Connect with us

Crime

ಸ್ನೇಹಿತನನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಗೆಳೆಯರು

Published

on

– ಮೂವರ ಮೇಲೆ ಮಾರಣಾಂತಿಕ ಹಲ್ಲೆ

ಮಂಗಳೂರು: ಬಜಪೆ ಠಾಣಾ ವ್ಯಾಪ್ತಿಯ ಎಕ್ಕಾರು ದೇವರಗುಡ್ಡೆಯಲ್ಲಿ ತಂಡವೊಂದು ಮೂವರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಓರ್ವ ಹತ್ಯೆಗೀಡಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.

ಕೊಲೆಯಾದ ಯುವಕನನ್ನು ಮಂಗಳೂರಿನ ಮರಕಡ ನಿವಾಸಿ ಕಿರ್ತನ್ (20) ಹಾಗೂ ಗಾಯಗೊಂಡವರನ್ನು ನಿತಿನ್ (20), ಮಣೇಶ್ (20) ಎಂದು ಗುರುತಿಸಲಾಗಿದೆ. ಗಾಂಜಾ ಮತ್ತು ಅಕ್ರಮ ಮರಳುಗಾರಿಕೆ ಘಟನೆಗೆ ಕಾರಣ ಎನ್ನಲಾಗಿದೆ.

ಭಾನುವಾರ ರಾತ್ರಿ ಸುಮಾರು 9.30 ಗಂಟೆಗೆ ಎಕ್ಕಾರು ಪಂಚಾಯತ್ ವ್ಯಾಪ್ತಿಯ ದೇವರಗುಡ್ಡೆ ಸರ್ಕಲ್ ಬಳಿ ಕೀರ್ತನ್ , ಮಣೇಶ್ ಹಾಗೂ ನಿತಿನ್ ನಿಂತಿದ್ದು, ಈ ಸಂದರ್ಭ ಅಲ್ಲಿಗೆ ಬಂದ ಮೂವರ ತಂಡದ ಮಧ್ಯೆ ಮಾತಿನ ಚಕಾಮಕಿ ನಡೆದಿದೆ. ಇದು ಮುಂದುವರಿದು ಕೀರ್ತನ್, ನಿತಿನ್ ಮತ್ತು ಮಣೇಷ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿದೆ.

ಈ ಮೂವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವಾಗ ಕೀರ್ತನ್ ಸಾವನ್ನಪ್ಪಿದ್ದಾನೆ. ಈ ಸಂಬಂಧ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ದಂಧೆಗೆ ಕೆಲ ರಾಜಕೀಯ ವ್ಯಕ್ತಿಗಳ ಅಭಯ ಹಸ್ತವಿದೆ. ಇತ್ತೀಚೆಗೆ ಬಜಪೆಯ ಉದ್ಯಮಿಯೋರ್ವರು ರಾತ್ರಿ ಹಗಲೆನ್ನದೆ ಈ ಮರಳುಗಾರಿಕೆಯಲ್ಲಿ ತೊಡಗಿದ್ದು, ಬಿಜೆಪಿಯ ಪ್ರಭಾವಿ ವ್ಯಕ್ತಿ ಇದಕ್ಕೆ ಸಹಕಾರ ನೀಡಿದ್ದರು ಅನ್ನೋ ಮಾತು ಕೇಳಿ ಬಂದಿದೆ. ಮಾತ್ರವಲ್ಲದೆ ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇದೀಗ ಕರಾವಳಿಯ ನದಿಗಳು ಅಕ್ರಮ ದಂಧೆಕೊರರಿಗೆ ಚಿನ್ನದ ಮೊಟ್ಟೆ ಇಡುವ ಕೊಳಿಯಂತಾಗಿದೆ. ಇದನ್ನು ನಿಯಂತ್ರಿಸದಿದ್ದಲ್ಲಿ ಇಂತಹ ಘಟನೆಗಳು ಮತ್ತೆ ಮರುಕಳಿಸುತ್ತದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.