Connect with us

Dakshina Kannada

ಸೂಕ್ಷ್ಮಾಣು ಜೀವಿಯಿಂದ ಸಮುದ್ರದಲ್ಲಿ ನೀಲಿ ಬೆಳಕಿನ ವಿಸ್ಮಯ

Published

on

ಕಾರವಾರದಿಂದ ಉಳ್ಳಾಲದ ಸೋಮೇಶ್ವರದವರೆಗೆ, ಅರಬ್ಬೀ ಸಮುದ್ರದ ಪ್ರಕಾಶಮಾನವಾದ ನೀಲ ತೆರೆಗಳ ಸುದ್ದಿ ಜನರ ಕುತೂಹಲ ಕೆರಳಿಸಿದ್ದು, ಜನರು ನಿದ್ದೆಗೆಟ್ಟು ರಾತ್ರಿಯೆಲ್ಲಾ ಸಮುದ್ರ ತೀರದಲ್ಲಿ ಗುಂಪಾಗಿ ಸೇರಿ ಈ ಪ್ರಕೃತಿಯ ರಮಣೀಯ ವಿಸ್ಮಯವನ್ನುಕಣ್ತುಂಬಿ, ನೀಲ ತೆರೆಗಳಲ್ಲಿ ಮಿಂದೆದ್ದು ಸಂಭ್ರಮಿಸುತ್ತಿದ್ದಾರೆ. ಬಿಸಿಲ ಝಳದ ಹಗಲಿಗೆ ಅರ್ಥಪೂರ್ಣ ವಿರಾಮವನ್ನು ನೀಡುವ ಈ ನೀಲ ಹಿಮದಂತಹ ತೆರೆಗಳ ವಿರಳ ವಿದ್ಯಮಾನಕ್ಕೆ ಕಾರಣವಾದರೂ ಏನು ಎಂದು ಎಲ್ಲರಲ್ಲಿ ಸದ್ಯಕ್ಕಿರುವ ಪ್ರಶ್ನೆ.

ಮಿಂಚುಹುಳ ಹೇಗೆ ಹಸಿರು ಬಣ್ಣ ಸೂಸುತ್ತದೋ ಅದೇ ರೀತಿ ಸ್ವ ಪ್ರಕಾಶವನ್ನುಹೊರಸೂಸುವ ಸೂಕ್ಷ್ಮಜೀವಿಗಳು ಇದಕ್ಕೆ ಕಾರಣ. ಇಂತಹ ವಿದ್ಯಮಾನಕ್ಕೆ ವಿಜ್ಞಾನದಲ್ಲಿ ಬಯೋ ಲುಮಿನೆಸ್ಸ್ನನ್ಸ್ (Bioluminescence) ಎಂದು ಕರೆಯುತ್ತಾರೆ . ಅಂದರೆ ಸ್ವ ಪ್ರಕಾಶವನ್ನು ಉತ್ಸರ್ಜಿಸುವ ಜೀವಿಗಳುಎಂದರ್ಥ. ಪಾಚಿಯಂತೆ ಕಾಣುವ ಈ ಏಕಕೋಶ ಜೀವಿಗಳು ಅದೇಕೋ ಈ ವರ್ಷ ಅತ್ಯಧಿಕ ಸಂತಾನಾಭಿವೃದ್ಧಿ ಹೊಂದಿ ಕರಾವಳಿಯಾದ್ಯಂತ ತುಂಬಿಹೋಗಿವೆ.

