Tuesday, 15th October 2019

Recent News

ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ – ಆರೋಪಿಗಳಿಗೆ ನ್ಯಾಯಾಂಗ ಬಂಧನ

– ಮತ್ತೆ 8 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಹಪಾಠಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಸಿದ್ದ ಆರೋಪಿಗಳನ್ನು ಇಂದು ನ್ಯಾಯಾಲಯದ ಮುಂದೇ ಹಾಜರು ಪಡಿಸಲಾಗಿತ್ತು. ಆರೋಪಿಗಳನ್ನು ಜು.18 ರ ವರೆಗು ನ್ಯಾಯಾಂಗ ಬಂಧನಕ್ಕೆ ನೀಡಿ ಪುತ್ತೂರು 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.

ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ. ರುಡಾಲ್ಪ್ ಪಿರೇರ ನ್ಯಾಯಾಂಗ ಬಂಧನ ಆದೇಶ ನೀಡಿದ್ದಾರೆ. ಪುತ್ತೂರು ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ 5 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಗುರುನಂದನ್ (19), ಆರ್ಯಾಪು ಗ್ರಾಮದ ಸುನಿಲ್ (19), ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಪ್ರಜ್ವಲ್ (19), ಬರಿಮಾರು ಗ್ರಾಮದ ಪ್ರಖ್ಯಾತ್ (19) ಹಾಗೂ ಕಿಶನ್ (19) ಬಂಧಿತ ಆರೋಪಿಗಳು. ಈ ಆರೋಪಿಗಳು ಪುತ್ತೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೆ ಪೊಲೀಸರು ಎಂಟು ಮಂದಿ ಆರೋಪಿಗಳ ಬಂಧನ ಮಾಡಿದ್ದಾರೆ. ಮುರಲೀಧರ (29), ಚಂದ್ರಶೇಖರ ಮಯ್ಯ (47), ಶ್ರೇಯಾನ್ಸ್ ಎಸ್ (20), ಪೂವಪ್ಪ ಕೆ. (26), ಪವನ್ ಕುಮಾರ್ ಡಿ (19), ಮೋಹಿತ್ ಪಿ.ಜಿ. (18), ಧ್ಯಾನ್ ಎ.ಎನ್ (18), ಅದ್ವಿತ್ ಕುಮಾರ್ ನಾಯ್ಕ್ (19) ಬಂಧಿತ ಆರೋಪಿಗಳಾಗಿದ್ದಾರೆ. ಪುತ್ತೂರು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅತ್ಯಾಚಾರ ಆರೋಪಿಗಳ ತೇಜೋವಧೆ ಉದ್ದೇಶದಿಂದ ವಿಡಿಯೋ ವೈರಲ್ ಮಾಡಿದ್ದ ಆರೋಪ ಬಂಧಿತರ ಮೇಲಿದೆ. ಇದರಲ್ಲಿ ಪ್ರಮುಖವಾಗಿ ಬಂಧಿತ ಪ್ರಖ್ಯಾತ್ ಎಂಬಾತ ತನ್ನ ಮೊಬೈಲಿನಲ್ಲಿ ಸ್ಟೇಟಸ್ ಹಾಕಿದ್ದ.

ದ್ವೇಷದಿಂದ ಬಯಲಾಗಿತ್ತು ಕೃತ್ಯ:
ಆರೋಪಿಗಳು ಫೆಬ್ರವರಿ ತಿಂಗಳಿನಲ್ಲಿಯೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆದರೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ವಿಡಿಯೋ ವೈರಲ್ ಆಗಿದ್ದರಿಂದ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲು ಮುಖ್ಯ ಕಾರಣ ಆರೋಪಿಗಳ ಮಧ್ಯೆ ಮನಸ್ತಾಪ ಉಂಟಾಗಿದ್ದು ಎನ್ನಲಾಗಿದೆ. ಕಾಲೇಜಿನ ಚುನಾವಣೆ ವಿಚಾರದಲ್ಲಿ ನಾಲ್ವರು ಆರೋಪಿ ವಿದ್ಯಾರ್ಥಿಗಳ ಮಧ್ಯೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಈ ದ್ವೇಷ ಸಾಧನೆ ಉದ್ದೇಶದಿಂದ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಅನಾಮಧೇಯ ವ್ಯಕ್ತಿಯ ಹೆಸರಿನಲ್ಲಿ ವಿಡಿಯೋ ಹರಿಬಿಟ್ಟು ಪ್ರಕರಣವನ್ನು ಆರೋಪಿ ವಿದ್ಯಾರ್ಥಿಗಳೇ ಒಪ್ಪಿಕೊಂಡಿದ್ದಾರೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದ್ದರು.

Leave a Reply

Your email address will not be published. Required fields are marked *