Connect with us

Corona

ಮಾಸ್ಕ್ ಧರಿಸುವುದರಿಂದ ಬರುತ್ತೆ ಮಾಸ್ಕ್ ಮೌತ್ ಸಿಂಡ್ರೋಮ್ – ತಡೆಯೋದು ಹೇಗೆ?

Published

on

– ಯಾರಿಗೆ ಬರುತ್ತೆ ಈ ಸಿಂಡ್ರೋಮ್?
– ಗಂಟೆಗೊಮ್ಮೆ 5 ನಿಮಿಷ ವಿರಾಮ ತೆಗೆದುಕೊಳ್ಳಿ

ಕೊಚ್ಚಿ: ಮಾಸ್ಕ್ ಬಳಕೆ ಇತ್ತೀಚೆಗೆ ಜೀವನದ ಭಾಗವಾಗಿ ಹೋಗಿದೆ. ಕೊರೊನಾ ತಡೆಯುವಲ್ಲಿ ಮಾಸ್ಕ್ ಅಗತ್ಯ ಎಂದು ತಜ್ಞರು ಸಹ ತಿಳಿಸಿದ್ದಾರೆ. ಇದೆಲ್ಲದ ಮಧ್ಯೆ ಇದೀಗ ಮಾಸ್ಕ್ ಹಾಕುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ಸಹ ತಜ್ಞರು ತಿಳಿಸಿದ್ದಾರೆ. ಹೆಚ್ಚು ಕಾಲ ಮಾಸ್ಕ್ ಧರಿಸುವುದರಿಂದ ಮಾಸ್ಕ್ ಮೌತ್ ಸಿಂಡ್ರೋಮ್ ಬರುತ್ತದೆ ಎಂದು ಎಚ್ಚರಿಸಿದ್ದಾರೆ.

ದೀರ್ಘ ಕಾಲ ಮಾಸ್ಕ್ ಬಳಸುವುದರಿಂದ ದುರ್ವಾಸನೆಯುಂಟಾಗುತ್ತದೆ, ಬಾಯಿ ಒಣಗುತ್ತದೆ, ತಲೆ ನೋವಿನ ಸಮಸ್ಯೆ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಬಳಕೆದಾರರು ಸ್ವಲ್ಪ ಕಾಳಜಿ ವಹಿಸಿದರೆ ಈ ಸಮಸ್ಯೆಗಳು ಬೇಗ ಕಾಡುವುದಿಲ್ಲ ಎಂದಿದ್ದಾರೆ.

ಪ್ರಸ್ತುತ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಇತರರೊಂದಿಗೆ ಮಾತನಾಡುವಾಗ ಮಾಸ್ಕ್ ಕಡ್ಡಾಯವಾಗಿದೆ. ಆದರೆ ಫೇಸ್ ಮಾಸ್ಕ್ ಗಳನ್ನು 8-10 ಗಂಟೆಗಳ ಕಾಲ ಧರಿಸುವ ಅನೇಕರು ಕೆಟ್ಟ ವಾಸನೆ ಹಾಗೂ ಬಾಯಿ ಒಣಗುವ ಕುರಿತು ದೂರಿದ್ದಾರೆ. ಈ ಸಮಸ್ಯೆಗಳನ್ನು ‘ಮಾಸ್ಕ್ ಮೌತ್ ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ. ಸಾರ್ವಜನಿಕರಲ್ಲಿ ಶೇ.20ಕ್ಕೂ ಹೆಚ್ಚು ಜನ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ದಂತ ವೈದ್ಯರು ಹೇಳಿದ್ದಾರೆ.

ಮಾಸ್ಕ್ ಧರಿಸುವುದರಿಂದ ಕಿವಿ ನೋವು, ತಲೆ ನೋವು ಹಾಗೂ ಉಸಿರಾಡಲು ಕಷ್ಟವಾಗುವುದು ಹಾಗೂ ದಂತ ಸಮಸ್ಯೆಗಳು ಸಾಮಾನ್ಯವಾಗಿವೆ. ಆದರೆ ಮಾಸ್ಕ್ ಗಳು ನಮ್ಮ ದೈನಂದಿನ ಜೀವನದ ಭಾಗವಾಗಿವೆ. ಮಾಸ್ಕ್ ನಿಂದ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗಗಳಿಲ್ಲ. ಸೂಕ್ತ ಕ್ರಮಗಳನ್ನು ವಹಿಸಿದರೆ ಕೆಟ್ಟ ವಾಸನೆ ಹಾಗೂ ಬಾಯಿ ಒಣಗುವುದನ್ನು ತಪ್ಪಿಸಬಹುದು ಎಂದು ದಂತವೈದ್ಯ ಡಾ.ಮನೋಜ್ ಚಾಂಡಿ ತಿಳಿಸಿದ್ದಾರೆ.

