರೆಗಳಿಗೆ ಮರುಜೀವ ಬಂದಂತಾಗಿದ್ದು, ಸರ್ಕಾರಕ್ಕೂ ಇಂತಿಷ್ಟು ಆದಾಯ ಹಾಗೂ ಮುಚ್ಚುವ ಪರಿಸ್ಥಿತಿಯಲ್ಲಿದ್ದ ಇಟ್ಟಿಗೆ ಕಾರ್ಖಾನೆಗಳಿಗೂ ಹೊಸ ಜೀವ ಬಂದಂತಾಗಿದೆ.


696 ಎಕರೆ ವಿಸ್ತೀರ್ಣ ಹೊಂದಿರುವ ಕೋಲಾರಮ್ಮ ಕೆರೆಯ ಹೂಳು ತೆಗೆದು, ಕೆ.ಸಿ.ವ್ಯಾಲಿ ಯೋಜನೆ ನೀರು ತುಂಬಿಸುವುದು ಜಿಲ್ಲಾಡಳಿತದ ಮಾಸ್ಟರ್ ಪ್ಲಾನ್ ಆಗಿದೆ. ಜೊತೆಗೆ ಜಿಲ್ಲೆಯ ಕೆರೆಗಳನ್ನ ಇದೇ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ. ಮಾತ್ರವಲ್ಲದೆ ಕೋಲಾರ ನಗರಕ್ಕೆ ಹೊಂದಿಕೊಂಡಂತಿರುವ ಕೆರೆಯನ್ನು ಒಳ್ಳೆಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸಣ್ಣ ನೀರಾವರಿ ಇಲಾಖೆ 12 ಕೋಟಿ ರೂಪಾಯಿ ವೆಚ್ಚದ ಯೋಜನೆಯೊಂದನ್ನು ರೂಪಿಸುತ್ತಿದೆ ಎಂದು ಇಟ್ಟಿಗೆ ಕಾರ್ಖಾನೆ ಮಾಲೀಕ ರಾಜಪ್ಪ ಹೇಳಿದ್ದಾರೆ.

ಒಟ್ಟಿನಲ್ಲಿ ಜಿಲ್ಲಾಡಳಿತದ ಈ ಯೋಜನೆಯಿಂದ ಸಾರ್ವಜನಿಕರಿಗೂ ಫುಲ್ ಖುಷಿಯಾಗಿದೆ. ಅಕ್ರಮವಾಗಿ ಕೆರೆಗಳಲ್ಲಿ ಮಣ್ಣು ತೆಗೆದು ಸೀಜ್ ಆಗುತ್ತಿದ್ದ ಲಾರಿಗಳು, ಇಟ್ಟಿಗೆ ಕಾರ್ಖಾನೆ ಮಾಲೀಕರಿಗೂ ದೊಡ್ಡ ರಿಲೀಫ್ ಸಿಕ್ಕಿದೆ. ಕೆರೆಗಳ ಹೂಳೆತ್ತಲು ಸರ್ಕಾರದ ನೆರವಿಗಾಗಿ ಕಾದು ಕೂರುವ ಕೆರೆಗೆ ಮರು ಜೀವ ಸಿಕ್ಕಂತಾಗಿರುವುದು ಮತ್ತೊಂದು ಸಂತೋಷದ ವಿಷಯ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *