Crime
ಲೋಕಲ್ ಡೈರಿ ಎಲೆಕ್ಷನ್ ಘರ್ಷಣೆ- ಅಕ್ಕನನ್ನೇ ಎಳೆದಾಡಿ ತಮ್ಮ ಕಿರಿಕ್

ಮಂಡ್ಯ: ನಗರದಲ್ಲಿ ಲೋಕಲ್ ವಾರ್ ಕಾವೇರಿದ್ದು, ಸ್ಥಳೀಯ ಚುನಾವಣೆಯಲ್ಲಿ ಸಂಬಂಧಿಕರೇ ವೈರಿಗಳಾದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ನಡೆದಿದೆ.
ಗ್ರಾ.ಪಂ ಚುನಾವಣೆ ನಡುವೆ ಡೈರಿ ಚುನಾವಣೆಗೂ ಬಿಗ್ ಫೈಟ್ ನಡೆಯುತ್ತಿದೆ. ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವೇಳೆ ಈ ಗಲಾಟೆ ನಡೆದಿದೆ. ಚುನಾವಣೆಗಾಗಿ ಸ್ವಂತ ಕುಟುಂಬಸ್ಥರ ನಡುವೆ ಕಿತ್ತಾಟ ನಡೆದಿದೆ. ಎಲೆಕ್ಷನ್ ವಿಚಾರವಾಗಿ ಸ್ವಂತ ಅಕ್ಕನ ಮೇಲೆ ತಮ್ಮನೇ ಹಲ್ಲೆ ಮಾಡಿದ್ದಾನೆ.
ಸಹಕಾರ ಸಂಘದ ಸದಸ್ಯರಾಗಿರುವ ಶಾರದಮ್ಮಗೆ ಸಹೋದರ ರಾಜೇಗೌಡ ಬಂಕಾಪುರದ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿದ್ದನು. ಈ ವೇಳೆ ಶಾರದಮ್ಮ, ನಾನು ಬಂಕಾಪುರದ ಹೆಣ್ಣು ಮಗಳಾದರೂ ಮದುವೆ ಬಳಿಕ ಗೊಲ್ಲರಹಳ್ಳಿ ಸೊಸೆಯಾಗಿದ್ದೇನೆ. ಹೀಗಾಗಿ ನಾನು ನಿಮ್ಮೂರಿಗೆ ಬೆಂಬಲ ನೀಡಲ್ಲ ಎಂದು ಖಾರವಾಗಿಯೇ ತಿಳಿಸಿದ್ದಾರೆ.
ಅಕ್ಕನ ಮಾತಿನಿಂದ ಅಸಮಾಧಾನಗೊಂಡ ರಾಜೇಗೌಡ, ಶಾರದಮ್ಮ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ಚುನಾವಣೆಗೆ ತೆರಳದಂತೆ ಅಕ್ಕನನ್ನು ಹಿಡಿದು ಎಳೆದಾಡಿದ್ದಾನೆ. ಬಳಿಕ ಶಾರದಮ್ಮ ಪುತ್ರನ ಮಧ್ಯಪ್ರವೇಶದಿಂದ ಜಗಳ ಅಲ್ಲಿಗೆ ನಿಂತಿದೆ.
