Connect with us

Bengaluru City

ದೇಶ ಸೇವೆಗೆ ಪುತ್ತೂರಿನ ಇಬ್ಬರು ಯುವತಿಯರು ಆಯ್ಕೆ- ಏಪ್ರಿಲ್ 1ರಿಂದ ಕರ್ತವ್ಯಕ್ಕೆ ಹಾಜರು

Published

on

– ಬಿ.ವೈ ವಿಜಯೇಂದ್ರ ಅಭಿನಂದನೆ

ಬೆಂಗಳೂರು/ಮಂಗಳೂರು: ದೇಶ ಸೇವೆ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಇಬ್ಬರು ಯುವತಿಯರು ಆಯ್ಕೆಯಾಗಿದ್ದಾರೆ. ಇದೀಗ ಈ ಯುವತಿಯರಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ವಿಜಯೇಂದ್ರ, ಹೆಣ್ಣು ಅಬಲೆಯಲ್ಲ, ಆಕೆಯ ಸಾಮರ್ಥ್ಯಕ್ಕೆ ತಕ್ಕ ಪ್ರೋತ್ಸಾಹ ಮತ್ತು ಅವಕಾಶ ದೊರೆತಾಗ ಅಸಾಧ್ಯ ಯಾವುದೂ ಇಲ್ಲ. ನಮ್ಮ ದಕ್ಷಿಣ ಕನ್ನಡದ ಪುತ್ತೂರಿನ ಹೆಮ್ಮೆಯ ಪ್ರತಿಭೆಗಳಾದ ಕಾಣಿಯೂರಿನ ಕುಮಾರಿ ಯೋಗಿತಾ ಹಾಗೂ ಬಲ್ನಾಡಿನ ಕುಮಾರಿ ರಮ್ಯಾ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿದ್ದು, ಸ್ತ್ರೀಶಕ್ತಿಗೆ ನಿದರ್ಶನವಾಗಿದ್ದಾರೆ. ಸಾಧಕಿಯರಿಗೆ ಅಭಿನಂದನೆಗಳು ಎಂದು ಬರೆದುಕೊಳ್ಳುವ ಮೂಲಕ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಕಡಬ ತಾಲೂಕು ಕಾಣಿಯೂರಿನ ಯೋಗಿತಾ ಹಾಗೂ ಪುತ್ತೂರು ಹೊರವಲಯ ಬಲ್ನಾಡ್ ಪರಜಾಲ್ ದೇವಸ್ಯದ ರಮ್ಯಾ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿದ್ದಾರೆ. ಏಪ್ರಿಲ್ 1 ರಿಂದ ಇಬ್ಬರೂ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಯೋಗಿತಾ ಅವರು ಕಾಣಿಯೂರು ಗ್ರಾಮದ ಮಲೆಕೆರ್ಚಿ ಮೇದಪ್ಪ ಗೌಡ ಮತ್ತು ದೇವಕಿ ದಂಪತಿಯ ಪುತ್ರಿ. ಇವರು ಬೊಬ್ಬೆಕೇರಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ನಂತರ ಕಾಣಿಯೂರಿನಲ್ಲಿ ಪ್ರೌಢಶಿಕ್ಷಣ , ನಿಂತಿಕಲ್ ನಲ್ಲಿ ಪಿಯುಸಿ ಮುಗಿಸಿದ್ದಾರೆ. ಬಳಿಕ ಮಂಗಳೂರಿನ ವಿವಿ ಕಾಲೇಜಿನಲ್ಲಿ ಪದವಿ ಪಡೆದು, ಕೊಣಾಜೆಯ ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದಿದ್ದಾರೆ.

ರಮ್ಯಾ ಅವರು ಪುತ್ತೂರು ಹೊರವಲಯ ಬಲ್ನಾಡಿನ ಪದ್ಮಯ್ಯ ಗೌಡ- ತೇಜವತಿ ದಂಪತಿ ಪುತ್ರಿ. ಇವರು ಪುತ್ತೂರು ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಮತ್ತು ಪಿಯುಸಿ ಶಿಕ್ಷಣ ಮುಗಿಸಿದ್ದಾರೆ. ನಂತರ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.

ಮೊತ್ತಮೊದಲ ಬಾರಿಗೆ ಕಾಣಿಯೂರಿನ ಯುವತಿ ಮಿಲಿಟರಿಗೆ ಆಯ್ಕೆಗೊಂಡಿರುವ ಸಂತಸದಲ್ಲಿ ಕಾಣಿಯೂರಿನ ಜನರಿದ್ದಾರೆ. ಗಡಿ ಭದ್ರತಾ ಪಡೆಯ ಕರ್ತವ್ಯಕ್ಕೆ ತೆರಳುವ ಮೊದಲು ಕಾಣಿಯೂರಿನ ಶಿರಾಡಿ ರಾಜನ್ ದೈವಸ್ಥಾನ ಸಮಿತಿ ಏಲಡ್ಕ, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಕಾಣಿಯೂರು, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಕಾಣಿಯೂರು, ಕಣ್ವರ್ಷಿ ಮಹಿಳಾ ಮಂಡಲದ ವತಿಯಿಂದ ಯೋಗಿತಾಳಿಗೆ ಬೀಳ್ಕೊಡುಗೆ ಅಭಿನಂದನಾ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಎಳವೆಯಿಂದಲೇ ಸೇನೆ ಹಾಗೂ ಯೋಧರ ಬಗ್ಗೆ ಅಭಿಮಾನ ಹೊಂದಿದ್ದ ಈ ಯುವತಿಯರು ಇದೀಗ ತಾವೂ ಕೂಡಾ ಸೇನೆಯ ಅಂಗಕ್ಕೆ ಸೇರ್ಪಡೆಗೊಂಡು ಭಾರತ ಮಾತೆಯ ಸೇವೆಗೆ ಸನ್ನದ್ಧರಾಗಿದ್ದಾರೆ.

ಭಾರತೀಯ ಸೇನೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ, ಬೆಳ್ತಂಗಡಿ ಹಾಗೂ ಪುತ್ತೂರು ಭಾಗದ ಹೆಚ್ಚಿನ ಜನ ಯೋಧರಾಗಿ ಸೇವೆ ಸಲ್ಲಿಸಿದ್ದಾರೆ. ಸೇನೆಯಲ್ಲಿ ಉನ್ನತ ಸ್ಥಾನವನ್ನೂ ಪಡೆದು ನಿವೃತ್ತಿಯಲ್ಲಿರುವ ಹಲವು ಸೇನೆಯ ಯೋಧರೂ ಕೂಡಾ ತಮಗೆ ಸೇನೆಯಲ್ಲಿ ಸೇರಲು ಸ್ಪೂರ್ತಿಯಾಗಿದೆ ಎನ್ನುವುದು ಈ ಯುವತಿಯರ ಅಭಿಪ್ರಾಯವಾಗಿದೆ.

Click to comment

Leave a Reply

Your email address will not be published. Required fields are marked *