Connect with us

Dakshina Kannada

ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗ್ಗೆ ಕಂದಾಯ ಸಚಿವರ ಜೊತೆ ಮಾತುಕತೆ: ಅಂಗಾರ

Published

on

ಮಂಗಳೂರು: ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗ್ಗೆ ಕಂದಾಯ ಸಚಿವರ ಜೊತೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಅಧಿವೇಶನದ ಸಂದರ್ಭದಲ್ಲಿ ಕರಾವಳಿಯ ಎಲ್ಲ ಶಾಸಕರ ಉಪಸ್ಥಿತಿಯಲ್ಲಿ ವಿಶೇಷ ಸಭೆಗೆ ಅವಕಾಶ ಕಲ್ಪಿಸಲಾಗಿದೆ. ಕಂದಾಯ ಮತ್ತು ಅರಣ್ಯ ಸಚಿವರ ಜೊತೆ ವಿಶೇಷ ಸಭೆ ಹಾಗೂ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು ಹಾಗೂ 94 ಸಿ ಯೋಜನೆಯಡಿ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಕೊಡುವಂತೆ ಕೇಳಿಕೊಳ್ಳಲಾಗಿದೆ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಅಂಗಾರ ಹೇಳಿದ್ದಾರೆ.

ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ಸಹಯೋಗದೊಂದಿಗೆ, ದ.ಕ ಜಿಲ್ಲಾಡಳಿತ, ದ.ಕ ಜಿ.ಪಂ, ಪೊಲೀಸ್ ಇಲಾಖೆ, ಕಡಬ ತಾಲೂಕು ಆಡಳಿತ, ತಾ.ಪಂ ಮತ್ತು ಕೊಂಬಾರು ಗ್ರಾ.ಪಂ ಸಹಭಾಗಿತ್ವದಲ್ಲಿ ಕೊಂಬಾರು ಶಾಲೆಯಲ್ಲಿ ರವಿವಾರ ನಡೆದ ಪತ್ರಕರ್ತರ ಗ್ರಾಮವಾಸ್ತವ್ಯದ ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕರ ಸಂವಾದದಲ್ಲಿ ಅವರು ಮಾತನಾಡಿದರು.

ಭಾಗಶಃ ಅರಣ್ಯ ಪ್ರದೇಶದಲ್ಲಿನ ಕಂದಾಯ ಇಲಾಖೆ ಭೂಮಿ ಪ್ರತ್ಯೇಕಿಸಿ ಕಂದಾಯ ಭೂಮಿಯನ್ನು ಹಂಚಿಕೆ ಮಾಡಲು ಕ್ರಮಕೈಗೊಳ್ಳಲಾಗುವುದು. ಗುಂಡ್ಯತೋಟ ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಶೀಘ್ರವೇ ಕ್ರಮ, ತೇರಬೀದಿ ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಜೊತೆಗೆ ಗ್ರಾಮೀಣಾಭಿವೃದ್ಧಿ ಸಚಿವರು ಭರವಸೆ ನೀಡಿದ ಕೊಂಬಾರು- ಸಿರಿಬಾಗಿಲು ಗ್ರಾಮದ ಪ್ರಮುಖ ನಾಲ್ಕು ರಸ್ತೆಗಳ ಅಭಿವೃದ್ಧಿಯ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದರು. ಗ್ರಾಮಸ್ಥರ ಪರವಾಗಿ ದಾಮೋದರ, ಮಧುಸೂಧನ್ ಬೇಡಿಕೆ ಮಂಡಿಸಿದರು.

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ವಹಿಸಿದ್ದರು. ವೇದಿಕೆಯಲ್ಲಿ ಕಡಬ ತಾ.ಪಂ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಉಪಾಧ್ಯಕ್ಷೆ ಜಯಂತಿ ಆರ್ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ಕುಸುಮಾ ಪಿ. ವೈ, ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ ಮೊದಲಾದವರು ಉಪಸ್ಥಿತರಿದ್ದರು.

ಗ್ರಾ.ಪಂ ಸದಸ್ಯರನ್ನು ಸನ್ಮಾನಿಸಲಾಯಿತು. ಗ್ರಾಮ ವಾಸ್ತವ್ಯದ ಭಾಗವಾಗಿ ವಿಶೇಷ ಪ್ಯಾಕೇಜ್‍ಗೆ ಆಗ್ರಹಿಸಲಾಯಿತು.ಜಿಲ್ಲಾ ಪತ್ರಕರ್ತರ ಸಂಘದ ಗ್ರಾಮೀಣ ಕಾರ್ಯದರ್ಶಿ ಸಿದ್ದೀಕ್ ನೀರಾಜೆ ನಿರೂಪಿಸಿದರು. ಕಡಬ ತಾಲೂಕು ಪತ್ರಕರ್ತರ ಸಂಘದ ಕೋಶಾಧಿಕಾರಿ ತಸ್ಲೀಮ್ ಮರ್ಧಾಳ ವಂದಿಸಿದರು.

Click to comment

Leave a Reply

Your email address will not be published. Required fields are marked *