Tuesday, 19th March 2019

ಸುಳ್ವಾಡಿ ವಿಷ ದುರಂತ – ಡಿಸ್ಚಾರ್ಜ್ ಆಗಿದ್ದವರು ತಡರಾತ್ರಿ ಮತ್ತೆ ಆಸ್ಪತ್ರೆಗೆ ದಾಖಲು

ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸ್ಚಾರ್ಜ್ ಆದ ಅಸ್ವಸ್ಥರು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿಷಪ್ರಸಾದ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಅಸ್ವಸ್ಥರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದರೆ ಅವರಿಗೆ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಡರಾತ್ರಿ ಮೂವರು ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಎಂ.ಜಿ.ದೊಡ್ಡಿ ನಿವಾಸಿಗಳಾದ ಪಳನಿಯಮ್ಮ, ಮಾದಮ್ಮ ಮತ್ತು ಮಾದ ಆಸ್ಪತ್ರೆಗೆ ದಾಖಲಾಗಿರುವ ಅಸ್ವಸ್ಥರು.

ಈ ಮೂವರು ಡಿಸೆಂಬರ್ 20 ರಂದು ಮೈಸೂರು ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಆದರೆ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರನ್ನು ವೈದ್ಯರು ಪರೀಕ್ಷೆ ಮಾಡಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಒಂದು ವೇಳೆ ಆರೋಗ್ಯದಲ್ಲಿ ಮತ್ತೆ ಏರುಪೇರಾದರೆ ಮೈಸೂರಿಗೆ ಕರೆತರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ತಿಂದು 17 ಮಂದಿ ಮೃತಪಟ್ಟಿದ್ದು, ಇನ್ನೂ ಅನೇಕರು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ಕುರಿತು ಪೊಲೀಸ್ ತನಿಖೆ ನಡೆಯುತ್ತಿದ್ದು, ನಾಲ್ವರು ಆರೋಪಿಗಳಾದ ಇಮ್ಮಡಿ ಮಹದೇವ ಸ್ವಾಮಿ, ಅಂಬಿಕಾ, ಮಾದೇಶ ಮತ್ತು ದೊಡ್ಡಯ್ಯ ಇವರನ್ನು ಮೈಸೂರು ಜೈಲಿಗೆ ಕಳುಹಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *