Connect with us

Districts

ಫೋಟೋ ನೋಡಿದ್ರೆ ಯಾಕಾದ್ರೂ ಇವ್ನ ಮದ್ವೆಯಾದೆ ಅಂತ ಅನಿಸ್ತಿದೆ – ಡೆತ್‍ನೋಟ್‍ನಲ್ಲಿ ಟೆಕ್ಕಿ ಪತ್ನಿಯ ಕಣ್ಣೀರು

Published

on

– ಮದ್ವೆಯಾದ ಒಂದು ತಿಂಗಳಲ್ಲೇ ಟೆಕ್ಕಿ ಪತ್ನಿ ಆತ್ಮಹತ್ಯೆ
– ಭಾವನೆಗಳು ಉಳಿದಿಲ್ಲ, ಜೀವನ ಖಾಲಿಯಾಗಿದೆ
– ತಾಯಿ ಚಾಮುಂಡಿ ನಿಮಗೆ ಒಳ್ಳೆದು ಮಾಡಲಿ

ಮೈಸೂರು: ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದ ನಗರದಲ್ಲಿ ನಡೆದಿದೆ. ಇದೀಗ ಪತ್ನಿ ಬರೆದಿರುವ ಡೆತ್‍ನೋಟ್ ಲಭ್ಯವಾಗಿದೆ.

ಭಾವನಾ (24) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಮೃತ ಭಾವನಾ ಒಂದು ತಿಂಗಳ ಹಿಂದೆ ಸಾಫ್ಟ್ ವೇರ್ ಎಂಜಿನಿಯರ್ ಅಜಯ್ ಎಂಬಾತನನ್ನ ವಿವಾಹವಾಗಿದ್ದಳು. ಆದರೆ ಪತಿ ಅಜಯ್ ಮತ್ತೊಂದು ಯುವತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಆ ಫೋಟೋಗಳು ಅಜಯ್ ಮೊಬೈಲ್‍ನಲ್ಲಿದ್ದವು. ಯುವತಿಯ ಜೊತೆ ಅಶ್ಲೀಲವಾಗಿ ಇದ್ದಂತಹ ಫೋಟೋವನ್ನು ಭಾವನಾ ನೋಡಿದ್ದಾಳೆ. ಇದರಿಂದ ನೊಂದು ಮೊಬೈಲಿನಲ್ಲೇ ಡೆತ್‍ನೋಟ್ ಬರೆದು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಡೆತ್‍ನೋಟಿನಲ್ಲಿ ಏನಿದೆ?
ಜೀವನ ತುಂಬಾ ಬೇಸರವಾಗಿದೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನಗೆ ಮದುವೆಯಾಗುವುದಕ್ಕೆ ಇಷ್ಟವಿರಲಿಲ್ಲ. ನನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಆಸೆ ಇತ್ತು. ಆದರೆ ಮನೆಯಲ್ಲಿ ಮದುವೆಗೆ ಬಲವಂತ ಮಾಡಿದರು. ಒಳ್ಳೆಯ ಕಡೆ ಸಂಬಂಧ ನೋಡುತ್ತೇವೆ ಮದುವೆ ಮಾಡಿಕೋ ಎಂದು ಒಪ್ಪಿಸಿದರು. ಆ ಮೇಲೆ ಅಜಯ್ ಸಂಬಂಧ ಬಂತು. ನನಗೆ ನೋಡುವುದಕ್ಕೆ ಇಷ್ಟವಿರಲಿಲ್ಲ. ನಮ್ಮ ಮನೆಯವರ ಮಾತನ್ನು ಕೇಳಲಾಗದೇ ಅಜಯ್ ಮನೆಗೆ ಹೋಗಿದ್ದೆ. ಆದರೆ ಅವರು ಮನೆಯಲ್ಲಿ ಇರಲಿಲ್ಲ. ಅವರ ಕುಟುಂಬದವರನ್ನು ಭೇಟಿ ಮಾಡಿ ಮಾತನಾಡಿ ಬಂದಾಗ ನಾನು ಮದುವೆಗೆ ಒಪ್ಪಿಕೊಂಡೆ.

ಅಜಯ್ ಕೂಡ ಈ ವಿವಾಹಕ್ಕೆ ಒಪ್ಪಿಕೊಂಡರು. ಆದರೆ ಅವರ ಜೀವನದಲ್ಲಿ ನನಗಿಂತ ಮುಂಚಿತವಾಗಿ ಅನುಷಾಳನ್ನು ಇಷ್ಟಪಟ್ಟಿದ್ದರು. ಅವಳ ಜೊತೆ ಸಂಬಂಧ ಕೂಡ ಇತ್ತು. ನನಗೆ ಮದುವೆಗೆ ಮುಂಚಿತವಾಗಿ ಈ ಬಗ್ಗೆ ಗೊತ್ತಿರಲ್ಲ. ಆದರೆ ಅವರ ಜೀವನದಲ್ಲಿ ಒಂದು ಫ್ಯಾಶ್ ಬ್ಯಾಕ್ ಇದೆ ಎನ್ನುವುದು ಆಮೇಲೆ ತಿಳಿಯಿತು. ಮದುವೆ ಆದ ಮೇಲೆ ಸಂಬಂಧದ ಬಗ್ಗೆ ಗೊತ್ತಾಯಿತು. ಅವರ ಫೋನಿನಲ್ಲಿದ್ದ ವಾಲ್ಟ್ ಆ್ಯಪ್‍ನ ಹ್ಯಾಕ್ ಮಾಡಿ ಅಲ್ಲಿದ್ದ ಫೋಟೋಗಳನ್ನು ನೋಡಿ ನನ್ನ ಮನಸ್ಸು ಒಡೆದು ಹೋಯಿತು. ಅದರಲ್ಲಿ ನಗ್ನ, ಕಿಸ್ ಫೋಟೋ, ರೂಮಿನಲ್ಲಿ ಒಟ್ಟಿಗಿದ್ದ ಫೋಟೋ, ಕೊಡೈಕೆನಾಲ್ ಹೋಗಿದ್ದ ಫೋಟೋ, ವಿಡಿಯೋಳನ್ನು ನೋಡಿ ನನಗೆ ಅಸಹ್ಯವಾಯಿತು. ನಾನು ಯಾಕಾದರೂ ಇವನನ್ನು ಮದುವೆಯಾದೆ ಎಂದು ನನ್ನ ಜೀವನದ ಮೇಲೆ ನನಗೆ ಜಿಗುಪ್ಸೆ ಬಂತು.

