Connect with us

Dakshina Kannada

ಬಡವರನ್ನು ಬೀದಿ ಪಾಲು ಮಾಡಿದ್ರೆ ಜೋಕೆ: ಮಂಗಳೂರು ಮಹಾನಗರ ಪಾಲಿಕೆಗೆ ರಾಕೇಶ್ ಮಲ್ಲಿ ಎಚ್ಚರಿಕೆ

Published

on

ಮಂಗಳೂರು: ಕಳೆದ 32 ವರ್ಷಗಳಿಂದ ರವಿವಾರ ಸಂತೆ ವ್ಯಾಪಾರ ಮಾಡುತ್ತಿದ್ದ ಬಡವರನ್ನು ಯಾವುದೇ ಕಾರಣಕ್ಕೂ ಬೀದಿ ಪಾಲು ಮಾಡಬಾರದು. ಮತ್ತೆ ರವಿವಾರ ಸಂತೆಗೆ ಅನುಮತಿ ನೀಡಬೇಕು. ಇಲ್ಲದಿದ್ದರೆ ಪಾಲಿಕೆ ವಿರುದ್ಧ ನಿರಂತರ ಹೋರಾಟ ಅನಿವಾರ್ಯ ಎಂದು ಮಂಗಳೂರು ಮಹಾನಗರ ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಎಚ್ಚರಿಸಿದ್ದಾರೆ.

ಸುರತ್ಕಲ್ ನಲ್ಲಿ ರವಿವಾರ ನಡೆಯುತ್ತಿದ್ದ ಸಂತೆ ವ್ಯಾಪಾರ ಬಂದ್ ಮಾಡಿರುವುದನ್ನು ವಿರೋಧಿಸಿ ಇಂಟಕ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ರಾಕೇಶ್ ಮಲ್ಲಿ, ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿಯವರಿಗೆ ರವಿವಾರ ಸಂತೆಗೆ ಅನುಮತಿ ನೀಡಲು ಮನವಿ ಮಾಡಲಾಗುವುದು. ಅನುಮತಿ ನೀಡದೆ ಹೋದಲ್ಲಿ ಹೋರಾಟದ ಹಾದಿ ತುಳಿಯ ಬೇಕಾಗುತ್ತದೆ ಎಂದು ಪಾಲಿಕೆಯ ವಿರುದ್ಧ ಕಿಡಿಕಾರಿದ್ದಾರೆ.

ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ಸುಪ್ರೀಂ ಕೋರ್ಟ್ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದೆ. ಅದಲ್ಲದೆ ಇದೀಗ ಸರ್ಕಾರದಿಂದ ಆರ್ಥಿಕ ಸಹಾಯವನ್ನೂ ನೀಡಲಾಗುತ್ತಿದೆ. ಆದರೆ ಸುರತ್ಕಲ್‍ನಲ್ಲಿ ಮಾತ್ರ ಮಂಗಳೂರು ಮಹಾನಗರ ಪಾಲಿಕೆ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸುತ್ತಿದೆ. ಯಾವುದೇ ತೊಂದರೆ ಇಲ್ಲದೆ ವ್ಯಾಪಾರ ಮಾಡುವ ಬಡವರ ವಿರುದ್ಧ ಯಾರಿಗೆ ದ್ವೇಷವಿದೆ ಎಂಬುದು ಅರ್ಥವಾಗುತ್ತಿಲ್ಲ. ಸ್ಟೇಟ್ ಬ್ಯಾಂಕ್ ನಲ್ಲಿ ನಿತ್ಯವೂ ವ್ಯಾಪಾರವಿದೆ. ಇಲ್ಲಿನ ಸಂತೆಗಳಲ್ಲಿ ಉತ್ತರ ಕರ್ನಾಟಕದ ಸಾವಿರಾರು ಕುಟುಂಬಗಳು ಬದುಕಿನ ಹಾದಿ ಕಂಡುಕೊಂಡಿದೆ. ತಕ್ಷಣವೇ ಪಾಲಿಕೆ ರವಿವಾರದ ಸಂತೆ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.

ಇಂಟಕ್‍ನ ದ.ಕ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಮಾತನಾಡಿ ಕೊರೊನಾ ಸಂದರ್ಭ ನಾವು ಸರ್ಕಾರದ ನಿರ್ದೇಶನ ಪಾಲಿಸಿದ್ದೆವು. ಆ ಬಳಿಕ ಪಾಲಿಕೆ ಏಕಾಏಕಿ ರವಿವಾರ ಸಂತೆಗೆ ನಿರ್ಭಂಧ ಹೇರಿತ್ತು. ಈ ಬಗ್ಗೆ ಪಾಲಿಕೆ ಆಯುಕ್ತರಿಗೆ, ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ ಆದರು ಸಮಸ್ಯೆ ಬಗೆಹರಿದಿಲ್ಲ ಈಗಿನ ಆಡಳಿತ ಪಕ್ಷಕ್ಕೆ ಬಡವರ ಬಗ್ಗೆ ಕಾಳಜಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂಟಕ್ ಮುಖಂಡರಾದ ಅಬೂಬಕರ್ ಕೃಷ್ಣಾಪುರ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಯುವ ಇಂಟಕ್ ಕಾರ್ಯದರ್ಶಿ ದಿನಕರ್ ಶೆಟ್ಟಿ, ಜಯಕರ್ನಾಟಕ ಸಂಘಟನೆಯ ವೈ. ರಾಘವೇಂದ್ರ ರಾವ್, ಇನ್ನಿತರ ಪ್ರಮುಖ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Click to comment

Leave a Reply

Your email address will not be published. Required fields are marked *