Connect with us

Dakshina Kannada

ಮಂಗಳೂರು ದಸರಾ ಉತ್ಸವಕ್ಕೆ ತೆರೆ – ಕೊರೊನಾದಿಂದ ವೈಭವ ಮೆರವಣಿಗೆ ರದ್ದು

Published

on

ಮಂಗಳೂರು: ರಾಜ್ಯದಲ್ಲೇ ಮೈಸೂರು ಬಳಿಕ ಎರಡನೇ ಅತೀ ದೊಡ್ಡ ದಸರಾ ಎಂದು ಕರೆಸಿಕೊಳ್ಳುವ ಮಂಗಳೂರು ದಸರಾ ಉತ್ಸವಕ್ಕೆ ತೆರೆ ಬಿದ್ದಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಕ್ಷೇತ್ರದಲ್ಲಿ ಆರಾಧನೆಗೊಂಡ ನವದುರ್ಗೆಯರ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನಡೆಯಿತು. ಕೋವಿಡ್ ಗೈಡ್‍ಲೈನ್ಸ್ ಪ್ರಕಾರ ಅತ್ಯಂತ ಸರಳವಾಗಿ ಈ ಬಾರಿ ದಸರಾ ಉತ್ಸವ ನೆರವೇರಿತು.

ಹೌದು. ಅತ್ಯಂತ ವೈಭವದಿಂದ ನಡೆಯುತ್ತಿದ್ದ ಮಂಗಳೂರು ದಸರಾ ಈ ಬಾರಿ ಸರಳವಾಗಿ ನಡೆದಿದೆ. ಕುದ್ರೋಳಿ ದೇವಸ್ಥಾನದ ಆವರಣಕ್ಕೆ ಮಾತ್ರ ಸೀಮಿತವಾಗಿದ್ದ ದಸರಾ ಮಹೋತ್ಸವಕ್ಕೆ ತಡರಾತ್ರಿ ತೆರೆಬಿದ್ದಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಕ್ಷೇತ್ರದಲ್ಲಿ ಆರಾಧನೆಗೊಂಡ ನವದುರ್ಗೆಯರ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನಡೆಯಿತು.

ಈ ಹಿಂದಿನ ವರ್ಷಗಳಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಆರಾಧನೆಗೊಂಡ ನವದುರ್ಗೆಯರ ಮೂರ್ತಿಯ ಭವ್ಯ ಶೋಭಾಯಾತ್ರೆ ನಡೆಯುತ್ತಿತ್ತು. ರಾತ್ರಿ ಪೂರ್ತಿ ಅದ್ದೂರಿ ಟ್ಯಾಬ್ಲೋ ಮೂಲಕ ನಗರ ಪ್ರದಕ್ಷಿಣೆ ಮಾಡಿ ಮುಂಜಾನೆ ವೇಳೆಗೆ ದೇವಳದ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಮೆರವಣಿಗೆಯನ್ನು ರದ್ದುಗೊಳಿಸಲಾಗಿತ್ತು. ದೇವಸ್ಥಾನದಲ್ಲೇ ವಿಸರ್ಜನಾ ಪೂಜೆ ನೆರವೇರಿಸಿ ಹೊರಾಂಗಣದಲ್ಲೇ ಪ್ರದಕ್ಷಿಣೆ ಹಾಕಿ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು.

ಈ ಬಾರಿ ಕರೊನಾ ಕಾರಣದಿಂದ ಹುಲಿ ಕುಣಿತವೂ ಕೇವಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿತ್ತು. ಜಿಲ್ಲಾಡಳಿತ ಒಂದಿಷ್ಟು ನಿರ್ಬಂಧಗಳನ್ನು ವಿಧಿಸಿತ್ತು. ಹುಲಿ ವೇಷ ತಂಡಗಳಿಗೆ ಮನೆ ಮನೆ ತೆರಳುವುದಕ್ಕೆ ಈ ಬಾರಿ ಅವಕಾಶ ಇರಲಿಲ್ಲ. ಹೀಗಾಗಿ ನವರಾತ್ರಿ ಉತ್ಸವ ನಡೆಯುವ ದೇವಸ್ಥಾನಗಳಲ್ಲಿ ಹುಲಿ ಕುಣಿತಕ್ಕೆ ಅವಕಾಶ ನೀಡಲಾಗಿತ್ತು. ಕರೊನಾ ಮಾಹಮಾರಿ ಊರು ಬಿಟ್ಟು ತೊಲಗಲಿ ಎಂದು ಹರಕೆಯ ಹುಲಿವೇಷ ಹಾಕಿದ್ದರು.

ಒಟ್ಟಿನಲ್ಲಿ ಕೊರೊನಾ ಹಿನ್ನಲೆಯಲ್ಲಿ ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಈ ಬಾರಿಯ ಮಂಗಳೂರು ದಸರಾ ಉತ್ಸವ ನಡೆಯಿತು. ಸಾಂಪ್ರದಾಯಿಕ ಆಚರಣೆಗಳಿಗೆ ಚ್ಯುತಿ ಬಾರದಂತೆ, ಭಕ್ತರಿಗೂ ನೋವುಂಟಾಗದಂತೆ ನವರಾತ್ರಿ ಸಂಪನ್ನಗೊಂಡಿತು.

Click to comment

Leave a Reply

Your email address will not be published. Required fields are marked *

www.publictv.in