Connect with us

Dakshina Kannada

ಆಂಧ್ರ ಸಿಎಂ ಪರಿಹಾರ ನಿಧಿಯ 117 ಕೋಟಿಗೆ ಕನ್ನಕ್ಕೆ ಯತ್ನ- ದಕ್ಷಿಣ ಕನ್ನಡದ 6 ಮಂದಿ ಅರೆಸ್ಟ್

Published

on

– ತುಳು ಚಿತ್ರದ ನಿರ್ಮಾಪಕ ಪ್ರಕರಣದ ಪ್ರಮುಖ ಆರೋಪಿ

ಮಂಗಳೂರು: ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಪರಿಹಾರ ನಿಧಿಗೆ ಕನ್ನ ಹಾಕಲು ಪ್ರಯತ್ನ ಮಾಡಿದ ಕರಾವಳಿಯ ಆರು ಮಂದಿ ಖದೀಮರು ಪೊಲೀಸ್ ಬಲೆಗೆ ಬಿದ್ದಿದ್ದಾರೆ.

ಆಂಧ್ರದ ಎಸಿಬಿ ಟೀಂ ಮಂಗಳೂರಿನಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದು, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಆಂಧ್ರ ಸಿಎಂ ಪರಿಹಾರ ನಿಧಿಯಲ್ಲಿ ಒಟ್ಟು 117 ಕೋಟಿ ರೂಪಾಯಿ ವಂಚನೆಗೆ ಆರೋಪಿಗಳು ಪ್ಲಾನ್ ಮಾಡಿದ್ದು, ಚೆಕ್ ಡ್ರಾ ಮಾಡುವ ವೇಳೆ ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಆಂಧ್ರ ಪ್ರದೇಶದ ಕಂದಾಯ ಇಲಾಖೆಯ ಸಹಾಯಕ ಕಾರ್ಯದರ್ಶಿ ಪಿ.ಮುರಳೀಕೃಷ್ಣ ರಾವ್ ನೀಡಿದ ದೂರಿನ ಆಧಾರದಲ್ಲಿ ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಪ್ರಕರಣವನ್ನು ಜಾಲಾಡಿದ್ದಾರೆ.

ಮೂಡಬಿದಿರೆ ನಿವಾಸಿ ಯೋಗಿಶ್ ಆಚಾರ್ಯ, ಕೋಸ್ಟಲ್ ವುಡ್ ಚಿತ್ರ ನಿರ್ಮಾಪಕ ಉದಯ್ ಶೆಟ್ಟಿ, ಮಂಗಳೂರಿನ ಬ್ರಿಜೇಶ್ ರೈ, ಬೆಳ್ತಂಗಡಿಯ ಗಂಗಾಧರ್ ಸುವರ್ಣ ಹಾಗೂ ಕಬೀರ್ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳ ಪೈಕಿ ಮೂಡಬಿದಿರೆಯ ನಿವಾಸಿ ಯೋಗೀಶ್ ಆಚಾರ್ಯ, ಮೂಡಬಿದಿರೆಯ ಎಸ್‍ಬಿಐ ಬ್ಯಾಂಕಿಗೆ 52 ಕೋಟಿ ರೂಪಾಯಿ ಚೆಕ್ ನಗದೀಕರಣಕ್ಕೆ ಹಾಕಿದ್ದು, ನಗದು ವರ್ಗಾವಣೆ ಮಾಡುವಾಗ ಬ್ಯಾಂಕ್ ಮ್ಯಾನೇಜರ್ ರಿಲೀಫ್ ಫಂಡಿಗೆ ಕನ್ಫರ್ಮೇಶನ್ ಕೇಳಿದ್ದು, ಈ ವೇಳೆ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

ಕೂಡಲೇ ಮಂಗಳೂರಿಗೆ ಆಗಮಿಸಿದ ಆಂಧ್ರ ಎಸಿಬಿ ಟೀಂ ಯೋಗೀಶ್ ಆಚಾರ್ಯರನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ಆರೋಪಿಗಳ ಕುರಿತು ಮಾಹಿತಿ ಕೊಟ್ಟಿದ್ದು, ಪೊಲೀಸರು ಸದ್ಯ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಜಾಲ ಇತರ ರಾಜ್ಯಗಳಲ್ಲೂ ವ್ಯಾಪಕವಾಗಿ ಬೆಳೆದಿರುವ ಶಂಕೆಯಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕೇವಲ ಆಂಧ್ರಪ್ರದೇಶ ಸಿಎಂ ಮಾತ್ರವಲ್ಲದೆ ಮಿಜೋರಾಂ, ಬಿಹಾರ, ಉತ್ತರ ಪ್ರದೇಶದ ಸಿಎಂ ಪರಿಹಾರ ನಿಧಿಗೂ ಕನ್ನ ಹಾಕಿರುವ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ.

ಈ ಆರೋಪಿಗಳು ಮುದ್ರಿತ ಚೆಕ್‍ನ್ನು ವಿಶಿಷ್ಟ ರಾಸಾಯನಿಕ ಬಳಸಿ ತಮಗೆ ಬೇಕಾದಂತೆ ಬರೆದುಕೊಳ್ಳುತ್ತಿದ್ದರು. ವಂಚನಾ ಜಾಲದಲ್ಲಿ ಬಂಟ್ವಾಳ ಮೂಲದ ವ್ಯಕ್ತಿಯೊಬ್ಬ ಕಿಂಗ್ ಪಿನ್ ಅಂತಾ ತಿಳಿದು ಬಂದಿದೆ. ಒಟ್ಟಿನಲ್ಲಿ ಅತೀ ದೊಡ್ಡ ವಂಚನಾ ಜಾಲವೊಂದು ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಮತ್ತಷ್ಟು ಅವ್ಯವಹಾರಗಳು ಮುನ್ನಲೆಗೆ ಬರಲಿದ್ದು, ತನಿಖೆಯನ್ನು ತೀವ್ರಗೊಳಿಸಲಾಗಿದೆ.

Click to comment

Leave a Reply

Your email address will not be published. Required fields are marked *