Connect with us

Dakshina Kannada

ಫುಟ್ಬಾಲ್ ಆಟಗಾರರು ಬರ್ತಾರೆ ಅಂತ 60 ಕಾರುಗಳನ್ನು ಬಾಡಿಗೆ ಪಡೆದು ಐಟಿ ಮಾಸ್ಟರ್ ಪ್ಲಾನ್!

Published

on

– ಮಂಗಳೂರಲ್ಲಿ ಉದ್ಯಮಿಗಳಿಗೆ ಐಟಿ ಶಾಕ್
– ದಾಳಿ ವೇಳೆ ಮಾಲೀಕರೊಬ್ಬರ ತಂದೆ ಆರೋಗ್ಯದಲ್ಲಿ ಏರುಪೇರು
– 5 ಕೋಟಿ ಹಣ ಪತ್ತೆಯ ಬಗ್ಗೆ ಮಾಹಿತಿ

ಮಂಗಳೂರು: ಕರಾವಳಿಯಲ್ಲಿ ವಿವಿಧ ಉದ್ಯಮಿಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ಇದಕ್ಕೂ ಮುನ್ನ ಅಧಿಕಾರಿಗಳು ಮಾಸ್ಟರ್ ಪ್ಲಾನ್ ಒಂದನ್ನು ಮಾಡಿಕೊಂಡಿದ್ದರು.

ಹೌದು. ಮಂಗವಾರ ಸಂಜೆ 60 ಕಾರುಗಳನ್ನು ಅಧಿಕಾರಿಗಳು ಬಾಡಿಗೆಗೆ ಪಡೆದಿದ್ದರು. ಬಾಡಿಗೆ ಪಡೆಯುವ ವೇಳೆ ಕೇರಳಕ್ಕೆ ಹೋಗಬೇಕು. ಇಂಟರ್ ಸ್ಟೇಟ್ ಫುಟ್ಬಾಲ್ ಚಾಂಪಿಯನ್ ಶಿಪ್ ಇದೆ. ಕಾರಿನಲ್ಲಿ ಫುಟ್ಬಾಲ್ ಆಟಗಾರರು ಬರುತ್ತಾರೆ ಅಂತ ಅಧಿಕಾರಿಗಳು ಬಾಡಿಗೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ನಿನ್ನೆ ಸಂಜೆ ಕಾರುಗಳಿಗೆ ಸಿಬ್ಬಂದಿ ‘ಫುಟ್ಬಾಲ್’ ನ ಸ್ಟಿಕರ್ ಅಂಟಿಸಿದ್ದರು. ಈ ಮೂಲಕ ಆಪರೇಷನ್ ಗೌಪ್ಯವಾಗಿರಿಸಲು ಮಾಸ್ಟರ್ ಪ್ಲಾನ್ ರೂಪಿಸಿದ್ದರು.

ಇಂದು ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳ ಮಾಲೀಕರ ಮನೆ ಮೇಲೆ ಐಟಿ ದಾಳಿ ನಡೆಸಿದೆ. ಎಜೆ ಗ್ರೂಪ್ ಸಂಸ್ಥೆಯ ಮಾಲಕ ಎಜೆ ಶೆಟ್ಟಿ, ಯನಪೋಯ ಗ್ರೂಪ್ ಸಂಸ್ಥೆಯ ಮಾಲಕ ಅಬ್ದುಲ್ ಕುಂಞ, ಕಣಚೂರು ಗ್ರೂಪ್ ಸಂಸ್ಥೆಯ ಮಾಲಕ ಕಣಚೂರು ಮೋನು ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಮೂರೂ ಸಂಸ್ಥೆಗಳ ಮನೆ, ಆಸ್ಪತ್ರೆ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ. ಅಲ್ಲದೆ ಶಿಕ್ಷಣ ಸಂಸ್ಥೆಗಳ ಮೇಲೂ ಏಳು ಮಂದಿ ಅಧಿಕಾರಿಗಳ ತಂಡ ಏಕಕಾಲದಲ್ಲಿ ಐಟಿ ದಾಳಿ ನಡೆಸಿದೆ.

ಮತ್ತೊಂದು ಮೆಡಿಕಲ್ ಕಾಲೇಜಿನ ಮೇಲೆ ಐಟಿ ದಾಳಿ ನಡೆದಿದೆ. ಮಂಗಳೂರಿನ ಶ್ರೀನಿವಾಸ ಗ್ರೂಪ್ ಆಫ್ ಎಜುಕೇಶನ್ ಇನ್ಸ್ಟಿಟ್ಯೂಷನ್ ಹಾಗೂ ಮಂಗಳೂರಿನ ಜೈಲು ರಸ್ತೆಯಲ್ಲಿರುವ ಮನೆ, ಕಚೇರಿ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಶ್ರೀನಿವಾಸ ರಾವ್ ತಂದೆ ಆರೋಗ್ಯದಲ್ಲಿ ಏರುಪೇರು ಉಂಟಾದ ಪ್ರಸಂಗವೂ ನಡೆದಿದೆ. ಕೂಡಲೇ ಶ್ರೀನಿವಾಸ ರಾವ್ ಅವರು ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ತರಿಸಿದ್ದಾರೆ. ಅಲ್ಲದೆ ವೈದ್ಯಕೀಯ ಸಿಬ್ಬಂದಿಯಿಂದ ತಪಾಸಣೆ ನಡೆಸಲಾಯಿತು. ಈ ವೇಳೆ ರಾಘವೇಂದ್ರ ರಾವ್ ಅನಾರೋಗ್ಯದಿಂದ ಐಟಿ ಅಧಿಕಾರಿಗಳು ಗಾಬರಿಗೊಂಡರು.

ಮೆಡಿಕಲ್ ಕಾಲೇಜುಗಳ ಮಾಲೀಕರ ಮನೆಯಲ್ಲಿ ಐಟಿ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿರುವ ಮಾಹಿತಿ ದೊರೆತಿದೆ. ಒಂದೇ ಕಡೆ 5 ಕೋಟಿ ಹಣ ಪತ್ತೆಯಾಗಿರೋ ಬಗ್ಗೆ ಮಾಹಿತಿ ಸಿಕ್ಕಿದ್ದು, ಮನೆಯಲ್ಲಿ ಕೋಟಿ ಕೋಟಿ ಕ್ಯಾಶ್ ನೋಡಿ ಐಟಿ ಅಧಿಕಾರಿಗಳು ಸುಸ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಕೂಡ ಆಗಮಿಸಿವ ಸಾಧ್ಯತೆ ಇದೆ ಎನ್ನಲಾಗಿದೆ.

Click to comment

Leave a Reply

Your email address will not be published. Required fields are marked *