Connect with us

Corona

ಕೊರೊನಾ ವಿರುದ್ಧ ಹೋರಾಡಿ ಸಾವನ್ನ ಗೆದ್ದ ಅಸ್ತಮಾ, ಬಿಪಿಯಿಂದ ಬಳಲುತ್ತಿದ್ದ 68ರ ವೃದ್ಧೆ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ಅಂದ್ರೆ ಇಲ್ಲಿನ ಜನ ಎಷ್ಟು ಭಯ ಬೀತರಾಗುತ್ತಿದ್ದರೋ ವೆನ್ಲಾಕ್‍ನ ಕೋವಿಡ್-19 ಆಸ್ಪತ್ರೆ ಅಂದ್ರೂ ಕೂಡ ಅಷ್ಟೇ ಭಯ ಬೀಳುತ್ತಿದ್ದರು. ಯಾಕಂದ್ರೆ ವೆನ್ಲಾಕ್‍ನ ಕೋವಿಡ್ ಐಸಿಯು ಒಳಗೆ ಹೋದ್ರೆ ಸಾಕು ಯಮಲೋಕಕ್ಕೆ ಹೋಗುತ್ತಾರೆ ಎನ್ನುವ ಮಾತುಗಳನ್ನಾಡುತ್ತಿದ್ದರು. ಆದರೆ ಈಗ ಅದೇ ಐಸಿಯುನಲ್ಲಿ ಒಂದು ಅಚ್ಚರಿ ನಡೆದಿದೆ. ಇನ್ನೇನು ಸತ್ತೆ ಹೋದರು ಎನ್ನುವ ವೃದ್ಧೆಯೊಬ್ಬರು ಫಿನಿಕ್ಸ್ ನಂತೆ ಎದ್ದು ಬಂದಿದ್ದಾರೆ.

ಕರಾವಳಿಗೆ ಯಾವಾಗ ಕೊರೊನಾ ಆಗಮಿಸಿ ಟಕ್ಕರ್ ಕೊಟ್ಟಿತ್ತೊ ಆಗಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡಲಾಗಿತ್ತು. ಇಡೀ ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಬಳಿಕ ಐಸಿಯುಗಳನ್ನು ಕೋವಿಡ್ ಐಸಿಯುಗಳಾಗಿ ಮಾರ್ಪಾಡು ಮಾಡಲಾಗಿತ್ತು. ಮೊದಲು ಐಸಿಯುಗೆ ಸೇರಿದ ಐದು ಮಹಿಳೆಯರು ಮತ್ತು ವೃದ್ಧೆಯರು ಅಲ್ಲೇ ಸಾವನ್ನಪ್ಪಿದ್ದರು. ಈ ಐಸಿಯು ಸೇರಿದ್ರೆ ಸೀದ ಯಮಲೋಕಕ್ಕೆ ಟಿಕೇಟ್ ಅಂತ ಜನರು ಮಾತನಾಡಿಕೊಳ್ಳಲು ಆರಂಭಿಸಿದ್ದರು. ಆದ್ದರಿಂದ ಕೊರೊನಾ ಬಂದವರು ಈ ಆಸ್ಪತ್ರೆ ಸೇರಲು ಹೆದರುತ್ತಿದ್ದರು. ಸದ್ಯ ಈ ಐಸಿಯುನಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ.

ಮಂಗಳೂರು ಹೊರವಲಯದ ಸುರತ್ಕಲ್‍ನ 68 ವರ್ಷದ ವೃದ್ಧೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ತೋರಿಸಿದ್ದಾಗ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಮೇ 15ರಂದು ಬಂದ ರಿಪೋರ್ಟ್ ನಲ್ಲಿ ಕೊರೊನಾ ತಗುಲಿರುವುದು ದೃಢಪಟ್ಟಿತ್ತು. ವೃದ್ಧೆಗೆ ಅಸ್ತಮಾ, ಬಿಪಿ, ಶುಗರ್ ಸೇರಿದಂತೆ ವಿವಿಧ ಕಾಯಿಲೆ ಬಳಲುತ್ತಿದ್ದ ಅವರನ್ನು ವೆನ್ಲಾಕ್‍ನ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಅವರ ಆರೋಗ್ಯ ಯಾವ ಪರಿ ಹಾಳಾಗಿತ್ತೆಂದರೆ ಅವರು ಸಾವನ್ನಪ್ಪೇ ಬಿಟ್ಟರು ಅಂತ ಜನರು ಮಾತನಾಡಿಕೊಂಡಿದ್ದರು. ಆದರೆ ವೃದ್ಧೆ ಸುಮಾರು 14 ದಿನಗಳ ಕಾಲ ಕೊರೊನಾದ ವಿರುದ್ಧ ಹೋರಾಡಿ ಗೆದ್ದಿದ್ದಾರೆ.

