Connect with us

Dakshina Kannada

ಪತ್ರಿಕೋದ್ಯಮ ವಿದ್ಯಾರ್ಥಿನಿ ಗ್ಯಾಂಗ್ ರೇಪ್ – ಆರೋಪಿಗಳಿಗೆ ಜಾಮೀನು

Published

on

– ಗ್ಯಾಂಗ್ ರೇಪ್ ಮಾಡಿ ವಿಡಿಯೋ ವೈರಲ್ ಮಾಡಿದ್ದ ಕಾಮುಕರು

ಮಂಗಳೂರು: ತನ್ನ ಸಹಪಾಠಿ ವಿದ್ಯಾರ್ಥಿನಿಯನ್ನೇ ಐವರು ವಿದ್ಯಾರ್ಥಿಗಳು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿ ಜೈಲು ಸೇರಿದ್ದ ಎಲ್ಲಾ ಅತ್ಯಾಚಾರಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.

ಪುತ್ತೂರಿನ ಪ್ರತಿಷ್ಠಿತ ಕಾಲೇಜೊಂದರ ಪತ್ರಿಕೋದ್ಯಮದ ವಿದ್ಯಾರ್ಥಿನಿಯೋರ್ವಳನ್ನು ಅದೇ ಕಾಲೇಜಿನ ಪ್ರಥಮ ಪಿಯುಸಿಯ ಐವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅತ್ಯಾಚಾರ ನಡೆಸಿದ ವಿದ್ಯಾರ್ಥಿಗಳಾದ ಸುನಿಲ್ (19), ಗುರುನಂದನ್ (19), ಕಿಶನ್ (19), ಪ್ರಖ್ಯಾತ (19) ಹಾಗೂ ಪ್ರಜ್ವಲ್(19) ಜಾಮೀನು ಪಡೆದುಕೊಂಡ ಆರೋಪಿಗಳು. ಆರೋಪಿಗಳ ಪೈಕಿ ಪ್ರಜ್ವಲ್‍ಗೆ ಹತ್ತು ದಿನದ ಹಿಂದೆ ಜಾಮೀನು ಮಂಜೂರಾಗಿದ್ದು ಉಳಿದ ನಾಲ್ವರು ಅತ್ಯಾಚಾರಿಗಳಿಗೆ ಇಂದು ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

ಸಾಲು ಸಾಲು ಅನುಮಾನಗಳು:
ಕಳೆದ 2019ರ ಎಪ್ರಿಲ್ 3 ರಂದು ಆರೋಪಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ರು ಎಂದು 2019 ಜುಲೈ 3 ರಂದು ಸಂತ್ರಸ್ತೆ ದೂರು ನೀಡಿದ್ದರು. ಅತ್ಯಾಚಾರದ ವಿಡಿಯೋ ವೈರಲ್ ಆದ ಮೂರು ತಿಂಗಳ ಬಳಿಕ ದೂರು ನೀಡಿದ್ದು, ಈ ಮೂರು ತಿಂಗಳ ಅವಧಿಯಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ತನ್ನ ಹೆತ್ತವರಲ್ಲಾಗಲಿ, ಸ್ನೇಹಿತರಲ್ಲಾಗಲಿ ಅಥವಾ ಇತರೆ ಯಾವುದೇ ವ್ಯಕ್ತಿಗಳಲ್ಲಿ ಹೇಳಿಕೊಂಡಿಲ್ಲ. ಸಂತ್ರಸ್ತೆ ಪತ್ರಿಕೋದ್ಯಮದ ವಿದ್ಯಾರ್ಥಿನಿಯಾಗಿದ್ದು ಮಾತ್ರವಲ್ಲ ಪ್ರಬುದ್ಧೆಯಾಗಿದ್ದರೂ ಐದು ಜನ ಸೇರಿ ಅತ್ಯಾಚಾರ ನಡೆಸಿದ್ರೂ ಪೊಲೀಸರಿಗೆ ದೂರು ನೀಡದೇ ಇರೋದು ಅನುಮಾನಕ್ಕೆ ಕಾರಣವಾಗಿತ್ತು.

ಜೊತೆಗೆ ಆಕೆ ಪುತ್ತೂರು ನಗರ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು ಅದರಲ್ಲಿ ಸಂತ್ರಸ್ತೆ ತಾನು ಸ್ವತಂತ್ರವಾಗಿ ಬೆತ್ತಲಾಗುವ ದೃಶ್ಯದ ವಿಡಿಯೋ ಇದ್ದು, ಅದನ್ನು ಸಂತ್ರಸ್ತೆ ತನ್ನದೇ ವಿಡಿಯೋ ಎಂದು ತನಿಖೆಯಲ್ಲಿ ಒಪ್ಪಿಕೊಂಡಿರುತ್ತಾಳೆ. ಹೀಗಾಗಿ ಘಟನೆಯ ನೈಜ್ಯತೆಯ ಬಗ್ಗೆ ಅನುಮಾನ ಮೂಡಿಸುತ್ತದೆ. ಜೊತೆಗೆ ಈ ವಿಡಿಯೋದಲ್ಲಿ ಸಂತ್ರಸ್ತೆ ಸ್ವತಃ ಬೆತ್ತಲಾಗಿದ್ದು, ಬಳಿಕ ಒಬ್ಬೊಬ್ಬರೇ ವಿದ್ಯಾರ್ಥಿಗಳು ಅತ್ಯಾಚಾರ ನಡೆಸಿರೋ ದೃಶ್ಯಾವಳಿ ಇರೋದ್ರಿಂದ ಇದೊಂದು ಗ್ಯಾಂಗ್ ರೇಪ್ ಎಂದು ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೂ ಆರೋಪಿಗಳ ಹಾಗೂ ಪ್ರಕರಣದ ಸಂಬಂಧವನ್ನು ತಳ್ಳಿ ಹಾಕುವಂತಿಲ್ಲ. ಜೊತೆಗೆ ವಿದ್ಯಾರ್ಥಿಗಳನ್ನು ಜೈಲಿನಲ್ಲೇ ಇರಿಸಿದರೆ ಅವರ ವಿಧ್ಯಾಭ್ಯಾಸ ಹಾಗೂ ಮುಂದಿನ ಭವಿಷ್ಯಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಆರೋಪಿಗಳಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