ಈ ಬಗ್ಗೆ ಮನೆಯವರೆಗೆ ಗೊತ್ತಾಗಿ ಜಗಳವಾಯಿತು. ನಮ್ಮ ಅತ್ತೆ ಬಂದು ಸಮಾಧಾನ ಮಾಡಿ ರಾಜಿ ಮಾಡಿಸಿದರು. ಅವರು ಕ್ಷಮೆ ಕೇಳಿ ಕಣ್ಣೀರು ಹಾಕಿದರು. ನಾನು ಸರಿ ಎಂದು ಮನೆಗೆ ಹೋದೆ. ಆದರೆ ನನಗೆ ಈ ಜೀವನ ಬೇಡ ಅನಿಸುತ್ತಿದೆ. ಕಣ್ಣು ಮುಚ್ಚಿದರೂ ಅವರು ಅವಳ ಜೊತೆಗಿದ್ದ ಫೋಟೋಗಳೇ ಕಣ್ಣ ಮುಂದೆ ಬರುತ್ತವೆ. ಎಲ್ಲಾ ಮರೆತು ಮುಂದೆ ಹೋದರೂ ಹಳೆಯದು ನೆನಪಾದಾಗ ತುಂಬಾ ಹಿಂಸೆ ಅನಿಸುತ್ತೆ. ನನಗೆ ಈ ಜೀವನದ ಮೇಲೆ ಆಸಕ್ತಿಯೂ ಇಲ್ಲ. ಇಷ್ಟು ದಿನ ನಾನು ಇಷ್ಟಪಡುವ ಜನರಿಗೋಸ್ಕರ ಆದರೂ ಬದುಕಿರಬೇಕು ಎಂದು ಬದುಕಿದ್ದೆ. ಈಗ ನನಗೆ ಯಾವ ಭಾವನೆಗಳು ಉಳಿದಿಲ್ಲ. ಜೀವನೇ ಖಾಲಿಯಾಗಿದೆ.

ನನ್ನ ಬದುಕನ್ನು ಮುಗಿಸುವ ನಿರ್ಧಾರ ಮಾಡಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ. ನಾನು ಯಾಕೆ ಹೀಗೆ ಮಾಡಿಕೊಂಡೆ ಎಂಬ ಪ್ರಶ್ನೆ ಬರಬಾರದು. ಇಲ್ಲದೆ ಇರುವ ಕಥೆಗಳು ಹುಟ್ಟಿಕೊಳ್ಳಬಾರದು ಎಂಬ ಉದ್ದೇಶದಿಂದ ನಾನು ಇಷ್ಟೆಲ್ಲಾ ಹೇಳಿದೆ. ನನಗೆ ಯಾರೂ ಏನು ಹೇಳಿಲ್ಲ. ಯಾರೂ ಬೈದಿಲ್ಲ. ನನ್ನ ಮನಸ್ಸಿನ ನೋವನ್ನ ತಡೆಯಲು ಸಾಧ್ಯವಾಗದೇ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಎಲ್ಲಾ ಮರೆತು ಆರಾಮಾಗಿ ಇರೋಣ ಅಂದುಕೊಂಡೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ನನಗೆ ಅಜಯ್ ಮುಖ ನೋಡಿದರೆ ಆ ಹಳೆಯ ಫೋಟೋಗಳೇ ನೆನಪು ಬರುತ್ತದೆ. ಕಣ್ಣು ಮುಚ್ಚಿದರೂ ಆ ಫೋಟೋಗಳೇ ನೆನಪಾಗಿ ತುಂಬಾ ನೋವಾಗುತ್ತದೆ. ನಾನು ಮಾನಸಿಕವಾಗಿ ತುಂಬಾ ನೊಂದಿದ್ದೇನೆ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ನಾನು ತೆಗೆದುಕೊಂಡಿರುವ ನಿರ್ಧಾರ ತಪ್ಪು ಎಂದು ನನಗೆ ಗೊತ್ತು. ದಯವಿಟ್ಟು ನನ್ನನ್ನು ಕ್ಷಮಿಸಿ. ನೀವು ಜೀವನ ಪೂರ್ತಿ ಖುಷಿಯಾಗಿ, ಆರಾಮವಾಗಿ, ನೆಮ್ಮದಿಯಾಗಿ ಇರಲಿ ಅಂತ ನಾನು ಆಶಿಸುತ್ತೇನೆ. ತಾಯಿ ಚಾಮುಂಡಿ ನಿಮಗೆ ಒಳ್ಳೆದು ಮಾಡಲಿ ಎಂದು ಡೆತ್‍ನೋಟಿನಲ್ಲಿ ಭಾವನಾ ಬರೆದಿದ್ದಾಳೆ.

ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.