Connect with us

Bengaluru City

ಮಸ್ಕಿ ಉಪ ಚುನಾವಣೆ – ಕೈ, ಕಮಲದಿಂದ 5ಎ ಕಾಲುವೆ ಅಸ್ತ್ರ

Published

on

– 5ಎ ಕಾಲುವೆಗಾಗಿ ನಿಲ್ಲದ ರೈತರ ಹೋರಾಟ

ರಾಯಚೂರು: ಮಸ್ಕಿ ಉಪಚುನಾವಣಾ ಅಖಾಡ ಕಾಂಗ್ರೆಸ್ ಹಾಗೂ ಬಿಜೆಪಿಗೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ನೀರಾವರಿ ಯೋಜನೆಗಳೆ ಎರಡೂ ಪಕ್ಷದ ಪ್ರಚಾರದ ಅಸ್ತ್ರವಾಗಿದೆ. 5 ಎ ಕಾಲುವೆ ಅಸ್ತ್ರದೊಂದಿಗೆ ರಾಜಕಾರಣಿಗಳು ಆರೋಪ ಪ್ರತ್ಯಾರೋಪಕ್ಕೆ ಮುಂದಾಗಿದ್ದಾರೆ. ಆದರೆ ರೈತರು ಮಾತ್ರ ಯಾವ ರಾಜಕಾರಣಿಗಳನ್ನೂ ನಂಬದೇ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ನಿರಂತರ ಹೋರಾಟ ನಡೆಸಿದ್ದಾರೆ.

ಮಸ್ಕಿ ಕ್ಷೇತ್ರದ ಎಡಕ್ಕೆ ತುಂಗಭದ್ರಾ ನದಿ ಇದ್ರೆ, ಬಲಕ್ಕೆ ನಾರಾಯಣಪುರ ಜಲಾಶಯ ಇದೆ. ರಾಜ್ಯದ ಪ್ರಮುಖ ನದಿಗಳು ಮಸ್ಕಿ ಕ್ಷೇತ್ರಕ್ಕೆ ಹೊಂದಿಕೊಂಡೇ ಹರಿಯುತ್ತಿದ್ರೂ ದಶಕಗಳಿಂದ ಈ ಭಾಗದ ರೈತರಿಗೆ ನೀರಾವರಿ ವ್ಯವಸ್ಥೆ ಮಾಡಿಕೊಡುವಲ್ಲಿ ಸರ್ಕಾರಗಳು ವಿಫವಾಗಿವೆ. ಎನ್.ಆರ್.ಬಿ.ಸಿ. 5 ಎ ಕಾಲುವೆಗಾಗಿ ರೈತರು 2008 ರಿಂದ ಹೋರಾಟ ನಡೆಸಿದ್ದರು ಯೋಜನೆ ಜಾರಿಯಾಗಿಲ್ಲ. ಪ್ರತಾಪ್ ಗೌಡ ಪಾಟೀಲ್ ಒಂದು ಬಾರಿ ಬಿಜೆಪಿ ಎರಡು ಬಾರಿ ಕಾಂಗ್ರೆಸ್ ನಿಂದ ಶಾಸಕರಾದ್ರೂ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿಲ್ಲ. ಆದ್ರೆ ಈಗ ರೈತರ ಹೋರಾಟ ತೀವ್ರ ಸ್ಪರೂಪ ಪಡೆಯುತ್ತಿರುವುದರಿಂದ ಉಪಚುನಾವಣೆಗೆ 5 ಎ ಕಾಲುವೆಯನ್ನೇ ಅಸ್ತ್ರಮಾಡಿಕೊಂಡು ಚುನಾವಣಾ ಪ್ರಚಾರ ನಡೆಸಿದ್ದಾರೆ. ಇತ್ತೀಚಗೆ ಮಸ್ಕಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 5ಎ ಕಾಲುವೆ ಬಗ್ಗೆ ಪ್ರತಾಪಗೌಡ ಪಾಟೀಲ್ ಗೆ ಆಸಕ್ತಿಯೇ ಇರಲಿಲ್ಲ. ಕಾಲುವೆ ಬಗ್ಗೆ ಮಾತನಾಡಲು ಕರೆದರೆ ಇಚ್ಛಾಶಕ್ತಿಯನ್ನೇ ತೋರಿಸಿಲ್ಲ ಅಂತ ಆರೋಪಿಸಿದ್ದಾರೆ. ಈ ಮೂಲಕ ಕಾಂಗ್ರೆಸ್, ಬಿಜೆಪಿ 5 ಎ ಕಾಲುವೆಯನ್ನೆ ಪ್ರಚಾರ ವಸ್ತು ಮಾಡಿಕೊಂಡಿದ್ದಾರೆ.

