Saturday, 7th December 2019

Recent News

ನಿಖಿಲ್ ಕುಮಾರಸ್ವಾಮಿ ಮಗ ಇದ್ದಂಗೆ, ಒಳ್ಳೆ ಹುಡ್ಗ- ಚಲುವರಾಯಸ್ವಾಮಿ

– ದೊಡ್ಡವರ ಸುಳ್ಳುಗಳಿಂದ ನಿಖಿಲ್‍ಗೆ ಸೋಲು

ಮಂಡ್ಯ: ಜೆಡಿಎಸ್ ಅನರ್ಹ ಶಾಸಕ ನಾರಾಯಣ ಗೌಡರ ಬಳಿಕ ಇದೀಗ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೆ.ಆರ್ ಪೇಟೆ ಉಪ ಚುನಾವಣೆ ಹೊಸ್ತಿಲಲ್ಲಿ ಮತ್ತೆ ನಿಖಿಲ್ ಕುಮಾರಸ್ವಾಮಿ ಅವರ ಸೋಲಿನ ಪರಾಮರ್ಶೆ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಒಳ್ಳೆಯ ಹುಡುಗ. ರಾಜಕಾರಣ ಮಾಡುವುದಕ್ಕೆ ಇನ್ನೂ ಸಮಯ ಇತ್ತು. ದೊಡ್ಡದಾಗಿ ಮೀಸೆ ತಿರುಗಿಸಿ ಕರೆತಂದು ಸೋಲಿಸಿದರು. ನಿಖಿಲ್ ಎಲ್ಲೋ ಒಂದು ಕಡೆ ರಾಜಕಾರಣ ಮಾಡುಕೊಳ್ಳುತ್ತಿದ್ದರು. ಅವರನ್ನು ಕರೆತಂದು ಸೋಲಿಸಿದರು. ಸಿ.ಎಸ್ ಪುಟ್ಟರಾಜು ಅವರೇ ಚುನಾವಣೆಯ ಜವಾಬ್ದಾರಿ ತೆಗೆದುಕೊಂಡಿದ್ದರು ಎಂದು ಹೇಳುವ ಮೂಲಕ ಪರೋಕ್ಷವಾಗಿ ನಿಖಿಲ್ ಸೋಲಿಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕಾರಣ ಎಂದು ಆರೋಪಿಸಿದರು.

ನನಗೂ ಕುಮಾರಸ್ವಾಮಿಗೂ ವೈರತ್ವ ಇದೆ. ಹಾಗಂತ ನಿಖಿಲ್ ಜೊತೆಗೂ ವೈರತ್ವ ಕಟ್ಟಿಕೊಳ್ಳೋದಕ್ಕೆ ಆಗುತ್ತಾ. ಅವನೂ ನನ್ನ ಮಗ ಇದ್ದಂಗೆ. ಸಿ.ಎಸ್ ಪುಟ್ಟರಾಜು ಮಂಡ್ಯ ಜಿಲ್ಲೆಯ ಪ್ರಶ್ನಾತೀತ ನಾಯಕರಾಗಿದ್ದಾರೆ. ರಾಜ್ಯಕ್ಕೆ ದೇವೇಗೌಡರು ಇದ್ದಂತೆ ಮಂಡ್ಯಕ್ಕೆ ಸಿ.ಎಸ್.ಪುಟ್ಟರಾಜು ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬುದ್ಧಿ ಕಲಿಸಿಲ್ವಾ? ಹಾಗೆ ನಾರಾಯಣಗೌಡರಿಗೂ ಜನ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.

ಪುಟ್ಟರಾಜು ಕ್ಷೇತ್ರದಲ್ಲಿ ನಿಖಿಲ್ ಗೆ ಎಷ್ಟು ಲೀಡ್ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಮಾಜಿ ಸಚಿವರು, ಸಚಿವರಾಗಿದ್ದಾಗ ಕುದುರೆ ಮೇಲಿದ್ರೆ ಮಾತಾಡ್ತಾರೆ ಅಂದುಕೊಂಡಿದ್ದೆವು. ಆದರೆ ಕುದುರೆ ಮೇಲಿಂದ ಇಳಿದ ಮೇಲೂ ಮಾತನಾಡೋದನ್ನ ಎಲ್ಲೂ ನೋಡಿಲ್ಲ. ಎರಡೂವರೆ ಲಕ್ಷ ಲೀಡ್ ಬರದಿದ್ದರೆ ರಾಜಕೀಯ ನಿವೃತ್ತಿ ಅಂದಿದ್ದರು. ಆ ಮೇಲೆ ತಮಾಷೆಗೆ ಅಂದೆ ಎಂದು ಹೇಳುತ್ತಾರೆ. ಈವಾಗ ಯಾಕೆ ಈ ವಿಚಾರ ಮಾತನಾಡಲ್ಲ. ರಾಜಕಾರಣದಲ್ಲಿರುವಾಗ ಮಾತಿನಲ್ಲಿ ಸ್ವಲ್ಪ ಹಿಡಿತವಿರಬೇಕು ಎಂದು ಪುಟ್ಟರಾಜು ವಿರುದ್ಧ ಮತ್ತೆ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.

8 ಸಾವಿರ ಕೋಟಿ ಕೊಟ್ಟಿದ್ದೀವಿ ಅಂತಾರೆ. ಎಲ್ಲಿ ಟೆಂಡರ್ ಆಗಿದೆ. ಯಾವ ಕೆಲಸ ಪ್ರಾರಂಭವಾಗಿದೆ. ಇದಕ್ಕೆಲ್ಲ ಕೆ.ಆರ್ ಪೇಟೆ ಚುನಾವಣೆಗೂ ಮುನ್ನ ಉತ್ತರ ಹೇಳಲೇ ಬೇಕು. ಕುಮಾರಸ್ವಾಮಿ ಅವರು 14 ತಿಂಗಳ ಅವಧಿಯಲ್ಲಿ ಮಂಡ್ಯಕ್ಕೆ 8 ಸಾವಿರ ಕೋಟಿ ಹಣ ಬಿಡುಗಡೆಯಾಗಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಈ ಹಿಂದೆ ನಾರಾಯಣ ಗೌಡ ಅವರು ಕೂಡ ನಿಖಿಲ್ ಸೋಲಿನ ಬಗ್ಗೆ ಪರಾಮರ್ಶೆ ಮಾಡಿದ್ದು, ಜೆಡಿಎಸ್ ವರಿಷ್ಠರ ಸುಳ್ಳಿನಿಂದ ನಿಖಿಲ್‍ಗೆ ಸೋಲಾಯಿತು ಎಂದಿದ್ದರು.

Leave a Reply

Your email address will not be published. Required fields are marked *