Connect with us

Belgaum

ರಾತ್ರಿ ಮನೆ ಬಳಿ ನಿಂತಿದ್ದವ ಬರ್ಬರವಾಗಿ ಕೊಲೆಯಾದ

Published

on

ಬೆಳಗಾವಿ: ಎರಡು ಕುಟುಂಬದ ಮಧ್ಯೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಮಹಿಳೆ ಸೇರಿ ಆರು ಜನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಸಿದ್ರಾಯಿ ಕಣ್ಣಪ್ಪಾ ನಾಯ್ಕ್(30) ಕೊಲೆಯಾದ ದುರ್ದೈವಿ. ಈ ಘಟನೆ ಗುರುವಾರ ರಾತ್ರಿ ಸುಮಾರು 9 ಗಂಟೆಗೆ ನಡೆದಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಯಾಕೆಂದರೆ ಕೆಲವು ದಿನಗಳ ಹಿಂದೆ ಈತನ ಅಣ್ಣನ ಮೇಲೆ ಕೂಡ ಇದೇ ವ್ಯಕ್ತಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸಿದ್ರಾಯಿ ಮುತ್ಯಾನಟ್ಟಿಯಲ್ಲಿರುವ ತಮ್ಮ ಜಮೀನಲ್ಲಿ ಮಾವಿನ ತೋಟ ಮಾಡಿದ್ದನು. ಆ ತೋಟಕ್ಕೆ ಪ್ರತಿದಿನ ಆರೋಪಿಯ ಕುಟುಂಬದವರು ಕುರಿ ಮತ್ತು ಎಮ್ಮೆಗಳನ್ನು ಇವರಿಲ್ಲದ ಸಮಯದಲ್ಲಿ ಮೇಯಿಸಲು ಹೋಗುತ್ತಿದ್ದರು. ಈ ವಿಷಯ ತಿಳಿದ ಸಿದ್ರಾಯಿ ಜಮೀನಿನಲ್ಲಿ ಮೇಯಿಸದಂತೆ ಹೇಳಿದ್ದಾನೆ. ಆದರೆ ಇದಕ್ಕೆ ಕ್ಯಾರೇ ಅನ್ನದ ಆರೋಪಿ ಕುಟುಂಬದವರು ತಮ್ಮ ಹಳೇ ಚಾಳಿ ಮುಂದುವರಿಸಿದ್ದಾರೆ. ಪರಿಣಾಮ ಇವರ ನಡುವೆ ವಾದ ವಿವಾದ ನಡೆದಿದೆ.

ನಂತರ ಸಿದ್ರಾಯಿಯನ್ನು ಆರೋಪಿಗಳು ಗುರುವಾರ ರಾತ್ರಿ ಹುಡುಕಿಕೊಂಡು ಹೋಗಿದ್ದಾರೆ. ಅಲ್ಲದೆ ಸುಮಾರು 9 ಗಂಟೆಗೆ ಚವ್ಹಾಟಗಲ್ಲಿಯ ತಮ್ಮ ಮನೆಯ ಹತ್ತಿರ ನಿಂತಿದ್ದ ಸಿದ್ರಾಯಿಯ ಮೇಲೆ ಹಿಂದಿನಿಂದ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಕೊಲೆಯಲ್ಲಿ ಮಹಿಳೆಯರು ಭಾಗಿಯಾಗಿದ್ದರೆಂದು ಹೇಳಲಾಗುತ್ತಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.