ನಾವು ಯಾವ ರಾಜಕಾರಣಿಯನ್ನೂ ನಂಬಲ್ಲ ಮೊದಲು ಕಾಲುವೆ ಆರಂಭಿಸಿ ಅಂತ ರೈತರು ಮಾತ್ರ ನಿರಂತರ ಹೋರಾಟ ನಡೆಸಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆಯಿಂದ ಲಿಂಗಸುಗೂರಿನ ಕಾಳಾಪುರದಿಂದ 5ಎ ಕಾಲುವೆ ಕಾಮಗಾರಿ ಆರಂಭವಾಗಬೇಕಿದೆ. ಮಸ್ಕಿ, ಮಾನ್ವಿ, ಸಿರವಾರ, ರಾಯಚೂರು ತಾಲೂಕು ಹಾಗೂ ಕೊಪ್ಪಳ ಜಿಲ್ಲೆಯ ಕೆಲ ಹಳ್ಳಿಗಳು ಸೇರಿಕೊಂಡು ಒಟ್ಟಾರೆ 107 ಹಳ್ಳಿಗಳ 1 ಲಕ್ಷ 77 ಸಾವಿರದ 912 ಎಕರೆ ನೀರಾವರಿ ನೀರಾವರಿ ವಂಚಿತವಾಗಿದೆ. ಮಸ್ಕಿ ತಾಲೂಕಿನ ಒಂದರಲ್ಲೇ 58 ಹಳ್ಳಿಗಳ 77 ಸಾವಿರ ಎಕರೆ ಭೂಮಿ ನೀರಾವರಿ ವಂಚಿತವಾಗಿದೆ. ಅಲ್ಲದೇ ಈ ಯೋಜನೆ ಪ್ರಾರಂಭ ಆದ್ರೆ ಮಸ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿನ 5 ಕೆರೆಗಳನ್ನ ತುಂಬಿಸುವ ಯೋಜನೆಯೂ ಇದರಲ್ಲಿ ಒಳಪಡುತ್ತೆ. ಇದುವರೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯೋಜನೆ ಅನುಷ್ಠಾನಕ್ಕೆ ಮುಂದಾಗಿಲ್ಲ. ಹೀಗಾಗಿ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ.

ಕಳೆದ ಒಂದು ದಶಕದಿಂದ 5 ಎ ಕಾಲುವೆಗಾಗಿ ರೈತರು ನಾನಾ ಹೋರಾಟಗಳನ್ನ ಮಾಡಿದರೂ ಕೃಷ್ಣಾ ಭಾಗ್ಯ ಜಲಾ ನಿಗಮ ನಿಯಮಿತದ ಅಧಿಕಾರಿಗಳು, ಶಾಸಕ, ಸಂಸದರು ಸೇರಿದಂತೆ ಸರ್ಕಾರದಿಂದಲೂ ಯಾವ ಸ್ಪಂದನೆಯೂ ಸಿಕ್ಕಿಲ್ಲ. ಕಾಲುವೆ ನಿರ್ಮಿಸಲು ಡಿಪಿಆರ್ ತಯಾರಾಗಿ ವರ್ಷಗಳೇ ಉರುಳಿದ್ರೂ 5ಎ ಕಾಮಗಾರಿ ಆರಂಭಗೊಂಡಿಲ್ಲ. ಉಪಚುನಾವಣೆಯ ಪ್ರಚಾರದಲ್ಲಿ ಮಾತ್ರ ಕಾಲುವೆಯದ್ದೇ ಮಾತು.

Click to comment

Leave a Reply

Your email address will not be published. Required fields are marked *

www.publictv.in