ಸಾಮಾನ್ಯವಾಗಿ ಮಳೆಗಾಲದ ನಂತರ ಕಲುಷಿತ ಕೆರೆ, ನದಿಗಳು ಹೇಗೆ ಪಾಚಿಕಟ್ಟಿ ನೀರೆಲ್ಲಾ ಪಚ್ಚೆಯಾಗುತ್ತದೋ ಅದೇರೀತಿ ಈ ವರ್ಷ ನದಿಗಳಿಂದ ಕೊಚ್ಚಿ ಬಂದ ಕಶ್ಮಲಗಳು ಈ ಜೀವಿಗಳ ಸಂತಾನಾಭಿವೃಧಿಗೆ ಕಾರಣವಾಗಿರಬೇಕು. ಅದಲ್ಲದೆ ಸಾಗರದ ತಾಪಮಾನವು ವಾತಾವರಣದ ತಾಪಮಾನಕ್ಕಿಂತ ಒಂದೆರಡು ಡಿಗ್ರಿ ಹೆಚ್ಚಾಗಿರುವ ಕಾರಣ ಈ ಜೀವಿಗಳ ಬೆಳವಣಿಗೆಗೆ ಪ್ರೋತ್ಸಾಹ ಸಿಕ್ಕಿರಬಹುದುಎಂದು ಅಂದಾಜಿಸಲಾಗಿದೆ.

ಮೇಲ್ನೋಟಕ್ಕೆ ಸಣ್ಣಜೀವಿಯಾದರೂ ಅದ್ಭುತ ವಿಸ್ಮಯಗಳನ್ನುಒಡಲಲ್ಲಿ ಹೊತ್ತಿರುವ ಈ ಜೀವಿಯನ್ನು ಸೆರೆಹಿಡಿದು ಸಂತ ಅಲೋಶಿಯಸ್ ಕಾಲೇಜಿನ ಅನ್ವಯಿಕ ಜೀವಶಸ್ತ್ರ ಪ್ರಯೋಗಾಲಯದಲ್ಲಿ ವಿಶ್ಲೇಷಿಸಿ, ಗುರುತಿಸಿದಾಗ ಇದೊಂದು ಸ್ವತಃ ಹರಿತ್ತು ರಹಿತ ಪರಾವಲಂಬಿ ಜೀವಿಯಾದ ನೊಕ್ಟಿಲುಕಾ ಸಿಂಟಿಲಾನ್ಸ್ (Noctiluca Scintillans) ಎಂದು ತಿಳಿದುಬಂದಿದೆ. ಈ ಜೀವಿಯು ಇತರ ಸಣ್ಣಪುಟ್ಟ ಸಾಗರದ ಪಾಚಿಗಳನ್ನುತಿಂದು ಬದುಕುತ್ತದೆ. ಮಾತ್ರವಲ್ಲದೆ, ಕೆಲವು ಸಣ್ಣ ಪಾಚಿ ಜಾತಿಗೆ ಸೇರಿದ ಜೀವಿಗಳು ಈ ಜೀವಿಯ ಒಡಲಿನೊಳಗೆ ಸಹಬಾಳ್ವೆಯ ಜೀವನ ನಡೆಸುತ್ತವೆ. ಹೀಗಾಗಿ ಹಗಲಿನ ಹೊತ್ತಿನಲ್ಲಿ ಪಾಚಿಯ ಇರುವಿಕೆಯಿಂದಾಗಿ ಸಾಗರವೆಲ್ಲಾ ಹಸುರಾಗಿ ಕಾಣುತ್ತದೆ.