ಎಂಟು ಗಂಟೆಗೂ ಅಧಿಕ ಕಾಲ ಮಾಸ್ಕ್ ಧರಿಸಿ ಕೆಲಸ ಮಾಡುವ ಹಲವು ಸ್ನೇಹಿತರು ಹಾಗೂ ಸಂಬಂಧಿಕರು ಕೆಟ್ಟ ವಾಸನೆ ಹಾಗೂ ಬಾಯಿ ಒಣಗುವ ಕುರಿತು ದೂರುತ್ತಿದ್ದಾರೆ. ಇತ್ತೀಚೆಗೆ ನಾನು ನಡೆಸಿದ ಆನ್‍ಲೈನ್ ಅಧ್ಯಯನದ ಪ್ರಕಾರ ಶೇ.16ರಷ್ಟು ಜನ ಕೆಟ್ಟ ವಾಸನೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ ಶೇ.22ರಷ್ಟು ಜನಕ್ಕೆ ಬಾಯಿ ಒಣಗುವ ಅನುಭವವಾಗಿದೆ. ಸುಮಾರು 514 ಜನ ಈ ಪ್ರಶ್ನಾವಳಿಗೆ ಪ್ರತಿಕ್ರಿಯಿಸಿದ್ದಾರೆ. ಅಧ್ಯಯನದಲ್ಲಿ ಭಾಗವಹಿಸಿದವರ ಸಂಖ್ಯೆ ಹೆಚ್ಚಾಗಿದ್ದರೆ, ಸಮಸ್ಯೆ ಎದುರಿಸುತ್ತಿರುವವರ ಶೇಕಡಾವಾರು ಹೆಚ್ಚಾಗುತ್ತಿತ್ತು ಎಂದು ಡಾ.ಮಣಿಕಂಠನ್ ಜಿ.ಆರ್. ತಿಳಿಸಿದ್ದಾರೆ.

ಸಾಮಾನ್ಯವಾಗಿ ಬಾಯಿಯ ಮೂಲಕ ಉಸಿರಾಡುವ ಜನ ಮತ್ತು ಬಾಯಿಯ ಸ್ವಚ್ಛತೆ ಕಾಪಾಡದವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇಂತಹವರಿಗೆ ಒಸಡುಗಳ ಊರಿಯೂತ ಹಾಗೂ ಹಲ್ಲು ನೋವು ಹೆಚ್ಚಾಗುವ ಸಾಧ್ಯತೆ ಇದೆ. ಬಾಯಿಯ ಮೂಲಕ ಉಸಿರಾಡುವುದರಿಂದ ಒಸಡುಗಳು ಒಣಗಬಹುದು. ಒಣ ಬಾಯಿಯ ಸಂದರ್ಭದಲ್ಲಿ ಲಾಲಾರಸ ಕಡಿಮೆಯಾಗುತ್ತದೆ. ಇದರಿಂದ ಬ್ಯಾಕ್ಟೀರಿಯಾ ಹೆಚ್ಚಾಗಿ ಬಾಯಿಯ ಸಮಸ್ಯೆಗಳು ಉಂಟಾಗುತ್ತವೆ. ಮಾಸ್ಕ್ ಹಾಕಿದಾಗ ಕೆಲವರು ತಮಗೆ ಅರಿವಾಗದಂತೆ ಬಾಯಿಯ ಮೂಲಕ ಉಸಿರಾಡುತ್ತಾರೆ. ಇದು ಹಲ್ಲಿನ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಡಾ.ಮಣಿಕಂಠನ್ ಅಭಿಪ್ರಾಯಪಟ್ಟಿದ್ದಾರೆ.

ಸಮಸ್ಯೆಗೆ ಪರಿಹಾರವೇನು?
ಅಂಗಡಿಗಳಲ್ಲಿ ಕೆಲಸ ಮಾಡುವವರು, ಖಾಸಗಿ ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಮಾತ್ರವಲ್ಲ ಆರೋಗ್ಯ ವಲಯದಲ್ಲಿ ಕೆಲಸ ಮಾಡುವವರು ಸಹ ಬಾಯಿಯ ಸಮಸ್ಯೆ ಕುರಿತು ದೂರುತ್ತಿದ್ದಾರೆ. ದೈನಂದಿನ ಆಹಾರ ಕ್ರಮದಲ್ಲಿ ಸಂಸ್ಕರಿಸಿದ ಆಹಾರಕ್ಕಿಂತ ಹೈಡ್ರೆಟೆಡ್ ಹಾಗೂ ಫೈಬರ್‍ಯುಕ್ತ ಆಹಾರ ಸೇವಿಸುವುದರಿಂದ ಸಮಸ್ಯೆಯಿಂದ ದೂರವಿರಬಹುದಾಗಿದೆ. ಅಲ್ಲದೆ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರು ಒಂದು ಗಂಟೆಗೊಮ್ಮೆ ಮಾಸ್ಕ್ ತೆಗೆದು 5 ನಿಮಿಷಗಳ ವಿರಾಮ ತೆಗೆದುಕೊಳ್ಳಬಹುದು. ಒಬ್ಬರೇ ಇದ್ದಾಗ ಮಾತ್ರ ಈ ರೀತಿ ಮಾಡಬೇಕು ಎಂದು ಡಾ.ಮನೋಜ್ ಸಲಹೆ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *