Connect with us

Cinema

ಮಂಡ್ಯಕ್ಕೂ, ಎಸ್‍ಪಿಬಿಗೂ ಇದೆ ಅವಿನಾಭಾವ ಸಂಬಂಧ- ಶೂಟಿಂಗ್‍ನಲ್ಲಿ ಭಾಗಿಯಾಗಿದ್ದ ಸ್ವರ ಮಾಂತ್ರಿಕ

Published

on

ಮಂಡ್ಯ: ಗಾನಗಂಧರ್ವ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನದ ಸುದ್ದಿ ಕೇಳಿ ಕರ್ನಾಟಕ ಸೇರದಂತೆ ದೇಶದ ಕೋಟ್ಯಂತರ ಸಂಗೀತ ಪ್ರಿಯರು ದುಃಖಿತರಾಗಿದ್ದಾರೆ. ಎಸ್‍ಪಿಬಿ ಅವರು ಕೇವಲ ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲದೇ ತಮ್ಮ ನಟನೆಯ ಮೂಲಕ ಸಾಕಷ್ಟು ಮಂದಿಯ ಮನ ಗೆದ್ದಿದ್ದಾರೆ. ಇಂತಹ ಕಲಾವಿದರಿಗೂ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೂ ಒಂದು ನಂಟಿದೆ.

ಆಡು ಮುಟ್ಟದ ಸೊಪ್ಪಿಲ್ಲ, ಬಾಲಸುಬ್ರಹ್ಮಣ್ಯಂ ಅವರು ಹಾಡುಗಳನ್ನು ಕೇಳದ ಜನರಿಲ್ಲ. ದೇಶದ ಮೂಲೆ ಮೂಲೆಗಳಲ್ಲೂ ಬಾಲಸುಬ್ರಹ್ಮಣ್ಯಂ ಅವರ ಕಂಠ ಮೆಚ್ಚಿದ ಜನರು ಇದ್ದಾರೆ. ಬಾಲಸುಬ್ರಹ್ಮಣ್ಯಂ ಅವರು ಕೇವಲ ತಮ್ಮ ಕಂಠ ಸಿರಿಯಿಂದ ಮಾತ್ರವಲ್ಲ ತಮ್ಮ ನಟನೆಯಿಂದಲೂ ಸಾಕಷ್ಟು ಚಿತ್ರ ರಸಿಕರನ್ನು ಸೆಳೆದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಎಸ್.ಪಿ.ಬಿ ಅವರು ಎರಡು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಅವರೊಂದಿಗೆ ನಟನೆ ಮಾಡಿದ ಮಂಡ್ಯ ಮೂಲದ ವ್ಯಕ್ತಿಗಳು ಅವರ ನಟನೆಯ ಜೊತೆಗೆ ಅವರಲ್ಲಿನ ಗುಣಗಳನ್ನು ನೆನೆಯುತ್ತಿದ್ದಾರೆ. ಆ ಕ್ಷಣಗಳಲ್ಲಿ ಅವರೊಂದಿಗೆ ಇದ್ದ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.

1995 ರಲ್ಲಿ ತೆರೆಕಂಡಿರುವ ಬಾಳೊಂದು ಚದುರಂಗ ಚಲನಚಿತ್ರದಲ್ಲಿ ಎಸ್‍ಬಿ ಬಾಲಸುಬ್ರಹ್ಮಣ್ಯಂ ಅವರು ನಟನೆ ಮಾಡಿದ್ದರು. ಈ ಚಿತ್ರದಲ್ಲಿ ಕುಟುಂಬದರನ್ನು ಕಳೆದುಕೊಂಡು, ಅವರ ಆಶ್ರುತರ್ಪಣ ಬಿಡಲು ಬಾಲಸುಬ್ರಹ್ಮಣ್ಯಂ ಅವರು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಗೆ ಬಂದಿರುತ್ತಾರೆ. ಈ ವೇಳೆ ಜ್ಯೋತಿಷಿ ಭಾನುಪ್ರಕಾಶ್‍ಶರ್ಮ ಅವರು ನಟನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಾಲಸುಬ್ರಹ್ಮಣ್ಯಂ ಅವರು ನಡೆದುಕೊಂಡ ರೀತಿ ಮತ್ತು ಅವರ ಗುಣಗಳನ್ನು ಭಾನುಪ್ರಕಾಶ್ ಶರ್ಮ ಅವರು ನೆನೆಯುತ್ತಿದ್ದಾರೆ. ಇದಲ್ಲದೇ ಮುದ್ದಿನಮಾವ ಚಿತ್ರವೂ ಸಹ ಮಂಡ್ಯದ ಶೂಟಿಂಗ್ ಮಹದೇವಪುರದಲ್ಲಿ ನಡೆದಿದೆ. ಶೂಟಿಂಗ್ ವೇಳೆ ಸಾವಿರಾರು ಜನ ಬಾಲಸುಬ್ರಹ್ಮಣ್ಯಂ ಅವರನ್ನು ನೋಡಲು ಬಂದಿದ್ದನ್ನು ಇಲ್ಲಿನ ಜನರು ಮೆಲುಕು ಹಾಕುತ್ತಿದ್ದಾರೆ. ಇದಲ್ಲದೇ ಪಾಂಡವಪುರ ವ್ಯಾಪ್ತಿಯಲ್ಲಿ ನಡೆದ ಕನ್ನಡ ಜಾತ್ರೆಗೆ ಎಸ್‍ಪಿಬಿ ಅವರು ಕನ್ನಡ ಚಿತ್ರಗೀತೆಗಳನ್ನು ಹಾಡಿ ರಂಜಿಸಿದ್ದರು.

ಗಾನಗಂಧರ್ವ ಬಾಲಸುಬ್ರಹ್ಮಣ್ಯಂ ಅವರ ಗಾಯನ ಎಷ್ಟು ಪ್ರಸಿದ್ಧವೋ ಅಷ್ಟೇ ಅವರ ನಟನೆಯೂ ಸಹ ಪ್ರಸಿದ್ಧಿ ಪಡೆದುಕೊಂಡಿದೆ. ಬಾಲಸುಬ್ರಹ್ಮಣ್ಯಂ ಅವರು ನಮ್ಮಿಂದ ದೂರವಾದ್ರು ಸಹ ಅವರ ಕೊಡುಗೆಗಳು ಮಾತ್ರ ದೂರವಾಗುವುದಿಲ್ಲ.

Click to comment

Leave a Reply

Your email address will not be published. Required fields are marked *