ನೊಕ್ಟಿಲುಕಾ ಸಿಂಟಿಲಾನ್ಸ್, ಡೈನೋಫ್ಲಾಜೆಲೇಟ್ (Dinoflagellate) ಎಂಬ ಪಾಚಿಯ ಜಾತಿಗೆ ಸೇರಿದ ಏಕಕೋಶ ಜೀವಿಯಾಗಿದ್ದು ಸೂಕ್ಷ್ಮ ದರ್ಶಕದಲ್ಲಿ ಅನ್ವೇಷಿಸಿದಾಗ ಬಲೂನ್ ಆಕೃತಿಯನ್ನು ಹೋಲುತ್ತದೆ. ಇದಕ್ಕೊಂದು ಈಜಾಡಲು ನೆರವಾಗುವ  ಬಾಲತಂತಹ ಅಂಗವಿದ್ದು, ಇದನ್ನು ಪ್ಲಾಜೆಲ್ಲಮ್ (Flagellum) ಎಂದು ಕರೆಯುತ್ತಾರೆ. ಈ ಬಾಲದ ತುದಿಯು ಚಮಚೆಯ ಆಕೃತಿಯಂತಿದ್ದು, ಇತರ ಸಣ್ಣ ಪಾಚಿಯನ್ನು ಹಿಡಿದು ತಿನ್ನಲು ಸಹಕಾರಿಯಾಗಿದೆ. ಈ ಜೀವಿಯ ದೇಹದಲ್ಲಿ ಲೂಸಿಫೆರಿನ್ ಎಂಬ ರಾಸಾಯನಿಕವು ಲೂಸಿಫೆರೇಸ್ ಎಂಬ ಕಿಣ್ವದ ಸಹಾಯದಿಂದ ಆಮ್ಲಜನಕದೊಂದಿಕೆ ವರ್ತಿಸಿದಾಗ ನೀಲಿ ಬೆಳಕು ಪ್ರಜ್ವಲಿಸುತ್ತದೆ. ಮುಟ್ಟಿದರೆ ಮುನಿ ಸಸ್ಯವು ಹೇಗೆ ಸ್ಪರ್ಶವನ್ನು ಗ್ರಹಿಸಿ ಎಲೆ ಮುದುಡಿಸುತ್ತದೋ, ಅದೇ ರೀತಿ ಈ ಜೀವಿ ಅಲೆಗಳ ಹೊಡೆತ, ಕದಡು ವಿಕೆಯನ್ನು ಗ್ರಹಿಸಿ ನೀಲಿ ಬಣ್ಣವನ್ನು ಹೊರಸೂಸುತ್ತದೆ.

ಜೀವಜಗತ್ತಿನಲ್ಲಿ ಇಂತಹ ಹಲವಾರು ಸ್ವಪ್ರಜ್ವಲಿಸುವ ಜೀವಿಗಳಿದ್ದು, ಮಿಂಚುಹುಳ, ಮಿನುಗುವ ಅಣಬೆಗಳು, ಮೀನುಗಳು, ಕೆಲ ಜಾತಿಯ ಆಳಸಾಗಲಾರದ ಜೀವಿಗಳು ಇದಕ್ಕೆ ಉದಾಹರಣೆ. ಒಟ್ಟಿನಲ್ಲಿ ಈ ಎಲ್ಲ ವಿದ್ಯಮಾನವು ಮಾನವನ ಚಟುವಟಿಕೆಗಳಿಂದ ಕಲುಷಿತಗೊಂಡ ಸಮುದ್ರವು ನೀಡುವ ಎಚ್ಚರಿಕೆಯ ಸಂದೇಶ ಎಂದು ಅರ್ಥೈಸಿದರೆ ತಪ್ಪಾಗಲಾರದು. ಈ ಜೀವಿಗಳ ವಿಪರೀತ ಬೆಳವಣಿಗೆಯಿಂದಾಗಿ ಸಮುದ್ರದ ಅಮೋನಿಯಾ ಮಟ್ಟ ಹೆಚ್ಚಿ ಜೀವ ಸಂತುಲತೆ ತಪ್ಪಿ ಇತರೆ ಜೀವಿಗಳಿಗೆ ಕಂಟಕಪ್ರಾಯವಾಗುವುದರೊಂದಿಗೆ ಮೀನುಗಾರಿಕೆಗೆ ಹೊಡೆತ ಬೀಳುವ ಸಾಧ್ಯಾಸಾಧ್ಯತೆಗಳು ಇದ್ದು, ಈ ವಿದ್ಯಮಾನಗಳ ಕೂಲಂಕಷ ಸಂಶೋಧನೆಯ ಅಗತ್ಯವಿದೆ.

– ಸಚಿನ್‌ ಪಟವರ್ಧನ್‌

(ಲೇಖಕರು ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಅನ್ವಯಿಕ ಜೀವಶಾಸ್ತ್ರಸಂಶೋಧಕರಾಗಿದ್ದಾರೆ)

Click to comment

Leave a Reply

Your email address will not be published. Required fields are marked *

www.publictv.in