ವೆನ್ಲಾಕ್‍ನ ಐಸಿಯುನಲ್ಲಿ ಎಲ್ಲಾ ಬಗೆಯ ಅನುಕೂಲಗಳಿವೆ. ಆಲ್ಟ್ರಾ ಸೌಂಡ್ ಸ್ಕಾನ್‍ನಿಂದ ಹಿಡಿದು ಎಲ್ಲಾ ಬಗೆಯ ಟೆಸ್ಟ್ ಗಳನ್ನು ಇಲ್ಲೇ ಮಾಡುವಂತೆ ಸೆಟ್ ಮಾಡಲಾಗಿದೆ. ಅವರಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ಕೊಡಲು ಪೂರಕ ವಾತರವರಣ ನಿರ್ಮಿಸಿಕೊಡಲಾಗಿದೆ. ಅಷ್ಟೇ ಅಲ್ಲದೆ ಇಲ್ಲಿ ಪ್ರತಿ ವಿಭಾಗಕ್ಕೂ ಸ್ಪೆಷಲಿಸ್ಟ್ ವೈದ್ಯರು ಇದ್ದು ಅವರಿಂದ ಚಿಕಿತ್ಸೆ ಕೊಡಿಸಲಾಗುತ್ತೆ. ವೈದ್ಯಕೀಯ ಸಿಬ್ಬಂದಿ ಕೂಡ ಇಲ್ಲಿದ್ದಾರೆ.

68 ವರ್ಷದ ವೃದ್ಧೆಯ ಶ್ವಾಸಕೋಶಕ್ಕೂ ಕೂಡ ಕೊರೊನಾ ಸೋಂಕು ಹಾನಿ ಮಾಡಿದ್ದನ್ನು ಕೂಡ ಇಲ್ಲಿ ಗುಣಪಡಿಸಿದ್ದಾರೆ. ವೃದ್ಧೆಯ ಜೊತೆ ಮತ್ತೊರ್ವ ಪಾಶ್ರ್ವವಾಯುವಿನಿಂದ ಬಳಲುತ್ತಿದ್ದ ಕೊರೊನಾ ಸೋಂಕಿ ರೋಗಿ ಕೂಡ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜನರಲ್ ವಾರ್ಡ್ ನಲ್ಲಿದ್ದ 10 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಐಸಿಯುನಲ್ಲಿ ಇನ್ನೆರಡು ಜನ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಮುಂದಿನ 48 ಗಂಟೆಗಳಲ್ಲಿ ಡಿಸ್ಚಾರ್ಜ್ ಆಗುವ ಭರವಸೆ ಇದೆ. ವೈದ್ಯರು ಕೋವಿಡ್ ವಾರಿಯರ್ಸ್ ಗಳಾಗಿ ಕೆಲಸ ಮಾಡುತ್ತಿದ್ದಾರೆ.

ವೈದ್ಯರ ಚಿಕಿತ್ಸೆಗೆ ರೋಗಿಗಳು ಕೂಡ ಅಷ್ಟೇ ಸ್ಪಂದಿಸುತ್ತಿದ್ದಾರೆ. ಸಾಲು ಸಾಲು ಕೊರೊನಾ ಸಾವನ್ನು ಕಂಡಿದ್ದ ಕೋವಿಡ್ ಐಸಿಯು ವೆನ್ಲಾಕ್ ಈಗ ಆ ಕಳಂಕದಿಂದ ಹೊರಬಂದಿದೆ.