ಆ ಒಂದು ವಿಡಿಯೋ:
2019ರ ಜುಲೈ 3 ರಂದು ಮಂಗಳೂರು ಸೇರಿದಂತೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಅದೊಂದು ವಿಡಿಯೋ ವೈರಲ್ ಆಗಿತ್ತು. ನಿರ್ಜನ ಪ್ರದೇಶವೊಂದರಲ್ಲಿ ಕಾರಿನೊಳಗೆ ಬೆತ್ತಲಾಗುವ ಸಮವಸ್ತ್ರದಲ್ಲಿದ್ದ ವಿದ್ಯಾರ್ಥಿನಿಯೋರ್ವಳನ್ನು ಕಾರಿನಲ್ಲಿದ್ದ ಐವರು ವಿದ್ಯಾರ್ಥಿಗಳು ಅತ್ಯಾಚಾರ ನಡೆಸುತ್ತಿದ್ದು ಎಲ್ಲಾ ದೃಶ್ಯವನ್ನು ಓರ್ವ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಬಳಿಕ ಪೊಲೀಸರು ಸಂತ್ರಸ್ತೆಯಿಂದ ದೂರು ಪಡೆದು ಆರೋಪಿಗಳನ್ನು ಬಂಧಿಸಿದ್ದರು. ಆಕೆ ನೀಡಿದ ದೂರಿನಂತೆ ತಾನು 2019ರ ಎಪ್ರಿಲ್ 3 ರಂದು ಸಂಜೆ ಕಾಲೇಜಿನಿಂದ ಎಂದಿನಂತೆ ಮನೆಗೆ ಹೋಗುತ್ತಿದ್ದಾಗ ಬೆಳ್ಳಿಪ್ಪಾಡಿ ಎಂಬಲ್ಲಿನಿಂದ ಕಾರಿನಲ್ಲಿ ಬಂದ ತನ್ನ ಕಾಲೇಜಿನ ಸಹಪಾಠಿಗಳು ಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ಯದ್ದು,ಬಳಿಕ ಕಾರಿನೊಳಗೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು, ಜೊತೆಗೆ ಮೊಬೈಲ್ ನಲ್ಲಿ ಚಿತ್ರೀಕರಣ ನಡೆಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು.

ಬಳಿಕ ಆರೋಪಿಗಳ ವಿಚಾರಣೆಯ ವೇಳೆ ನಾವು ಐದು ಜನ ಸೇರಿ ಅತ್ಯಾಚಾರ ನಡೆಸಿದ್ದು ನಿಜ, ಬಳಿಕ ಚಿತ್ರೀಕರಿಸಿದ್ದೂ ನಿಜ ಆದ್ರೆ ಉದ್ದೇಶಪೂರ್ವಕವಾಗಿ ವಿಡಿಯೋ ವೈರಲ್ ಮಾಡಿಲ್ಲ, ಆರೋಪಿಗಳಲ್ಲಿ ಮೊಬೈಲ್ ನಲ್ಲಿ ಚಿತ್ರೀಕರಿಸಿದ ಆರೋಪಿ ಕಾಲೇಜಿನ ಚುನಾವಣಾ ವಿಚಾರದಲ್ಲಿ ಸ್ನೇಹಿತರೊಂದಿಗೆ ಮನಸ್ತಾಪವಾಗಿ, ಅವರ ಮಾನ ಮರ್ಯಾದೆ ತೆಗೆಯಬೇಕೆಂದು ತಾನೇ ಚಿತ್ರೀಕರಿಸಿದ ಅತ್ಯಾಚಾರದ ದೃಶ್ಯದಲ್ಲಿ ತನ್ನನ್ನು ಹೊರತು ಪಡಿಸಿ ಇತರ ನಾಲ್ವರು ಅತ್ಯಾಚಾರ ಮಾಡುವ ದೃಶ್ಯವನ್ನು ವೈರಲ್ ಮಾಡಿದ್ದ, ಆದ್ರೆ ಆರೋಪಿಗಳ ಬಂಧನದ ವೇಳೆ ಆತನೂ ಜೈಲು ಸೇರಿದ್ದ. ಇದೀಗ ಪ್ರಕರಣದ ಸುಧೀರ್ಘ ತನಿಖೆ ನಡೆಸಿದ ಹೈಕೋರ್ಟ್ ಆರೋಪಿಗಳಿಗೆ ಜಾಮೀನು ನೀಡಿದೆ.

ಷರತ್ತುಗಳೇನು?
* ಆರೋಪಿಗಳು ಎರಡು ಲಕ್ಷದ ಸ್ವಂತ ಮುಚ್ಚಳಿಕೆ ಹಾಗೂ ಎರಡು ಲಕ್ಷದ ಎರಡು ಜನ ಜಾಮೀನುದಾರರನ್ನು ನೀಡಬೇಕು.
* ಅಧೀನ ನ್ಯಾಯಾಲಯಕ್ಕೆ ಸರಿಯಾದ ದಿನ ಹಾಜರಾಗಬೇಕು, ಜೊತೆಗೆ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೊರ ಹೋಗುವಂತಿಲ್ಲ.